ಬೆಳಗಾವಿ: ಖ್ಯಾತ ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್ ಅವರು ಗಡಿ ನಾಡು ಬೆಳಗಾವಿಗೆ ಬಂದಾಗಲೆಲ್ಲವೂ ಅಭಿಮಾನದ ಹೊಳೆಯಲ್ಲಿ ಮಿಂದು ಕನ್ನಡದ ಕಂಪು ಪಸರಿಸಿ ಹೋಗುತ್ತಿದ್ದರು.
ತಮ್ಮನ್ನು ನೋಡಲು ನೆರೆಯುತ್ತಿದ್ದ ಸಾವಿರಾರು ಅಭಿಮಾನಿಗಳನ್ನು ಹಾಡು, ಡೈಲಾಗ್‌ಗಳಿಂದ ರಂಜಿಸುತ್ತಿದ್ದರು. ಪ್ರೀತಿ ಹಂಚಿ ಹೋಗುತ್ತಿದ್ದರು. ತಾವು ನಾಯಕ ನಟನಾಗಿ ಅಭಿನಯಿಸಿರುವ ‘ಯುವರತ್ನ’ ಚಲನಚಿತ್ರದ ಪ್ರಚಾರಕ್ಕಾಗಿ ಇಲ್ಲಿಗೆ ಇದೇ ವರ್ಷದ ಮಾರ್ಚ್ 21ರಂದು ಅವರು ಬಂದಿದ್ದರು. ಕುಂದಾನಗರಿಯ ಬಗ್ಗೆ ಬಹಳ ಅಭಿಮಾನದ ಮಾತುಗಳನ್ನು ಆಡಿದ್ದರು. ಇಲ್ಲಿಗೆ ಅದೇ ಅವರ ಕೊನೆಯ ಭೇಟಿಯಾಯಿತು.
ನಗರದ ಕ್ಯಾಂಪ್ ಪ್ರದೇಶದಲ್ಲಿರುವ ‘ಚಂದನ್-ಐನಾಕ್ಸ್’ ಚಿತ್ರಮಂದಿರ ಆವರಣದಲ್ಲಿ ನಡೆದ ‘ಯುವ ಸಂಭ್ರಮ’ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರಿಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ನೀಡಿದ್ದರು. ಪುಷ್ಪದಳಗಳ ಮಳೆಗರೆದು, ಅಪ್ಪು ಅಪ್ಪು ಅಪ್ಪು ಎಂಬ ಸತತ ಘೋಷಣೆಗಳ ಮೂಲಕ ಸಂಭ್ರಮದಿಂದ ಬರಮಾಡಿಕೊಂಡಿದ್ದರು. ಅವರ ಅಭಿಮಾನಕ್ಕೆ ಮನಸೋತಿದ್ದ ಪುನೀತ್, ‘ಹಾಲಿನ ಹೊಳೆಯೊ, ಜೇನಿನ ಮಳೆಯೊ, ಸುಧೆಯೋ ಕನ್ನಡ ಸವಿ ನುಡಿಯೋ’ ಹಾಡನ್ನು ಮಳೆಯ ನಡುವೆಯೂ ಹಾಡಿ ರಂಜಿಸಿದ್ದರು. ಹಾಡಿ ಮತ್ತು ಡೈಲಾಗ್ ಹೇಳಿ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದರು.
ಮಳೆಯ ನಡುವೆಯೂ:ಅವರು ವೇದಿಕೆ ಏರುತ್ತಿದ್ದಂತೆಯೇ ಮಳೆಯ ಸಿಂಚನವಾಯಿತು. ಈ ನಡುವೆ ಅಭಿಮಾನಿಗಳು ಪುಷ್ಟ ವೃಷ್ಟಿಯನ್ನೂ ಮಾಡುತ್ತಿದ್ದರು. ಇದನ್ನು ಗಮನಿಸಿದ ಪುನೀತ್ ತಂದೆ ಡಾ.ರಾಜಕುಮಾರ ಅವರ ಹಾಡು ಹಾಡಿದ್ದರು. ಬಳಿಕ ಅಭಿಮಾನಿಗಳ ಒತ್ತಾಯದ ಮೇರೆಗೆ ‘ಯುವರತ್ನ’ ಚಲನಚಿತ್ರದ ‘ಫಸ್ಟ್ ಬೆಂಚಲ್ಲಿ ಕುಂತರೆ ಬೋರ್ಡ್ ಮಾತ್ರ ಕಾಣ್ಸುತ್ತೆ, ಲಾಸ್ಟ್ ಬೆಂಚಲ್ಲಿ ಕುಂತರೆ ಇಡೀ ವರ್ಲ್ಡ್ ಕಾಣುತ್ತೆ’ ಎನ್ನುವ ಡೈಲಾಗ್ ಹೇಳಿ ಖುಷಿಪಡಿಸಿದ್ದರು.
‘ಕುಂದಾನಗರಿ, ರಾಣಿ ಚನ್ನಮ್ಮ, ಸಂಗೊಳ್ಳಿರಾಯಣ್ಣನ ಊರಾದ ಬೆಳಗಾವಿಗೆ ಬರುವುದಕ್ಕೆ ಬಹಳ ಖುಷಿ ಆಗುತ್ತದೆ. ನಾವು ಬಂದ ಕೂಡಲೇ ಮಳೆ ಬಂತು. ಇದು ಶುಭ ಶಕುನ’ ಎಂದಿದ್ದರು. ಜೈ ಕರ್ನಾಟಕ ಹಾಗೂ ಜೈ ಬೆಳಗಾವಿ ಎಂದು ಘೋಷಣೆ ಕೂಗಿದ್ದರು. ‘ನೀವು ನನ್ನ ಮೇಲಿಟ್ಟಿರುವ ಪ್ರೀತಿ–ವಿಶ್ವಾಸ ದೊಡ್ಡದು. ನಿಮಗೋಸ್ಕರ ಚಿತ್ರದಲ್ಲಿ ಬಹಳ ಡ್ಯಾನ್ಸ್ ಮಾಡಿದ್ದೇನೆ. ನೋಡಿ ನಮ್ಮೆಲ್ಲರನ್ನೂ ಹರಸಿ’ ಎಂದು ಕೋರಿ ಶಿರಬಾಗಿ ನಮಿಸಿದ್ದರು.
ಚನ್ನಮ್ಮ ವೃತ್ತದಲ್ಲಿ ಜನಸ್ತೋಮ:ಪುನೀತ್ ಅವರನ್ನು ಕರವೇ (ಪ್ರವೀಣ್‌ಶೆಟ್ಟಿ ಬಣ) ಜಿಲ್ಲಾ ಘಟಕದ ಅಧ್ಯಕ್ಷ ಮಹಾಂತೇಶ ರಣಗಟ್ಟಿಮಠ, ದಂಡು ಮಂಡಳಿಯ ಶಾಜಿದ್ ಶೇಖ್, ಐನಾಕ್ಸ್ ಚಿತ್ರಮಂದಿರದವರು ಸತ್ಕರಿಸಿದ್ದರು.
ಚಲನಚಿತ್ರ ನಟರಾದ ಧನಂಜಯ, ರವಿಶಂಕರ್‌ಗೌಡ,ಚಿತ್ರದ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಜೊತೆಯಲ್ಲಿ ಬಂದಿದ್ದ ಅವರಿಗೆ ಸಾಂಬ್ರಾ ವಿಮಾನನಿಲ್ದಾಣದಲ್ಲೂ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ ಸಿಕ್ಕಿತ್ತು. ಸೆಲ್ಫಿ ಕ್ಕಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದರು.
‘ದೊಡ್ಮನೆ ಹುಡ್ಗ’ ಚಲನಚಿತ್ರದ ಪ್ರಚಾರಾರ್ಥ ಅವರು 2016ರ ಅ.8ರಂದು ನಗರಕ್ಕೆ ಬಂದಿದ್ದರು. ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದ ಅವರನ್ನು ಅಭಿಮಾನಿಗಳು ‘ನಿರ್ಮಲಾ’ ಚಿತ್ರಮಂದಿರದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕರೆದೊಯ್ದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.