ADVERTISEMENT

ಪುನೀತ್‌ ರಾಜ್‌ಕುಮಾರ್‌ ಪುಣ್ಯಸ್ಮರಣೆ: ಮಿಂಚಿ ಮಾಯವಾದ ಮಂದಹಾಸ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2024, 4:11 IST
Last Updated 29 ಅಕ್ಟೋಬರ್ 2024, 4:11 IST
   

ಬೆಂಗಳೂರು: ಚಂದನವನದ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರು ಅಗಲಿ ಮೂರು ವರ್ಷಗಳು ಉರುಳಿವೆ. 3ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆ ಅಪ್ಪು ಸಮಾಧಿಗೆ ಅವರು ಕುಟುಂಬಸ್ಥರು ಪೂಜೆ ಸಲ್ಲಿಸಲಿದ್ದಾರೆ.

2021ರ ಅ.29ರಂದು ಪುನೀತ್‌ ಅವರ ಅಕಾಲಿಕ ನಿಧನ ಅಭಿಮಾನಿಗಳನ್ನು ಒಳಗೊಂಡಂತೆ ಇಡೀ ಕನ್ನಡ ಚಿತ್ರರಂಗವನ್ನು ಆಘಾತಕ್ಕೆ ದೂಡಿತ್ತು. ಇದಾಗಿ 3 ವರ್ಷ ಕಳೆದಿದ್ದು, ಅವರ ಸಮಾಧಿಗೆ ಭೇಟಿ ನೀಡುವ ಅಭಿಮಾನಿಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ.

ಮತ್ತೆ ಉಸಿರಾಡಿದ ಅಪ್ಪು:

2021ರ ಅ.29ರಂದು ಪುನೀತ್‌ ಅವರ ಅಕಾಲಿಕ ನಿಧನ ಇಡೀ ಕನ್ನಡ ಚಿತ್ರರಂಗವನ್ನು ಆಘಾತಕ್ಕೆ ದೂಡಿತ್ತು. ಈ ಆಘಾತದಿಂದ ಹೊರಕ್ಕೆ ಬರಲು ತಿಂಗಳುಗಳೇ ಬೇಕಾದವು. ಈ ಸಂದರ್ಭದಲ್ಲಿ ಪುನೀತ್‌ ಅವರ ಮೂರು ಪ್ರಾಜೆಕ್ಟ್‌ಗಳು ಅಂತಿಮ ಹಂತದಲ್ಲಿದ್ದವು. ಅವರು ಹೀರೊ ಆಗಿ ಕಾಣಿಸಿಕೊಂಡ ಕೊನೆಯ ಕಮರ್ಷಿಯಲ್‌ ಸಿನಿಮಾ, ಚೇತನ್‌ ಕುಮಾರ್‌ ನಿರ್ದೇಶನದ ‘ಜೇಮ್ಸ್‌’ 2022ರಲ್ಲಿ ಪುನೀತ್‌ ಅವರ ಜನ್ಮದಿನದಂದು (ಮಾರ್ಚ್‌ 17) ತೆರೆಕಂಡಿತ್ತು.

ADVERTISEMENT

ಕರ್ನಾಟಕ ಸೇರಿದಂತೆ ವಿಶ್ವವ್ಯಾಪಿ ಒಟ್ಟು 4 ಸಾವಿರಕ್ಕೂ ಅಧಿಕ ತೆರೆಗಳಲ್ಲಿ ಸಿನಿಮಾ ಪ್ರದರ್ಶನ ಕಂಡಿದ್ದು ದಾಖಲೆ. ಬಾಕ್ಸ್‌ ಆಫೀಸ್‌ನಲ್ಲೂ ಸಿನಿಮಾ ₹100 ಕೋಟಿ ಕ್ಲಬ್‌ ಸೇರಿತ್ತು. ಡಬ್ಬಿಂಗ್‌ ಪೂರ್ಣಗೊಳ್ಳುವ ಮೊದಲೇ ಪುನೀತ್‌ ಅವರು ನಿಧನರಾದ ಕಾರಣ ನಟ ಶಿವರಾಜ್‌ಕುಮಾರ್‌ ಅವರು ಪುನೀತ್‌ ಅವರ ಪಾತ್ರಕ್ಕೆ ಧ್ವನಿ ನೀಡಿದ್ದರು. ನೂತನ ತಂತ್ರಜ್ಞಾನವನ್ನು ಬಳಸಿಕೊಂಡು ಪುನೀತ್‌ ಅವರ ಧ್ವನಿಯನ್ನೇ ಪುನರ್‌ರೂಪಿಸಿ, ಏಪ್ರಿಲ್‌ನಲ್ಲಿ ಈ ಸಿನಿಮಾ ರಿ–ರಿಲೀಸ್‌ ಕಂಡಿತು.

ಇದಾದ ಬಳಿಕ ಡಾರ್ಲಿಂಗ್‌ ಕೃಷ್ಣ ನಾಯಕನಾಗಿ ನಟಿಸಿದ ‘ಲಕ್ಕಿಮ್ಯಾನ್‌’ ಸಿನಿಮಾ ತೆರೆಕಂಡಿತು. ಇದರಲ್ಲಿ ದೇವರ ಪಾತ್ರದಲ್ಲೇ ಪುನೀತ್‌ ಅವರು ಕಾಣಿಸಿಕೊಂಡಿದ್ದು ಕಾಕತಾಳೀಯ! ಅಪ್ಪುವಿನಲ್ಲಿ ದೇವರನ್ನು ಕಂಡಿದ್ದ ಅಭಿಮಾನಿಗಳು ಈ ಚಿತ್ರವನ್ನು ದೇವರೇ ಎದುರಿಗೆ ಬಂದಂತೆ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.