ಅದು 2021ರ ಅಕ್ಟೋಬರ್ 31. ಸೂರ್ಯ ಇನ್ನೂ ಕಣ್ಣುಬಿಟ್ಟಿರಲಿಲ್ಲ. ಕಂಠೀರವ ಸ್ಟುಡಿಯೊ ಆವರಣದಲ್ಲಿ ನೋವು, ಅಳು, ಆಘಾತದ ಕಾರ್ಮೋಡ ಕವಿದಿತ್ತು. ಅಪ್ಪ–ಅಮ್ಮನ ಮಡಿಲಲ್ಲಿ ಪ್ರೀತಿಯ ಪುತ್ರ, ಅಭಿಮಾನಿಗಳ ನೆಚ್ಚಿನ ‘ಅಪ್ಪು’ ಮಣ್ಣಾಗಿದ್ದರು. ಇದೆಲ್ಲ ಮುಗಿಯುವ ಹೊತ್ತಿಗೆ ಬೆಳಕಾದರೂ ಅಲ್ಲಿ ಕತ್ತಲೆಯೇ ಆವರಿಸಿತ್ತು. ಆದರೆ, ಇಂದು ಈ ಜಾಗ ಹಲವರ ಬಾಳಿಗೆ ಬೆಳಕಾಗಿದೆ. ಅಪ್ಪುವನ್ನು ಕಣ್ತುಂಬಿಕೊಳ್ಳುವ ಸ್ಥಳವಾಗಿದೆ.
ನಟ ಪುನೀತ್ ರಾಜ್‌ಕುಮಾರ್ ಅಗಲಿ ಒಂದು ವರ್ಷಕಳೆದಿದೆ. ಆದರೆ, ‘ಅಪ್ಪು’ ನೆನಪು ಪ್ರತಿಯೊಬ್ಬರ ಮನಸ್ಸಿನಲ್ಲಿ ಇನ್ನೂ ಹಸಿರಾಗಿದೆ. ಕಂಠೀರವ ಸ್ಟುಡಿಯೊದಲ್ಲಿರುವ ಪುನೀತ್ ಅವರ ಸಮಾಧಿಯನ್ನು ನೋಡಲು ಪ್ರತಿನಿತ್ಯವು ಆಗಮಿಸುತ್ತಿರುವ ಜನರ ಸಂಖ್ಯೆಯೇ ಇದಕ್ಕೆ ಸಾಕ್ಷ್ಯ. ನವೆಂಬರ್ ಮೊದಲೆರಡು ವಾರದಲ್ಲಿ ಪ್ರತಿನಿತ್ಯ ಲಕ್ಷಕ್ಕೂ ಅಧಿಕ ಜನರು ಸಮಾಧಿಗೆ ಭೇಟಿ ನೀಡಿ ಅಪ್ಪುವನ್ನು ಕಣ್ತುಂಬಿಕೊಂಡಿದ್ದಾರೆ. ಇದಾದ ಬಳಿಕ ಪ್ರತಿನಿತ್ಯವೂ ಕನಿಷ್ಠ ಐದರಿಂದ ಹತ್ತು ಸಾವಿರ ಜನರು ಅಪ್ಪು ಸಮಾಧಿಗೆ ಭೇಟಿ ನೀಡುತ್ತಿದ್ದಾರೆ. ವಾರಾಂತ್ಯದಲ್ಲಂತೂ ಈ ಸಂಖ್ಯೆ ದುಪ್ಪಟ್ಟಾಗುತ್ತಿದೆ.
ಹಲವರ ಬಾಳಿಗೆ ಬೆಳಕು: ‘ಇಲ್ಲಿ ವ್ಯಾಪಾರ ಆರಂಭಿಸಿ ಎರಡು ತಿಂಗಳಾಗುತ್ತಾ ಬಂತು. ಈ ಜಾಗ ನನ್ನಂತಹ ನೂರಾರು ಜನರಿಗೆ ಜೀವನ ನೀಡಿದೆ. ಪ್ರತಿನಿತ್ಯ ಕನಿಷ್ಠ 200–300 ಟಿ–ಶರ್ಟ್‌ಗಳನ್ನು ಮಾರಾಟ ಮಾಡುತ್ತಿದ್ದೇನೆ. ನನ್ನಂತ ವ್ಯಾಪಾರಿಯಿಂದ ಟಿ–ಶರ್ಟ್ ಪ್ರಿಂಟಿಂಗ್ ಕಾರ್ಖಾನೆಯಲ್ಲಿ ನೂರು ಜನರಿಗೆ ಕೆಲಸ ಸಿಕ್ಕಿದೆ. ಒಟ್ಟಿನಲ್ಲಿ ಅಪ್ಪು ನಮಗೆ ಅನ್ನ ನೀಡುತ್ತಿದ್ದಾರೆ’ –ಇದು ಪುನೀತ್ ಅಭಿಮಾನಿ, ವ್ಯಾಪಾರಿ ಚಂದ್ರು ಅವರ ಮಾತು.
ಕಂಠೀರವ ಸ್ಟುಡಿಯೊ ಹೊರಭಾಗದಲ್ಲಿ ಚಂದ್ರು ಅವರಂಥ ನೂರಾರು ವ್ಯಾಪಾರಿಗಳು ಇಂದು ಬದುಕು ಕಟ್ಟಿಕೊಂಡಿದ್ದಾರೆ. ಇವರಲ್ಲಿ ಕನಿಷ್ಠ 60–70 ಜನರು ಮೊಬೈಲ್ ಕವರ್ ವ್ಯಾಪಾರಿಗಳು. ಪುನೀತ್ ಅವರ ಭಾವಚಿತ್ರವನ್ನು ಕ್ಷಣಮಾತ್ರದಲ್ಲಿ ಮೊಬೈಲ್ ಹಿಂಭಾಗದಲ್ಲಿ ಅಂಟಿಸಿ, ಅಭಿಮಾನಿಗಳನ್ನು ಖುಷಿ ಪಡಿಸುತ್ತಾ ನಿತ್ಯವೂ ಜೀವನ ಸಾಗಿಸುತ್ತಿರುವವರು. ಮಕ್ಕಳ ಆಟಿಕೆ ಮಾರುವವರು ಒಂದಿಷ್ಟು ಜನ.ನೆಚ್ಚಿನ ಅಪ್ಪುವನ್ನು ನೋಡಲು ಬರುವ ಅಭಿಮಾನಿಗಳ ಕೈಗೆ ಗುಲಾಬಿಯನ್ನಿತ್ತು, ಅಪ್ಪು ಫೋಟೊಗಳನ್ನು ಮಾರಿ ಜೀವನ ನಡೆಸುವವರು ಮತ್ತೊಂದಿಷ್ಟು ಜನ. ಹೀಗೆ ಕಂಠೀರವ ಸ್ಟುಡಿಯೊ ಹೊರಭಾಗದ ಸರ್ವೀಸ್ ರಸ್ತೆ ಹಲವರ ಬದುಕಿನ ದಾರಿಯಾಗಿದೆ.
ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.