ಕಳೆದ ಮಾರ್ಚ್ 17ರಂದು ತೆರೆಕಂಡು ಕಲೆಕ್ಷನ್‌ನಲ್ಲಿ ದಾಖಲೆ ಬರೆದಿರುವ ನಟ ದಿವಂಗತ ಪುನೀತ್ ರಾಜ್‌ಕುಮಾರ್ ನಟನೆಯ ‘ಜೇಮ್ಸ್’ ಏ.14ರಂದು ಸೋನಿ ಲಿವ್ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ.
ಚೇತನ್ ಕುಮಾರ್ ನಿರ್ದೇಶನದ ‘ಜೇಮ್ಸ್’, ಬಿಡುಗಡೆಯಾದ ನಾಲ್ಕೇ ದಿನಗಳಲ್ಲೇ ₹100 ಕೋಟಿ ಕ್ಲಬ್ ಸೇರಿತ್ತು. ಕರ್ನಾಟಕದಲ್ಲೇ 386 ಏಕಪರದೆ ಚಿತ್ರಮಂದಿರ ಹಾಗೂ ಎಲ್ಲ ಮಲ್ಟಿಪ್ಲೆಕ್ಸ್‌ಗಳು ಸೇರಿದಂತೆ ವಿಶ್ವವ್ಯಾಪಿ ಒಟ್ಟು 4 ಸಾವಿರಕ್ಕೂ ಅಧಿಕ ತೆರೆಗಳಲ್ಲಿ ‘ಜೇಮ್ಸ್’ ಪ್ರದರ್ಶನ ಕಂಡಿತ್ತು. ಚಿತ್ರ ಬಿಡುಗಡೆಗೂ ಮೊದಲೇ ಡಿಜಿಟಲ್ ಹಕ್ಕನ್ನು ₹40 ಕೋಟಿಗೆ ಸೋನಿ ಲಿವ್ ಪಡೆದಿತ್ತು. ಸೋನಿ ಲಿವ್‌ನಲ್ಲಿ ಜೇಮ್ಸ್ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಪ್ರಸಾರವಾಗಲಿದೆ.
ವೂಟ್‌ನಲ್ಲಿ ‘ನೀರ್‌ದೋಸೆ’: ನವರಸ ನಾಯಕ ಜಗ್ಗೇಶ್ ನಟನೆಯ ‘ನೀರ್‌ದೋಸೆ’ ಮಾ.31ರಂದು ವೂಟ್ ಸೆಲೆಕ್ಟ್‌ನಲ್ಲಿ ಬಿಡುಗಡೆಯಾಗಿದೆ.
2016ರಲ್ಲಿ ಬಿಡುಗಡೆಯಾಗಿದ್ದ ವಿಜಯಪ್ರಸಾದ್ ನಿರ್ದೇಶನದ ಈ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಸ್ಮಶಾನದ ವ್ಯಾನಿನ ಚಾಲಕನಾಗಿರುವ ಜಗ್ಗೇಶ್ ಹಾಗೂ ನಿವೃತ್ತ ಜೀವನ ಕಳೆಯುತ್ತಿರುವ ದತ್ತಣ್ಣರ ಬದುಕಿನಲ್ಲಿ ವೇಶ್ಯೆಯೊಬ್ಬಳ ಪ್ರವೇಶ ಏನೆಲ್ಲಾ ಅನಿರೀಕ್ಷಿತ ಪ್ರಸಂಗಗಳನ್ನು ಸೃಷ್ಟಿಸಿತು ಎಂಬುವುದು ಚಿತ್ರದ ಕಥೆ.ವಿಜಯಪ್ರಸಾದ್ ನಿರ್ದೇಶನವೆಂದರೆ ಅಲ್ಲಿ ಕಚಗುಳಿ ಇಡುವ, ಡಬಲ್ ಮೀನಿಂಗ್ ಎನಿಸಿದರೂ, ಅರ್ಥಭರಿತ ಸಂಭಾಷಣೆಗಳೇ ಹೈಲೈಟ್. ‘ನೀರ್‌ದೋಸೆ’ ಹಳತ್ತಾದರೂ, ಒಟಿಟಿ ವೇದಿಕೆ ಮೂಲಕ ಮತ್ತೆ ಖಾರಚಟ್ನಿಯೊಂದಿಗೆ ಪ್ರೇಕ್ಷಕರೆದುರಿಗೆ ಬರುತ್ತಿದೆ.
ಅಮೆಜಾನ್ ಪ್ರೈಂನಲ್ಲಿ ‘ರಾಧೆ ಶ್ಯಾಮ್’: ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯದ ‘ರಾಧೆ ಶ್ಯಾಮ್’ ಏಪ್ರಿಲ್ 1ರಂದು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಯಾಗಲಿದೆ. ರಾಧಾ ಕೃಷ್ಣ ಕುಮಾರ್ ನಿರ್ದೇಶನದ ‘ರಾಧೆ ಶ್ಯಾಮ್’ ಸಿನಿಮಾ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ಒಟಿಟಿ ಮೂಲಕ ದೊರೆಯಲಿದೆ. ಈ ಚಿತ್ರದಲ್ಲಿ ಪ್ರಭಾಸ್, ವಿಕ್ರಮ ಆದಿತ್ಯ ಪಾತ್ರದಲ್ಲಿ ಮತ್ತು ಪೂಜಾ ಹೆಗ್ಡೆ ಪ್ರೇರಣಾ ಪಾತ್ರದಲ್ಲಿ ನಟಿಸಿದ್ದಾರೆ.
‘ಮುಬಿ’ಯಲ್ಲಿ ‘ಡ್ರೈವ್ ಮೈ ಕಾರ್’: ಇತ್ತೀಚೆಗೆ ನಡೆದ 94ನೇ ಅಕಾಡೆಮಿ ಪ್ರಶಸ್ತಿಯಲ್ಲಿ ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಬಾಚಿಕೊಂಡಿದ್ದ ರ್‍ಯುಸೂಕೆ ಹಮಗೂಚಿ ನಿರ್ದೇಶನದ ‘ಡ್ರೈವ್ ಮೈ ಕಾರ್’ ಸಿನಿಮಾ ಏ.1ರಿಂದ ‘ಮುಬಿ’ ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗಲಿದೆ. ಇಂಗ್ಲೆಂಡ್, ಲ್ಯಾಟಿನ್ ಅಮೆರಿಕ, ಭಾರತ, ಮಲೇಷಿಯಾ ಸೇರಿದಂತೆ ಕೆಲ ರಾಷ್ಟ್ರಗಳಲ್ಲಷ್ಟೇ ಇದು ವೀಕ್ಷಣೆಗೆ ಸಿಗಲಿದೆ ಎಂದು ಮುಬಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.