ಬೆಂಗಳೂರು: ‘ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆಯನ್ನು ಶೇ 50 ನಿರ್ಬಂಧಿಸಿರುವುದನ್ನು ರದ್ದುಗೊಳಿಸಿ. ಪೂರ್ಣ ಪ್ರಮಾಣದಲ್ಲಿ ಚಿತ್ರಮಂದಿರಗಳ ಭರ್ತಿಗೆ ಅವಕಾಶ ನೀಡಿ’ ಎಂದು ನಟ ಪುನೀತ್ ರಾಜ್‌ಕುಮಾರ್ ಅವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿದ ಪುನೀತ್,‘ಮಾಲ್‌ಗಳಲ್ಲಿ, ಚಿತ್ರಮಂದಿರಗಳಲ್ಲಿ ಜನರು ಸರ್ಕಾರದ ನಿಯಮಗಳನ್ನು ಪಾಲಿಸಿಯೇ ಸಿನಿಮಾ ನೋಡುತ್ತಿದ್ದಾರೆ. ದಯವಿಟ್ಟು, ನಿರ್ಬಂಧ ಹಾಕಬೇಡಿ. ಚಿತ್ರರಂಗಕ್ಕೆ ಇದು ಕಷ್ಟವಾಗಲಿದೆ. ಇಂತಹ ನಿರ್ಧಾರ ಜನರಲ್ಲಿ ಹೆಚ್ಚಿನ ಭಯ ಮೂಡಿಸಲಿದೆ’ ಎಂದರು.
‘ಪ್ರಸ್ತುತ ಸಂದರ್ಭದಲ್ಲಿ ಸುರಕ್ಷತೆ ಎನ್ನುವುದು ಮುಖ್ಯ. ಜೊತೆಗೆ ಜೀವನವೂ ಸಾಗಿಸಬೇಕು. ಪ್ರತಿಯೊಬ್ಬರು ಮಾಸ್ಕ್ ಧರಿಸಿ. ಚಿತ್ರಮಂದಿರಕ್ಕೆ ಹೋದಾಗಲೂ ಮಾಸ್ಕ್ ಧರಿಸಿ, ಕೈಗಳನ್ನು ಸ್ಯಾನಿಟೈಸ್ ಮಾಡಿ’ ಎಂದು ಪುನೀತ್ ಪ್ರೇಕ್ಷಕರಲ್ಲಿ ಮನವಿ ಮಾಡಿದ್ದಾರೆ.
‘ಆಘಾತ ಆಗಿದೆ’
‘ಜನರು ಕುಟುಂಬ ಸಮೇತರಾಗಿ ಬಂದು ಚಿತ್ರಗಳನ್ನು ನೋಡುತ್ತಿದ್ದಾರೆ. ಎಲ್ಲರೂ ತಮ್ಮ ತಮ್ಮ ಸುರಕ್ಷತೆಯನ್ನು ಕಾಪಾಡಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಿನಿಮಾ ಇಷ್ಟೊಂದು ಚೆನ್ನಾಗಿ ನಡೆಯುತ್ತಿರುವಾಗ ಈ ನಿರ್ಬಂಧ ಸೂಕ್ತವಲ್ಲ’ ಎಂದು ನಿರ್ದೇಶಕ ಸಂತೋಷ್ ಆನಂದರಾಮ್ ಸರ್ಕಾರದ ನಿರ್ಧಾರವನ್ನು ವಿರೋಧಿಸಿದ್ದಾರೆ.
‘ಎಲ್ಲ ಕಡೆ ಚುನಾವಣೆ ರ್‍ಯಾಲಿ, ಹಲವು ಕಾರ್ಯಕ್ರಮಗಳು ನಡೆಯುತ್ತಿದೆ. ಇದರ ನಡುವೆ ಸಿನಿಮಾವನ್ನು ಮಾತ್ರ ಗುರಿಯಾಗಿಸಿ ಏಕೆ ನಿರ್ಬಂಧ ಹಾಕಲಾಗುತ್ತಿದೆ. ಚಿತ್ರಮಂದಿರದೊಳಗೆ ಕೇವಲ 500–600 ಜನರಷ್ಟೇ ಇರುತ್ತಾರೆ. ಎಲ್ಲರೂ ಮಾಸ್ಕ್ ಧರಿಸಿಯೇ ಚಿತ್ರಗಳನ್ನು ನೋಡುತ್ತಿದ್ದಾರೆ. ಧೈರ್ಯವಾಗಿ ಚಿತ್ರಮಂದಿರಕ್ಕೆ ಜನರು ಬರುತ್ತಿದ್ದಾರೆ. ಎರಡೆರಡು ಇಂಟರ್‌ವಲ್‌ಗಳು ಇವೆ. ಏಕಾಏಕಿ ಈ ನಿರ್ಬಂಧ ಹೇರಿರುವುದು, ಉದ್ಯಮ, ಚಿತ್ರರಂಗವನ್ನು ನಡುನೀರಿನಲ್ಲಿ ಕೈಬಿಟ್ಟಂತಾಗಿದೆ. ಮುಂದೆ ನಿರ್ಮಾಪಕರ ಪರಿಸ್ಥಿತಿ ಏನು. ಇದು ದುಃಖಕರವಾದ ವಿಷಯ. ಒಳ್ಳೆಯ ಸಿನಿಮಾವನ್ನು ನಾವೇ ಹಾಳುಮಾಡಿದಂತಾಗಿದೆ. ಜನರ ಬೆಂಬಲ ಇರುವಾಗ ಸರ್ಕಾರವೂ ಬೆಂಬಲಕ್ಕೆ ನಿಲ್ಲಬೇಕು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.