ಬಿಡುಗಡೆಯಾದ ಮೊದಲ ವಾರದಲ್ಲೇ ಪುನೀತ್ ರಾಜ್‌ಕುಮಾರ್ ನಟನೆಯ ‘ಯುವರತ್ನ’ ಚಿತ್ರವು ಒಟಿಟಿ ವೇದಿಕೆಗೆ ಲಗ್ಗೆ ಇಟ್ಟಿದೆ. ಏಪ್ರಿಲ್ 9ರಿಂದ ಅಮೆಜಾನ್ ಪ್ರೈಂನಲ್ಲಿ ಈ ಚಿತ್ರವು ವೀಕ್ಷಣೆಗೆ ದೊರೆಯಲಿದೆ.
ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಚಿತ್ರದ ನಿರ್ದೇಶಕ ಸಂತೋಷ್ ಆನಂದರಾಮ್, ‘ಏ.9ರಿಂದ ಚಿತ್ರವು ಅಮೆಜಾನ್ ಪ್ರೈಂನಲ್ಲಿ ಬರಲಿದೆ. ರಾಜ್ಯದಲ್ಲಿ ಪ್ರಸ್ತುತ ಇರುವ ಪರಿಸ್ಥಿತಿ, ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ನಿರ್ಬಂಧದ ಕಾರಣ ನಾವು ಒಮ್ಮತದಿಂದ ಒಟಿಟಿಗೆ ವೇದಿಕೆಯಲ್ಲಿ ಚಿತ್ರ ಬಿಡುಗಡೆ ನಿರ್ಧಾರ ಮಾಡಿದೆವು. ಸರ್ಕಾರದ ಆದೇಶ ಪಾಲಿಸುವುದು ನಮ್ಮ ಸಾಮಾಜಿಕ ಜವಾಬ್ದಾರಿ. ಜೊತೆಗೆ ಸಿನಿಮಾವನ್ನು ಜನರಿಗೆ ತಲುಪಿಸುವುದೂ ನಮ್ಮ ಆದ್ಯತೆ. ಚಿತ್ರಮಂದಿರದ ಮಾಲೀಕರು ಚಿತ್ರದ ಕಲೆಕ್ಷನ್‌ನಿಂದ ಖುಷಿಯಾಗಿದ್ದಾರೆ. ಚಿತ್ರಮಂದಿರಗಳಲ್ಲೂ ಚಿತ್ ಪ್ರದರ್ಶನ ಮುಂದುವರಿಯಲಿದ್ದು, ಪ್ರೈಂನಲ್ಲೂ ಇದು ಬರಲಿದೆ’ ಎಂದು ಮಾಹಿತಿ ನೀಡಿದ್ದಾರೆ.
‘ಈ ನಿರ್ಧಾರ ನಮಗೂ ಆಶ್ಚರ್ಯತರಿಸಿದೆ. ಇಂತಹ ಸ್ಥಿತಿ ಬರಬಹುದು ಎನ್ನುವ ಯೋಚನೆ ಮಾಡಿರಲಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಜನರು ಸಿನಿಮಾದ ಕುರಿತು ನೀಡುತ್ತಿರುವ ಅಭಿಪ್ರಾಯವನ್ನು ಪರಿಗಣಿಸಿ, ತಂಡವಾಗಿ ಈ ನಿರ್ಧಾರ ಕೈಗೊಂಡೆವು’ ಎಂದು ಹೇಳಿದರು.
‘ಅಮೆಜಾನ್‌ನಲ್ಲಿ ಪ್ರಸಾರವಾಗುತ್ತಿರುವ ನನ್ನ ಮೊದಲ ಸಿನಿಮಾ ಇದು. ಎರಡು ತಿಂಗಳ ಹಿಂದೆಯಷ್ಟೇ ಚಿತ್ರದ ಚಿತ್ರೀಕರಣ ಮುಗಿದಿತ್ತು. ಚಿತ್ರ ಬಿಡುಗಡೆಯಾದ ಮೊದಲ ದಿನವೇ ಜನರ ಪ್ರತಿಕ್ರಿಯೆ ಅದ್ಭುತವಾಗಿತ್ತು. ಇದರಿಂದ ಬಹಳ ಖುಷಿಪಟ್ಟಿದೆ. ಆದರೆ ನಂತರ ಬದಲಾದ ಸ್ಥಿತಿಯಿಂದ ಬೇಜಾರಾಗಿತ್ತು. ಸಿನಿಮಾದಲ್ಲಿ ಒಳ್ಳೆಯ ವಿಷಯ ಇದ್ದರೆ, ಭಾಷೆ ಅಡ್ಡಿಯಾಗುವುದಿಲ್ಲ. ಅಮೆಜಾನ್‌ನಲ್ಲಿ ಹಿಂದಿ, ತಮಿಳು ಹಾಗೂ ಇತರೆ ಭಾಷೆಗಳಲ್ಲೂ ಡಬ್ ಆಗಿ ಚಿತ್ರ ಪ್ರಸಾರಗೊಳ್ಳಲಿದೆ’ ಎಂದು ನಟ ಪುನೀತ್ ರಾಜ್‌ಕುಮಾರ್ ತಿಳಿಸಿದರು.
‘ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಚಿತ್ರಮಂದಿರಗಳಿಗೆ ಬರಲು ಆಗುತ್ತಿಲ್ಲ ಎಂದು ಹಲವರು ಹೇಳಿದರು. ಹೀಗಾಗಿ, ಇಂತಹ ಒಳ್ಳೆಯ ಸಂದೇಶ ಇರುವ ಸಿನಿಮಾವನ್ನು ಎಲ್ಲರಿಗೂ ತಲುಪಿಸಬೇಕು ಎನ್ನುವ ಕಾರಣದಿಂದ ಅಮೆಜಾನ್ ಪ್ರೈಂನಲ್ಲಿ ಪ್ರಸಾರ ಮಾಡುತ್ತಿದ್ದೇವೆ’ ಎಂದು ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.