ADVERTISEMENT

‘ಯುವರತ್ನ’ನ ಮಾತು

ಕೆ.ಎಚ್.ಓಬಳೇಶ್
Published 20 ಜೂನ್ 2019, 19:30 IST
Last Updated 20 ಜೂನ್ 2019, 19:30 IST
   

‘ನಟಸಾರ್ವಭೌಮ’ ಚಿತ್ರದ ಯಶಸ್ಸಿನ ಬಳಿಕ ನಟ ಪುನೀತ್‌ ರಾಜ್‌ಕುಮಾರ್‌ ‘ಯುವರತ್ನ’ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಇದೇ 22ರಿಂದ ಪ್ರಸಾರವಾಗಲಿರುವ ‘ಕನ್ನಡದ ಕೋಟ್ಯಧಿಪತಿ’ ಶೋನ ಸಾರಥ್ಯ ಕೂಡ ಹೊತ್ತಿದ್ದಾರೆ.

‘ಪಿಆರ್‌ಕೆ’ (ಪಾರ್ವತಮ್ಮ ರಾಜ್‌ಕುಮಾರ್‌ ಪ್ರೊಡಕ್ಷನ್) ಸಂಸ್ಥೆ ಮೂಲಕ ನಿರ್ಮಾ‍ಪಕನಾಗಿಯೂ ಅವರು ಸವಾಲಿನ ಹಾದಿ ತುಳಿದಿದ್ದರು. ತಮ್ಮ ವೃತ್ತಿಬದುಕಿನ ‘ಕವಲುದಾರಿ’ಯಲ್ಲಿ ಯಶಸ್ಸಿನ ನಗೆ ಬೀರಿದ್ದಾರೆ. ಪ್ರೊಡಕ್ಷನ್‌ನ ಮೊದಲ ಚಿತ್ರ ‘ಕವಲುದಾರಿ’ ಗಲ್ಲಾಪೆಟ್ಟಿಗೆಯಲ್ಲಿ ಗೆದ್ದಿದೆ.

ಪುನೀತ್‌ ಮತ್ತೆ ಕನ್ನಡದ ಕೋಟ್ಯಧಿಪತಿಗೆ ಮರಳಿರುವುದರಿಂದ ಅವರ ಅಭಿಮಾನಿಗಳ ನಿರೀಕ್ಷೆ ಹೆಚ್ಚಿರುವುದು ಅಸಹಜವೇನಲ್ಲ. ಕೋಟ್ಯಧಿಪತಿಯ ಸೆಟ್‌ನಲ್ಲಿ ಮಾತಿಗೆ ಸಿಕ್ಕಿದ ಅವರು, ಸಿನಿಮಾ ಸೇರಿದಂತೆ ಹಲವು ವಿಷಯ ಕುರಿತು ಅವರು ಮಾತನಾಡಿದರು.

ADVERTISEMENT

‘ಯುವರತ್ನ ಚಿತ್ರದ ಶೇಕಡ 40ರಷ್ಟು ಶೂಟಿಂಗ್‌ ಪೂರ್ಣಗೊಂಡಿದೆ. ಮೈಸೂರಿನಲ್ಲಿ ಚಿತ್ರೀಕರಣದ ಒಂದು ಶೆಡ್ಯೂಲ್‌ ಮುಗಿಸಿಕೊಂಡು ಬಂದಿದ್ದೇವೆ. ಅಲ್ಲಿನ ಮಹಾರಾಜ ಕಾಲೇಜಿನಲ್ಲಿ ಶೂಟಿಂಗ್‌ ನಡೆಯಿತು. ನಟನೆ ಬಗ್ಗೆ ಆಸಕ್ತಿ ಇದ್ದ ವಿದ್ಯಾರ್ಥಿಗಳನ್ನು ಆಡಿಷನ್‌ ಮೂಲಕ ಆಯ್ಕೆ ಮಾಡಲಾಗಿತ್ತು. ಟೀಮ್‌ ತುಂಬಾ ಚೆನ್ನಾಗಿತ್ತು.ಇನ್ನು ಮೂರ್ನಾಲ್ಕು ದಿನದಲ್ಲಿ ಶೂಟಿಂಗ್‌ಗಾಗಿ ಧಾರವಾಡಕ್ಕೆ ಹೋಗುತ್ತೇವೆ’ ಎಂದು ವಿವರಿಸಿದರು.

‘ಪಿಆರ್‌ಕೆ ಪ್ರೊಡಕ್ಷನ್‌ನ ಮೊದಲ ಪ್ರಯತ್ನಕ್ಕೆ ಒಳ್ಳೆಯ ಫಲ ಸಿಕ್ಕಿದೆ. ನಿರ್ದೇಶಕ ಹೇಮಂತ್‌ರಾವ್‌ ತಂಡದ್ದು ಅಚ್ಚುಕಟ್ಟಾದ ಕೆಲಸ. ಇದರಲ್ಲಿ ಅನಂತನಾಗ್‌ ಸರ್‌, ರಿಷಿ ಶ್ರಮವೂ ಬೆರೆದಿದೆ. ಮೊದಲ ಸಿನಿಮಾ ಕಮರ್ಷಿಯಲ್‌ ಆಗಿ ಗೆಲುವು ಕಂಡಿರುವುದು ಖುಷಿ ನೀಡಿದೆ. ನನ್ನ ಧೈರ್ಯವನ್ನು ಇಮ್ಮಡಿಗೊಳಿಸಿದೆ. ಇದು ಪ್ರಯೋಗಾತ್ಮಕ ಚಿತ್ರವಲ್ಲ. ಕನ್ನಡದಲ್ಲಿ ಹೊಸ ಅಲೆಯ ಸಿನಿಮಾ’ ಎಂದು ಖುಷಿ ಹಂಚಿಕೊಂಡರು.

ನಿರ್ಮಾಪಕನಾಗಿ ಸಿನಿಮಾ ನಿರ್ಮಿಸುವಾಗ ಯಾವ ಮಾನದಂಡ ಇಟ್ಟುಕೊಳ್ಳುತ್ತೀರಿ? ಎನ್ನುವ ಪ್ರಶ್ನೆಗೆ, ‘ಚಿತ್ರ ನಿರ್ಮಿಸುತ್ತೇವೆ ಎಂದು ಟೀಮ್‌ ಬರುತ್ತದೆ. ಅವರು ಒಂದು ಕಾನ್ಸೆಫ್ಟ್‌ ಹೇಳುತ್ತಾರೆ. ಅವರದೊಂದು ಶೈಲಿ ಇರುತ್ತದೆ. ಇಂದಿನ ಡಿಜಿಟಲ್‌ ಯುಗದಲ್ಲಿ ಉತ್ತಮ ಸಿನಿಮಾಗಳಿಗೆ ಒಳ್ಳೆಯ ವೇದಿಕೆ ಸಿಗುತ್ತಿದೆ. ಕವಲುದಾರಿ ರೆಗ್ಯುಲರ್‌ ಆದ ಕಮರ್ಷಿಯಲ್‌ ಸಿನಿಮಾವಲ್ಲ. ಅದೊಂದು ಬ್ರಿಡ್ಜ್‌ ಸಿನಿಮಾ. ಚಿತ್ರ ಉತ್ತಮ ಪ್ರದರ್ಶನ ಕಂಡಿತು. ಆರ್ಥಿಕವಾಗಿಯೂ ಗೆಲುವು ತಂದುಕೊಟ್ಟಿದೆ. ಈಗ ತಮಿಳಿಗೆ ಇದರ ರಿಮೇಕ್‌ ಹಕ್ಕುಗಳು ಮಾರಾಟವಾಗಿವೆ. ಅದೊಂದು ಒಳ್ಳೆಯ ಬೆಳವಣಿಗೆ. ಮಲಯಾಳ, ತೆಲುಗು, ಹಿಂದಿಗೂ ರಿಮೇಕ್‌ ಆಗುವ ಹಂತದಲ್ಲಿದೆ’ ಎಂದು ಉತ್ತರಿಸಿದರು.

‘ಕವಲುದಾರಿ ಮೇಕಿಂಗ್‌ನಿಂದ ಹಿಡಿದು ನನಗೆ ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ. ನನ್ನ ಪತ್ನಿ ಅಶ್ವಿನಿ ಪುನೀತ್‌ರಾಜ್‌ಕುಮಾರ್ ಪ್ರೊಡಕ್ಷನ್‌ ಕೆಲಸ ನೋಡಿಕೊಳ್ಳುತ್ತಾರೆ. ಅವರಿಗೆ ನೆರವಿಗೆ ತಂಡವೊಂದಿದೆ. ಇನ್ನು ಮುಂದೆ ಕವಲುದಾರಿಯಂತಹ ಸಿನಿಮಾಗಳನ್ನೇ ಮಾಡುತ್ತೇನೆ ಎಂದು ಗೆರೆ ಹಾಕಿಕೊಳ್ಳುವುದಿಲ್ಲ. ಒಳ್ಳೆಯ ಸಿನಿಮಾ ಮಾಡುವುದಷ್ಟೇ ನನ್ನ ಗುರಿ’ ಎಂದರು.

‘ಲಾ ಸಿನಿಮಾ ಇದೇ ವರ್ಷ ತೆರೆಕಾಣಲಿದೆ. ಜೊತೆಗೆ ಮಾಯಾಬಜಾರ್‌ ಸಿನಿಮಾವೂ ಬಿಡುಗಡೆಯಾಗಲಿದೆ. ಈ ನಡುವೆ ಮತ್ತೊಂದು ಸಿನಿಮಾ ಕೂಡ ಮಾಡುತ್ತಿದ್ದೇವೆ. ಪಿಆರ್‌ಕೆ ಪ್ರೊಡಕ್ಷನ್‌ನಡಿ ಸಿನಿಮಾ ವಿತರಣೆ ಮಾಡುವ ಆಲೋಚನೆಯೂ ಇದೆ’ ಎಂದು ಮಾಹಿತಿ ನೀಡಿದರು ಪುನೀತ್.

‘ಶಿವಣ್ಣ, ರಾಘಣ್ಣ ಮತ್ತು ನಾನು ಒಟ್ಟಾಗಿ ಸಿನಿಮಾ ಮಾಡಬೇಕೆಂಬ ಆಸೆ ಇದೆ. ಆದರೆ, ಒಳ್ಳೆಯ ಕಥೆ ಸಿಕ್ಕಿದರೆ ಖಂಡಿತಾ ಮಾಡುತ್ತೇವೆ’ ಎಂದು ನಕ್ಕರು.

ಸಿನಿಮಾ ರಂಗಕ್ಕೆ ಹೊಸಬರ ಪ್ರವೇಶದ ಬಗ್ಗೆ ಪುನೀತ್‌ ಹೇಳಿದ್ದು ಹೀಗೆ: ‘ಹೊಸಬರು ಒಳ್ಳೆಯ ಕಥೆಗಳನ್ನು ಇಟ್ಟುಕೊಂಡು ಸಿನಿಮಾ ರಂಗ ಪ್ರವೇಶಿಸುತ್ತಿರುವುದು ನಿಜ. ಹಾಗೆಂದು ನನ್ನನ್ನು ಕಥೆಯ ಜೊತೆಗೆ ಅಪ್ರೋಚ್‌ ಮಾಡಬೇಡಿ. ಕಥೆಯನ್ನು ಚೆನ್ನಾಗಿ ಶೂಟ್‌ ಮಾಡಿ ನನಗೆ ವಿಶ್ಲೇಷಿಸಬೇಕು. ನನಗೆ ಇಷ್ಟವಾದರೆ ಮುಂದಕ್ಕೆ ಯೋಚಿಸುತ್ತೇನೆ. ಈಗ ಮೊಬೈಲ್‌ನಲ್ಲಿಯೂ ಶೂಟ್‌ ಮಾಡಬಹುದು. ಕೆಲವರು ಒಳ್ಳೆಯ ಡೈಲಾಗ್‌ ಬರೆಯುತ್ತಾರೆ. ಆದರೆ, ಅದು ನಮಗೆ ಥ್ರಿಲ್‌ ಆಗಿರಬೇಕು. ಮಾಯಾಬಜಾರ್‌ ಸಿನಿಮಾದ ನಿರ್ದೇಶಕನನ್ನು ನಾವು ಆಯ್ಕೆ ಮಾಡಿದ್ದು ಯೂಟ್ಯೂಬ್‌ನಲ್ಲಿದ್ದ ಅವರ ಸಿನಿಮಾ ನೋಡಿ. ಅದು ನನಗೆ ಇಂ‍ಪ್ರೆಸ್‌ ಆಯಿತು. ಹೊಸಬರ ಪ್ರತಿಭೆಯನ್ನು ಖಂಡಿತ ಗುರುತಿಸುತ್ತೇನೆ’ ಎಂದು ಭರವಸೆಯಿತ್ತರು.

ಪುನೀತ್ ಜೊತೆಗಿನ ಮಾತುಕತೆಯು ‘ಕನ್ನಡ ಕೋಟ್ಯಧಿಪತಿ’ ಶೋನತ್ತ ಹೊರಳಿತು. ‘ವಾರದಲ್ಲಿ ಈ ಕಾರ್ಯಕ್ರಮಕ್ಕೆ ಎರಡು ದಿನಗಳು ಬೇಕಾಗುತ್ತದೆ. ತಿಂಗಳಿನಲ್ಲಿ ನಾಲ್ಕೈದು ದಿನ ಸಿಕ್ಕಿದರೆ ಸಾಕು. ಸಮಯ ಹೊಂದಾಣಿಕೆಯು ನನಗೆ ಕಷ್ಟವಾಗುವುದಿಲ್ಲ’ ಎಂದರು.

‘2011ರಲ್ಲಿ ನನಗೆ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ನಡೆಸಿಕೊಡಲು ಅವಕಾಶ ಬಂದಿತು. ನನ್ನ ತಂದೆಯವರು ಬಾಲಿವುಡ್‌ ನಟ ಅಮಿತಾಬ್‌ ಬಚ್ಚನ್‌ ಅವರು ಹಿಂದಿಯಲ್ಲಿ ನಡೆಸಿಕೊಡುತ್ತಿದ್ದ ಕೌನ್‌ ಬನೇಗಾ ಕರೋಡ್‌ಪತಿ ಶೋ ನೋಡುತ್ತಿದ್ದರು. ನಾನು ಕನ್ನಡದಲ್ಲಿ ಈ ಕಾರ್ಯಕ್ರಮ ನಡೆಸಿಕೊಡುವ ಮೊದಲು ಆ ಶೋ ನೋಡಲು ಹೋಗಿದ್ದೆ. ಅಪ್ಪಾಜಿಯೇ ಈ ಕಾರ್ಯಕ್ರಮ ನಡೆಸಿಕೊಡಲು ನನಗೆ ಪ್ರೇರಣೆ’ ಎಂದು ನೆನಪಿನ ಬುತ್ತಿ ಬಿಚ್ಚಿಟ್ಟರು.

‘ಮೊದಲ ಸೀಸನ್‌ ನಡೆಸಿಕೊಡುವಾಗ ಸಾಕಷ್ಟು ಭಯಪಟ್ಟಿದ್ದು ಸತ್ಯ. 2012ರಲ್ಲಿ ಮತ್ತೆ ನನಗೆ ಅವಕಾಶ ಸಿಕ್ಕಿತು. ಮೂರನೇ ಬಾರಿಗೆ ಕಲರ್ಸ್‌ ಕನ್ನಡ ವಾಹಿನಿಯು ಅವಕಾಶ ಕಲ್ಪಿಸಿದೆ. ಆ ಸೀಟಿನಲ್ಲಿ ಕುಳಿತಾಗ ಜವಾಬ್ದಾರಿ ನನಗೆ ಅರಿವು ಇಲ್ಲದೆಯೇ ಬರುತ್ತದೆ’ ಎಂದರು.

‘ಹಲವು ಮಂದಿ ತಮ್ಮ ಜೀವನದ ದಿಕ್ಕು ಬದಲಾಯಿಸಿಕೊಳ್ಳಬಹುದೆಂದು ನಂಬಿಕೆ ಇಟ್ಟುಕೊಂಡು ಈ ಕಾರ್ಯಕ್ರಮಕ್ಕೆ ಬರುತ್ತಾರೆ. ನಾನು ಕೇಳುವ ಪ್ರಶ್ನೆಗೆ ಅವರು ಉತ್ತರಿಸಬೇಕು. ಅದು ಸರಿಯಾಗಿರಬೇಕು. ಹಣ ಗೆದ್ದುಕೊಂಡು ಹೋಗಬೇಕು ಎನ್ನುವುದೇ ನನ್ನಾಸೆ. ಅವರಲ್ಲಿನ ಸರಸ್ವತಿಯ ಜ್ಞಾನದಿಂದ ಲಕ್ಷ್ಮಿಯನ್ನು ಪಡೆದುಕೊಂಡು ಹೋಗುತ್ತಾರೆ. ಆಗ ನನಗೆ ನಿಜಕ್ಕೂ ಖುಷಿಯಾಗುತ್ತದೆ’ ಎಂದರು ಪುನೀತ್‌.

ಹೊಸಬರಿಗೂ ಅವಕಾಶ

ಹೊಸಬರು ಒಳ್ಳೆಯ ಕಥೆಗಳನ್ನು ಇಟ್ಟುಕೊಂಡು ಸಿನಿಮಾ ರಂಗ ಪ್ರವೇಶಿಸುತ್ತಿರುವುದು ನಿಜ. ಹಾಗೆಂದು ನನ್ನನ್ನು ಕಥೆಯ ಜೊತೆಗೆ ಅಪ್ರೋಚ್‌ ಮಾಡಬೇಡಿ. ಕಥೆಯನ್ನು ಚೆನ್ನಾಗಿ ಶೂಟ್‌ ಮಾಡಿ ನನಗೆ ವಿಶ್ಲೇಷಿಸಬೇಕು. ನನಗೆ ಇಷ್ಟವಾದರೆ ಮುಂದಕ್ಕೆ ಯೋಚಿಸುತ್ತೇನೆ. ಈಗ ಮೊಬೈಲ್‌ನಲ್ಲಿಯೂ ಶೂಟ್‌ ಮಾಡಬಹುದು. ಕೆಲವರು ಒಳ್ಳೆಯ ಡೈಲಾಗ್‌ ಬರೆಯುತ್ತಾರೆ. ಆದರೆ, ಅದು ನಮಗೆ ಥ್ರಿಲ್‌ ಆಗಿರಬೇಕು. ಮಾಯಾಬಜಾರ್‌ ಸಿನಿಮಾದ ನಿರ್ದೇಶಕರನ್ನು ನಾವು ಆಯ್ಕೆ ಮಾಡಿದ್ದು ಯೂಟ್ಯೂಬ್‌ನಲ್ಲಿದ್ದ ಅವರ ಸಿನಿಮಾ ನೋಡಿ. ಅದು ನನಗೆ ಇಂ‍ಪ್ರೆಸ್‌ ಆಯಿತು. ಹೊಸಬರ ಪ್ರತಿಭೆಯನ್ನು ಖಂಡಿತಾ ಗುರುತಿಸುತ್ತೇನೆ ಎಂದರು ಪುನೀತ್‌ ರಾಜ್‌ಕುಮಾರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.