ಹೈದರಾಬಾದ್: ‘ನಾನು ಪ್ಯಾನ್ ಇಂಡಿಯಾ ನಟಿ ಆಗಬೇಕು’ ಎಂದುಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಹೇಳಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನ್ನನ್ನು ಉತ್ತರ ಅಥವಾ ದಕ್ಷಿಣದ ನಟಿ ಎಂದು ವರ್ಗೀಕರಿಸಲು ಇಷ್ಟಪಡುವುದಿಲ್ಲ. ಆದರೆ, ವಿಷಯಾಧಾರಿತ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ನಾನು ಪ್ಯಾನ್ ಇಂಡಿಯಾ ನಟಿ ಆಗಬೇಕು ಎಂದು ಬಯಸುತ್ತೇನೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ನನ್ನನ್ನು ಶ್ರೀವಲ್ಲಿ (ಪುಷ್ಪಾದಿಂದ) ಅಥವಾ ಗೀತಾ (ಗೀತಾ ಗೋವಿಂದಂನಿಂದ) ಎಂದು ಕರೆಯುವ ಮೂಲಕ ಪ್ರೇಕ್ಷಕರು ನನ್ನ ಪಾತ್ರಗಳನ್ನು ನೆನಪಿಸಿಕೊಳ್ಳುತ್ತಾರೆ’ ಎಂದು ರಶ್ಮಿಕಾ ಹೇಳಿದ್ದಾರೆ.
ಸದ್ಯ ನಟ ಶರ್ವಾನಂದ –ರಶ್ಮಿಕಾ ನಟನೆಯ ‘ಆಡವಲ್ಲು ಮೀಕು ಜೋಹಾರ್ಲು’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರಕ್ಕೆ ಕಿಶೋರ್ ತಿರುಮಲ ಆ್ಯಕ್ಷನ್ ಕಟ್ ಹೇಳಿದ್ದಾರೆ. ಮಾರ್ಚ್ 4ರಂದು ಈ ಚಿತ್ರ ಬಿಡುಗಡೆಯಾಗಲಿದೆ.
ರಶ್ಮಿಕಾ ಮಂದಣ್ಣ ಅವರು ಕನ್ನಡದಲ್ಲಿ ವೃತ್ತಿ ಜೀವನ ಆರಂಭಿಸಿದರು. ರಕ್ಷಿತ್ ಶೆಟ್ಟಿ ನಿರ್ದೇಶನದ ‘ಕಿರಿಕ್ ಪಾರ್ಟಿ’ ಚಿತ್ರದಲ್ಲಿ ರಶ್ಮಿಕಾ ನಟಿಸಿದ್ದಾರೆ. ಬಳಿಕ ಪುನೀತ್ ರಾಜ್‌ಕುಮಾರ್ ನಟನೆಯ ‘ಅಂಜನಿಪುತ್ರ’, ಗಣೇಶ್ ನಟನೆಯ ‘ಚಮಕ್’, ದರ್ಶನ್ ನಟನೆಯ ‘ಯಜಮಾನ’ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ತೆಲುಗಿನಲ್ಲಿ ‘ಛಲೋ’, ‘ಗೀತಾ ಗೋವಿಂದಂ’, ‘ದೇವದಾಸ್’, ‘ಸರಿಲೇರು ನೀಕೆವ್ವರು’, ‘ಪುಷ್ಪ’ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಈಗ ಹಿಂದಿ ಚಿತ್ರರಂಗಕ್ಕೂ ಅವರು ಎಂಟ್ರಿ ನೀಡಿದ್ದಾರೆ.
ಇದೀಗ ಅಮಿತಾಭ್ ಬಚ್ಚನ್ ಜೊತೆ ‘ಗುಡ್ ಬೈ’, ಸಿದ್ದಾರ್ಥ್ ಮಲ್ಹೋತ್ರಾ ಜೊತೆ ‘ಮಿಷನ್ ಮಜ್ನು’ ಸಿನಿಮಾಗಳ ಮೂಲಕ ರಶ್ಮಿಕಾ ಬಾಲಿವುಡ್‌ಗೆ ಪದಾರ್ಪಣೆ ಮಾಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.