ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ: ದಿ ರೈಸ್ ಬೇರೆ ಚಿತ್ರಗಳ ಪೈಪೋಟಿಯ ಹೊರತಾಗಿಯೂ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದ್ದು, ಹೊಸ ದಾಖಲೆಗಳನ್ನು ತನ್ನ ಮಡಿಲಿಗೆ ಹಾಕಿಕೊಳ್ಳುತ್ತಿದೆ. ಚಿತ್ರ ಬಿಡುಗಡೆಯಾದಾಗಿನಿಂದಲೂ ಎಲ್ಲ ಭಾಷೆಯಲ್ಲೂ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ಮೂರು ವಾರಗಳಿಗೂ ಹೆಚ್ಚುಕಾಲ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ.
ಈ ಚಿತ್ರವು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಕೂಡ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಹೀಗಿದ್ದರೂ ಪುಷ್ಪ ಸಿನಿಮಾದ ಅಬ್ಬರ ಕಡಿಮೆಯಾಗಿಲ್ಲ. ಈ ಸಿನಿಮಾದ ಹಿಂದಿ ಅವತರಣಿಕೆಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಸುಕುಮಾರ್ ನಿರ್ದೇಶನದ ಪುಷ್ಪ: ದಿ ರೈಸ್ ಸಿನಿಮಾ ಡಿ. 17 ರಂದು ಬಿಡುಗಡೆಯಾಯಿತು. ಈ ಚಿತ್ರವು ಚಿತ್ರಮಂದಿರಗಳಲ್ಲಿ 25 ದಿನ ಪೂರೈಸಿದೆ. ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಈ ವೇಳೆ ಸಿನಿಮಾವೊಂದು ಅದ್ಭುತ ಪ್ರದರ್ಶನ ಕಾಣುತ್ತಿರುವುದು ಸಾಧನೆಯೇ ಸರಿ. ಪುಷ್ಪಾ ಹಲವು ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದೆ.
Box Office Biz ಪ್ರಕಾರ, 23 ನೇ ದಿನದ ಅಂತ್ಯಕ್ಕೆ ₹ 176 ಕೋಟಿ ಗಳಿಸುವ ಮೂಲಕ ವಿಶ್ವದಾದ್ಯಂತ ಪುಷ್ಪ ಈವರೆಗೆ ₹ 326 ಕೋಟಿಯನ್ನು ಬಾಚಿಕೊಂಡಿದೆ. ಈ ಪೈಕಿ ಭಾರತದಲ್ಲಿ ₹ 250.3 ಕೋಟಿ ಗಳಿಸುವಲ್ಲಿ ಯಶಸ್ವಿಯಾಗಿದೆ.
ಮಹಾರಾಷ್ಟ್ರ ಮತ್ತು ಇತರ ಹಲವು ರಾಜ್ಯಗಳಲ್ಲಿ ಚಿತ್ರಮಂದಿರಗಳು ಶೇ 50 ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಈ ಮಧ್ಯೆಯೂ ಪುಷ್ಪ ಸಿನಿಮಾದ ಓಟಕ್ಕೆ ಬ್ರೇಕ್ ಬಿದ್ದಿಲ್ಲ.
ಪುಷ್ಪ ಸಿನಿಮಾವು ಆಂಧ್ರಪ್ರದೇಶದ ಶೇಷಾಚಲಂ ಪ್ರದೇಶದಲ್ಲಿನ ರಕ್ತ ಚಂದನ ಕಳ್ಳಸಾಗಣೆದಾರರ ಜೀವನವನ್ನು ಆಧರಿಸಿದೆ. ಪುಷ್ಪ ರಾಜ್ ಪಾತ್ರದಲ್ಲಿ ಅಲ್ಲು ಅರ್ಜುನ್ ನಟಿಸಿದ್ದರೆ, ಭನ್ವರ್ ಸಿಂಗ್ ಶೇಖಾವತ್ ಆಗಿ ಫಹಾದ್ ಫಾಸಿಲ್ ಕಾಣಿಸಿಕೊಂಡಿದ್ದಾರೆ. ಶ್ರೀವಲ್ಲಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಇವರಲ್ಲದೆ ಸುನೀಲ್, ಧನಂಜಯ, ರಾವ್ ರಮೇಶ್, ಅನಸೂಯ ಭಾರಧ್ವಾಜ್ ಮತ್ತು ಅಜಯ್ ಘೋಷ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.