ನವೆಂಬರ್ 9. ನಟ, ನಿರ್ದೇಶಕ, ನಿರ್ಮಾಪಕ ಶಂಕರ್‌ನಾಗ್ ಅವರು ಹುಟ್ಟಿದ ದಿನ. ಅವರು ಬದುಕಿದ್ದರೆ ಇಂದಿಗೆ 66 ವರ್ಷವಾಗಿರುತ್ತಿತ್ತು (ಜನನ: ನ. 9, 1954). ರಂಗಭೂಮಿಯಲ್ಲಿ ಸಕ್ರಿಯವಾಗಿದ್ದ ಶಂಕರ್‌ನಾಗ್ ಅವರೊಂದಿಗೆ ಕೆಲಸ ಮಾಡಿದ ಹಿರಿಯ ರಂಗಕರ್ಮಿ ಮುದ್ದಣ್ಣ ರಟ್ಟೀಹಳ್ಳಿ ಅವರು ತಮ್ಮ ನೆನಪಿನ ಬುತ್ತಿಯನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ.
ನನ್ನ ಮತ್ತು ಶಂಕರ್‌ನಾಗ್ ಅವರ ಒಡನಾಟ ಶುರುವಾಗಿದ್ದು ‘ಅಂಜು ಮಲ್ಲಿಗೆ’ ನಾಟಕದ ಮೂಲಕ. 1978ರ ಜೂನ್–ಜುಲೈ ಹೊತ್ತಿಗೆ ಶಂಕರ್‌ನಾಗ್ ಅವರು ಬೆಂಗಳೂರಿಗೆ ಬಂದರು. ‘ಬೆನಕ’ ಸಹಯೋಗದೊಂದಿಗೆ ‘ಸಂಕೇತ್’ ಹುಟ್ಟಿಕೊಂಡಿತು. ಶಂಕರ್‌ನಾಗ್ ಅವರು ಗಿರೀಶ್ ಕಾರ್ನಾಡ್ ಅವರ ‘ಅಂಜು ಮಲ್ಲಿಗೆ’ ನಾಟಕದಲ್ಲಿ ಅಭಿನಯಿಸಿದ್ದರು. ಅದು ಕಲಾಕ್ಷೇತ್ರದಲ್ಲಿ ಪ್ರದರ್ಶನವಾಗಿತ್ತು. ಆಗ ನನಗೆ ಸುಮಾರು 16 ಅಥವಾ 17 ವರ್ಷವಿರಬಹುದು. ‘ಅಂಜು ಮಲ್ಲಿಗೆ’ಗೆ ಬ್ಯಾಕ್ ಸ್ಟೇಜ್ ಕೆಲಸ ಮಾಡಿದ್ದೆ.
‘ಅಂಜು ಮಲ್ಲಿಗೆ’ ನಂತರ ಸಂಕೇತ್ ವತಿಯಿಂದ ‘ಕಣ್ಣಾಮುಚ್ಚಾಲೆ’, ‘ನೋಡಿ ಸ್ವಾಮಿ ನಾವಿರೋದು ಹೀಗೆ’, ‘ನಾಗಮಂಡಲ’ ನಾಟಕಗಳ ಪ್ರದರ್ಶನ ನಡೆಯಿತು. ಅದರಲ್ಲಿ ‘ನೋಡಿ ಸ್ವಾಮಿ...’ ಹೊರತು ಪಡಿಸಿ ಉಳಿದ ನಾಟಕಗಳಿಗೆ ನನ್ನ ಬೆಳಕಿನ ವಿನ್ಯಾಸವಿತ್ತು.
ಸಿಟ್ಟು ಮಾಡುತ್ತಿರಲಿಲ್ಲ....
ಶಂಕರ್‌ನಾಗ್ ಅವರದ್ದು ತಾಳ್ಮೆಯ ವ್ಯಕ್ತಿತ್ವ. ಎಂದಿಗೂ ಅವರು ಮತ್ತೊಬ್ಬರ ಮೇಲೆ ಸಿಟ್ಟು ಮಾಡಿಕೊಂಡದ್ದನ್ನು ನಾನು ನೋಡಲಿಲ್ಲ. ನಮಗೆ ಕೆಲಸ ಬರುತ್ತೆ ಅಂತ ಗೊತ್ತಾದರೆ ಸಾಕಿತ್ತು ಅವರಿಗೆ. ನೀನು ಈ ಕೆಲಸ ಮಾಡು, ನಾನು ಆ ಕೆಲಸ ಮಾಡುವೆ ಅಂತ ಹಂಚಿಕೊಂಡು ಕೆಲಸ ಮಾಡುತ್ತಿದ್ದರು. ಸಂಕೇತ್‌ನಿಂದ ಪ್ರದರ್ಶನವಾದ ‘ಕಣ್ಣಾಮುಚ್ಚಾಲೆ’ ನಾಟಕದಿಂದ ನಾನು ಬೆಳಕಿನ ವಿನ್ಯಾಸ (ಲೈಟಿಂಗ್) ಆರಂಭಿಸಿದೆ. ಶಂಕರ್ ಅವರ ಜೊತೆಗೆ ಕೆಲಸ ಮಾಡುವುದೇ ಖುಷಿಯ ಸಂಗತಿಯಾಗಿತ್ತು. ಅದರಲ್ಲೂ ಟೆಕ್ನಿಷಿಯನ್ ಜೊತೆಗೆ ಅವರು ತುಂಬಾ ಚೆನ್ನಾಗಿ ನಡೆದುಕೊಳ್ಳುತ್ತಿದ್ದರು. ಕೆಲಸಕ್ಕೆ ಬೆಂಬಲಿಸುತ್ತಿದ್ದರು.
‘ನಾಗಮಂಡಲ’ ಶಂಕರ್‌ನಾಗ್ ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟ ನಾಟಕ. ಆ ನಾಟಕದ ಬೆಳಕಿನ ವಿನ್ಯಾಸಕ್ಕೆ ಬೇರೆಯವರನ್ನು ಕರೆಸಿಕೊಳ್ಳಲಾಗಿತ್ತು. ಆದರೆ, ಅವರ ಕೆಲಸ ಶಂಕರ್‌ನಾಗ್ ಅವರಿಗೆ ಸರಿ ಹೋಗಲಿಲ್ಲ. ಕೊನೆಗೆ ಗೋಪಾಲ ವಾಜಪೇಯಿ ಅವರು ನನ್ನ ಹೆಸರನ್ನು ಸೂಚಿಸಿದರು. ಈ ಹಿಂದೆ ಅವರೊಂದಿಗೆ ಕೆಲಸ ಮಾಡಿದ ಅನುಭವವಿದ್ದರಿಂದ ‘ನಾಗಮಂಡಲ’ಕ್ಕೆ ಅವರು ಬಯಸಿದ ರೀತಿಯಲ್ಲಿ ಬೆಳಕಿನ ವಿನ್ಯಾಸ ಮಾಡಿಕೊಟ್ಟೆ. ನನ್ನ ಕೆಲಸದಿಂದ ಶಂಕರ್‌ನಾಗ್ ತುಂಬಾ ಖುಷಿಯಾದರು. ‘ನಾಗಮಂಡಲ’ ಎಲ್ಲೆಲ್ಲಿ ಪ್ರದರ್ಶನವಾಗುತ್ತಿತ್ತೋ ಅಲ್ಲೆಲ್ಲಾ ಷೋಗಳು ಭರ್ತಿಯಾಗಿರುತ್ತಿದ್ದವು.
ಎರಡನೇ ಷೋಗೆ ಪಟ್ಟು ಬಿಡದ ಪ್ರೇಕ್ಷಕರು
1989ರಲ್ಲಿ ಬೆಂಗಳೂರಿನಲ್ಲಿ ‘ನಾಗಮಂಡಲ’ ನಾಟಕದ ನಿರಂತರ ಪ್ರದರ್ಶನವಾಗಿತ್ತು. (ನಿರ್ದೇಶನ: ಶಂಕರ್‌ನಾಗ್/ಸುರೇಂದ್ರನಾಥ್) ನಾಟಕದ ಕೊನೆಯ ಪ್ರದರ್ಶನ ಹೌಸ್‌ಫುಲ್ ಆಗಿತ್ತು. ಟಿಕೆಟ್ ಸಿಗದ ಪ್ರೇಕ್ಷಕರು ಮತ್ತೊಂದು ಪ್ರದರ್ಶನಕ್ಕೆ (ಸೆಕೆಂಡ್ ಷೋ) ಪಟ್ಟು ಹಿಡಿದರು. ಮತ್ತೆ ಷೋ ಮಾಡ್ತೀವಿ ಅಂದರೂ ಪ್ರೇಕ್ಷಕರು ವಾಪಸ್ ಹೋಗಲು ಸಿದ್ಧರಿರಲಿಲ್ಲ. ಟಿಕೆಟ್ ಕೊಡಿ ನಂಬುತ್ತೇವೆ ಅಂದರು. ಕೊನೆಗೆ ಎರಡನೇ ಷೋಗೆ ಟಿಕೆಟ್ ನೀಡಿದ ಮೇಲೆಯೇ ಪ್ರೇಕ್ಷಕರು ಸುಮ್ಮನಾದರು.
ಅಂದು ‘ನಾಗಮಂಡಲ’ ಬಹುಶಃ ಸಂಜೆ 7ಗಂಟೆಯಿಂದ ರಾತ್ರಿ 9ರವರೆಗೆ ಕೊನೆಯ ಪ್ರದರ್ಶನವಿತ್ತು. ಪ್ರೇಕ್ಷಕರಿಗೆ ಟಿಕೆಟ್ ನೀಡಿದ ಅರ್ಧಗಂಟೆಯಲ್ಲೇ ಅಂದರೆ ರಾತ್ರಿ 9.30ಕ್ಕೆ ಶಂಕರ್‌ನಾಗ್ ಎರಡನೇ ಷೋ ಆರಂಭಿಸಿದರು. ನಾಟಕ ಮುಗಿದಾಗ ರಾತ್ರಿ 11 ಗಂಟೆ ಆಗಿತ್ತು. ಈ ನಾಟಕಕ್ಕೆ ಖ್ಯಾತ ಸಂಗೀತ ನಿರ್ದೇಶಕ ಸಿ. ಅಶ್ವತ್ಥ ಅವರ ಸಂಗೀತ ನಿರ್ದೇಶನವಿತ್ತು. ರಂಗಕರ್ಮಿ ಬಿ. ಸುರೇಶ್ ಅವರು ಪೊಪ್ಪೆಟ್ ವಿನ್ಯಾಸ ಮಾಡಿಕೊಟ್ಟಿದ್ದರು.
ನಾಟಕ ತಂಡಕ್ಕಾಗಿ ಫ್ಲೈಟ್ ಬಿಟ್ಟುಬಂದಿದ್ದರು!
‘ನಾಗಮಂಡಲ’ ನಾಟಕ ಮುಂದೆ ಕೋಲ್ಕತ್ತಾದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಯಿತು. ಅಷ್ಟೊತ್ತಿಗೆ ಶಂಕರ್‌ನಾಗ್ ಸಿನಿಮಾ ರಂಗದಲ್ಲಿ ದೊಡ್ಡ ನಟರಾಗಿದ್ದರು. ತುಂಬಾ ಬ್ಯುಸಿಯಾಗಿದ್ದರು. ಆದರೆ, ಅವರು ರಂಗಭೂಮಿಯನ್ನು ಮತ್ತು ನಮ್ಮ ತಂಡವನ್ನು ಮರೆತಿರಲಿಲ್ಲ. ಕೋಲ್ಕತ್ತಾಕ್ಕೆ ಹೋಗಲು ನಮ್ಮ ಇಡೀ ತಂಡಕ್ಕೆ ರೈಲಿನಲ್ಲಿ ಟಿಕೆಟ್ ಕಾಯ್ದಿರಿಸಿದ್ದರು. ಶಂಕರ್‌ನಾಗ್ ಅವರಿಗೆ ವಿಮಾನದ ಟಿಕೆಟ್ ಬುಕ್ ಆಗಿತ್ತು. ಬೆಂಗಳೂರಿನಿಂದ ಹೊರಟ ಅವರು ಮಾರ್ಗಮಧ್ಯೆ ಮದ್ರಾಸ್‌ನಲ್ಲಿ ಫ್ಲೈಟ್ ಬದಲಿಸಬೇಕಿತ್ತು. ಆದರೆ, ಶಂಕರ್‌ನಾಗ್ ಅವರಿಗೆ ತಂಡವನ್ನು ರೈಲಿನಲ್ಲಿ ಕಳುಹಿಸಿ, ತಾವು ಮಾತ್ರ ವಿಮಾನ ಪ್ರಯಾಣದ ಮೂಲಕ ಕೋಲ್ಕತ್ತಾ ತಲುಪುವುದು ಸರಿ ಎನಿಸಲಿಲ್ಲ. ಕೊನೆಗೆ ನಮ್ಮ ತಂಡದ ಕಾರ್ಪೆಂಟರ್ ಒಬ್ಬರನ್ನು ತಮ್ಮ ಹೆಸರಿನಲ್ಲಿ ಫ್ಲೈಟ್ ಹತ್ತಿಸಿದ ಶಂಕರ್‌ನಾಗ್ ನಮ್ಮೊಂದಿಗೆ (ನಾಟಕ ತಂಡ) ಜೊತೆಗೆ ರೈಲು ಪ್ರಯಾಣಕ್ಕೆ ಸೇರಿಕೊಂಡರು. ಅವರು ಬಂದದ್ದೇ ನಮಗೆಲ್ಲಾ ಹೇಳಲಾರದಷ್ಟು ಸಂತಸವಾಯಿತು. ಶಂಕರ್‌ನಾಗ್ ಎಲ್ಲರೊಂದಿಗೆ ಎಂಜಾಯ್ ಮಾಡಿದರು. ಪ್ರಯಾಣದುದ್ದಕ್ಕೂ ಲವಲವಿಕೆಯಿಂದ ತುಂಬಿದರು.
–ಇದು ಶಂಕರ್‌ನಾಗ್ ವ್ಯಕ್ತಿತ್ವ.
ಹೃದಯವಂತ ಶಂಕರ್
ಶಂಕರ್‌ನಾಗ್ ರಂಗಕರ್ಮಿ, ನಟ, ತಂತ್ರಜ್ಞರಾಗಿ ಮಾತ್ರ ಮೆಚ್ಚುಗೆಯಾಗುತ್ತಿರಲಿಲ್ಲ. ಅವರಲ್ಲೊಬ್ಬ ಹೃದಯವಂತ ಇದ್ದ. ಅವರೊಬ್ಬ ಅದ್ಭುತ ಸ್ನೇಹಜೀವಿ. ಪರೋಪಕಾರಿ. ಯಾರಿಗಾದರೂ ಕಷ್ಟವಿದೆ ಅಂದರೆ ಸಾಕು ಮರುಗುತ್ತಿದ್ದರು. ಸಹಾಯ ಮಾಡುತ್ತಿದ್ದರು. ಯಾರಾದರೂ ಟೆಕ್ನಿಷಿಯನ್ ಅಥವಾ ಒಳ್ಳೆಯ ಕೆಲಸಗಾರರನ್ನು ಕಂಡರೆ ಅವರ ಬಗ್ಗೆ ಅಪಾರ ಪ್ರೀತಿ. ಯಾವುದೇ ಕಾರಣಕ್ಕೂ ಕೆಲಸಗಾರರನ್ನು ಬಿಟ್ಟುಕೊಡುತ್ತಿರಲಿಲ್ಲ.
ಹೀಗಿದ್ದ ಶಂಕರ್‌ನಾಗ್ 1990ರಲ್ಲಿ ಅಪಘಾತದಲ್ಲಿ ತೀರಿಹೋದ ಸುದ್ದಿ ದೊಡ್ಡ ಆಘಾತ ನೀಡಿತು. ಅಪಘಾತದಲ್ಲಿ ಅರುಂಧತಿ ನಾಗ್ ಮೇಡಂ ಅವರ ಕಾಲಿಗೆ ಪೆಟ್ಟಾಗಿತ್ತು. ಮೇಡಂ ಆರೋಗ್ಯದಲ್ಲಿ ಚೇತರಿಕೆಯ ಬಳಿಕ ಅವರೊಂದಿಗೆ ‘ಹುಲಗೂರ ಹುಲಿಯವ್ವ’ ನಾಟಕಕ್ಕೆ ಕೆಲಸ ಮಾಡಿದೆ. ಈ ನಾಟಕವನ್ನು ಸುರೇಂದ್ರನಾಥ್ ಅವರು ನಿರ್ದೇಶಿಸಿದ್ದರು. ಅಲ್ಲಿಂದ ಅರುಂಧತಿ ಮೇಡಂ ಅವರ ಅನೇಕ ನಾಟಕಗಳಲ್ಲಿ ಬೆಳಕು ವಿನ್ಯಾಸಗಾರನಾಗಿ ಕೆಲಸ ಮಾಡಿದೆ.
ರಂಗ ‘ಶಂಕರ’ ಕನಸು ನನಸು
ರಂಗಶಂಕರ ನಿರ್ಮಾಣದ ಹಂತದಿಂದಲೂ ಇಲ್ಲಿಯತನಕ ಅರುಂಧತಿ ಮೇಡಂ ಜೊತೆಗೆ ಇದ್ದೇನೆ. 2003ರ ಹೊತ್ತಿಗೆ ಅರುಂಧತಿ ಮೇಡಂ ನನ್ನನ್ನು ರಂಗಶಂಕರಕ್ಕೆ ಕರೆತಂದರು. ಇಲ್ಲಿನ ಥಿಯೇಟರ್ ಇನ್‌ಚಾರ್ಜ್ ಆಗಿ ಕೆಲಸ ಮಾಡುತ್ತಿರುವೆ. ಶಂಕರ್‌ನಾಗ್ ಅವರು ಇಂದು ನಮ್ಮೊಂದಿಗೆ ಭೌತಿಕವಾಗಿ ಇಲ್ಲದಿರಬಹುದು ಆದರೆ, ಅವರು ‘ರಂಗಶಂಕರ’ದ ಮೂಲಕ ನಮ್ಮ ನಡುವೆ ಜೀವಂತವಾಗಿದ್ದಾರೆ. ಈ ಜಾಗಕ್ಕೆ ಶಂಕರ್ ನಾಗ್ ಅವರು ಬದುಕಿದ್ದಾಗಲೇ ಅಡಿಗಲ್ಲು ಹಾಕಲಾಗಿತ್ತು. ನಾಟಕಗಳ ಪ್ರದರ್ಶನಕ್ಕೆ ಸುಗಮವಾಗಿರುವಂಥ ರಂಗಮಂದಿರ ದೊರೆಯಬೇಕೆಂಬುದು ಶಂಕರ್‌ನಾಗ್ ಅವರ ಕನಸಾಗಿತ್ತು. ಅವರ ಕನಸನ್ನು ಅರುಂಧತಿ ನಾಗ್ ಮೇಡಂ ನನಸಾಗಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.