ರಾಧಿಕಾ ಆಪ್ಟೆ ಹುಟ್ಟಿದ್ದು ತಮಿಳುನಾಡಿನ ವೆಲ್ಲೂರು. ಬೆಳೆದದ್ದು ಮರಾಠಿ ಪರಿಸರ, ಪುಣೆಯಲ್ಲಿ. ಅಮ್ಮ ಚಾರುದತ್ತ ಆಪ್ಟೆ ನರರೋಗ ತಜ್ಞೆ. ಫರ್ಗ್ಯೂಸನ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಹಾಗೂ ಗಣಿತ ವಿಷಯಗಳಲ್ಲಿ ಪದವಿ ಪಡೆದರೂ ಆಸಕ್ತಿ ಇದ್ದುದು ನೃತ್ಯದಲ್ಲಿ. ರೋಹಿಣಿ ಭಾಟೆ ಹತ್ತಿರ ಎಂಟು ವರ್ಷ ಕಥಕ್ ನೃತ್ಯ ಕಲಿತಿದ್ದ ರಾಧಿಕಾ, ನಟಿಯಾಗಿ ಅಭಿನಯಿಸಿದ ನಾಲ್ಕು ಸಿನಿಮಾಗಳು ತೆರೆಕಂಡ ಮೇಲೆ ಲಂಡನ್ ನ ಟ್ರಿನಿಟಿ ಲಬಾನ್ ಕನ್ಸರ್ವೇಟೊಯ್ರ್ ಆಫ್ ಮ್ಯೂಸಿಕ್ ಅಂಡ್ ಡಾನ್ಸ್ ಶಾಲೆಗೆ ಒಂದು ವರ್ಷದ ಕೋರ್ಸ್ ಸೇರಿದರು. ನೃತ್ಯ ಅವರನ್ನು ಹೇಗೆ ಆವರಿಸಿಕೊಂಡಿತ್ತು ಎನ್ನುವುದಕ್ಕೆ ಇದು ಸಾಕ್ಷಿ.
‘ವಾಹ್! ಲೈಫ್ ಹೋ ತೋ ಐಸಿ’ ಎಂಬ ಹಿಂದಿ ಫ್ಯಾಂಟಸಿ ಸಿನಿಮಾದಲ್ಲಿ ಚಿಕ್ಕ ಪಾತ್ರ ಗಿಟ್ಟಿಸಿಕೊಳ್ಳುವ ಮೊದಲು ಅವರು ಸಾಕಷ್ಟು ಸೈಕಲ್ ಹೊಡೆದಿದ್ದರು. 2005ರಲ್ಲಿ ಆ ಸಿನಿಮಾ ಬಿಡುಗಡೆಯಾದ ಮೇಲೂ ಕಷ್ಟ ತಪ್ಪಲಿಲ್ಲ. ಅವರಿಗೆ ಪ್ರಧಾನ ಪಾತ್ರ ಸಿಕ್ಕಿದ್ದು 2009ರಲ್ಲಿ; ಬಂಗಾಳಿ ಸಾಮಾಜಿಕ ಸಿನಿಮಾ ‘ಅಂತಹೀನ್’ ಅವರ ಪ್ರತಿಭೆಯನ್ನು ಸಾಣೆಗೆ ಒಡ್ಡಿತು. ಆಮೇಲೆ ‘ಸಮಾಂತರ್’ ಎಂಬ ಮರಾಠಿ ದುರಂತ ಪ್ರೇಮಕಥೆಯಲ್ಲಿ ನಟನಾವಕಾಶ. ಅಲ್ಲಿಂದ ಆರು ವರ್ಷ ಕಷ್ಟಪಟ್ಟ ಮೇಲೆ ಹಿಂದಿ ಸಿನಿಮಾ ರಂಗ ಮತ್ತೆ ಕೈಬೀಸಿದ್ದು. ‘ಬದ್ಲಾಪುರ್’ನಲ್ಲಿ ದ್ವಿತೀಯಾರ್ಧದಲ್ಲಿ ಕಾಣಿಸಿಕೊಂಡ ಅವರು ಬಹುತೇಕ ವಿಮರ್ಶಕರಿಂದ ಹೆಚ್ಚು ಅಂಕ ಗಿಟ್ಟಿಸಿಕೊಂಡರು. ‘ಫೋಬಿಯಾ’, ‘ಪಾರ್ಚ್ಡ್’ ತರಹದ ಹೊಸ ಯತ್ನದ ಚಿತ್ರಗಳ ಭಾಗವೂ ಆದ ಅವರು, ಮೊದಲಿನಿಂದಲೂ ಪ್ರಯೋಗಮುಖಿ. ‘ಲಸ್ಟ್ ಸ್ಟೋರೀಸ್’, ‘ಸೇಕ್ರೇಡ್ ಗೇಮ್ಸ್’ ನೆಟ್ ಫ್ಲಿಕ್ಸ್ ಸರಣಿಗಳು ಹಾಗೂ ‘ಘೌಲ್’ ಎಂಬ ಹಾರರ್ ಮಿನಿಸರಣಿಯಲ್ಲೂ ಅವರು ಅಭಿನಯಿಸಿದಾಗ ಮುಖ್ಯವಾಹಿನಿ ಸಿನಿಮಾದ ನಟಿಯರು ಹುಬ್ಬೇರಿಸಿದರು.
ಇದು ಹಾಗಿರಲಿ, ಮಲೆಯಾಳಂ, ತಮಿಳು, ತೆಲುಗು ಸಿನಿಮಾಗಳ ಕಡೆಗೂ ಮುಖಮಾಡಿದಾಗ, ‘ಇದೆಂಥ ಚಲನಶೀಲತೆ’ ಎಂದವರೂ ಇದ್ದಾರೆ. ರಜನೀಕಾಂತ್ ಅಭಿನಯದ ‘ಕಬಾಲಿ’ ಸಿನಿಮಾದಲ್ಲಿ ವಯಸ್ಸಿಗೂ ಮೀರಿದ ಪಾತ್ರಕ್ಕೆ ಬಣ್ಣಹಚ್ಚಿದ್ದು, ‘ಪ್ಯಾಡ್ ಮನ್’ನಲ್ಲಿ ಹಳ್ಳಿ ಗೃಹಿಣಿಯಾಗಿ ಮಂದಹಾಸ ಬೀರಿದ್ದು… ಎಲ್ಲವನ್ನೂ ಕಂಡವರಿಗೆ ಅವರ ಬದುಕಿನ ಕಷ್ಟಗಳು ಗೊತ್ತಿರಲಿಕ್ಕಿಲ್ಲ.
ಮೋಹಿತ್ ತಕಾಲ್ಕರ್ ರಂಗತಂಡ ‘ಆಸಕ್ತ ಕಲಾಮಂಚ್’ನಲ್ಲಿ ಕೆಲವು ನಾಟಕಗಳಲ್ಲಿ ಅಭಿನಯಿಸಿದ ಮೇಲೆ ನೃತ್ಯದಿಂದ ನಟನೆಯ ಕಡೆಗೆ ರಾಧಿಕಾಗೆ ಗೀಳುಹತ್ತಿದ್ದು. ಗಿರೀಶ್ ಕಾರ್ನಾಡರ ‘ಬೆಂದ ಕಾಳು ಆನ್ ಟೋಸ್ಟ್’ ಕನ್ನಡ ನಾಟಕದ ಮರಾಠಿ ರೂಪಾಂತರ ‘ಉನೇ ಪೂರೇ ಶೆಹರ್ ಏಕ್’ ನಾಟಕದ ಅಭಿನಯಕ್ಕೆ ಜೋರು ಚಪ್ಪಾಳೆ ಗಿಟ್ಟಿಸಿದ್ದು 2013ರಲ್ಲಿ. ಅಷ್ಟು ಹೊತ್ತಿಗೆ ಅವರಿಗೆ ಲಂಡನ್ ಸಂಗೀತಗಾರ ಬೆನೆಡಿಕ್ಟ್ ಟೇಲರ್ ಜೊತೆ ಮದುವೆಯಾಗಿತ್ತು.ನೃತ್ಯ, ಸಂಗೀತ, ಸಂಸಾರ, ನಾಟಕ ಎಲ್ಲವನ್ನೂ ತೂಗಿಸಿಕೊಂಡು ಬಂದು ಆಮೇಲೆ ಸಿನಿಮಾ ಹಲಗೆಯ ಮೇಲೆ ನಿಂತು ಅತಿ ಪ್ರಯೋಗಮುಖಿ ನಟಿ ಎನಿಸಿಕೊಂಡ ಅವರೀಗ ‘ಅಂಧಾಧುನ್’ ಹಿಂದಿ ಸಿನಿಮಾದ ನಟನೆಯಿಂದ ಗಮನ ಸೆಳೆದಿದ್ದಾರೆ.
‘ನಾನಿರುವುದು ಫ್ರೀಲಾನ್ಸ್ ಕೆಲಸದಲ್ಲಿ. ಸತತವಾಗಿ ಸ್ಕ್ರಿಪ್ಟ್ ಗಳು ಆಯ್ಕೆಗೆ ಬಂದ ದಿನಗಳಿವೆ. ಖಾಲಿ ಕುಳಿತ ದಿನಗಳಿಗೂ ಲೆಕ್ಕವಿಲ್ಲ. ಇವತ್ತು ಮಿಂಚುವ ನಾಳೆ ನಮ್ಮನ್ನು ಗುರುತಿಸದೇ ಹೋಗುವವರೂ ಈ ಸಮಾಜದಲ್ಲಿ ಇದ್ದಾರೆ. ಅದಕ್ಕೇ ನಾನು ಮೊದಲಿನಿಂದಲೂ ಕಲೋಪಾಸಕಿ. ನೃತ್ಯ ಕಲಿಯುವಾಗ ಅದರ ಮೇಲೆ ಗಮನ. ನಾಟಕ ಹಚ್ಚಿಕೊಂಡಾಗ ಅದರ ವರಸೆಗಳತ್ತ ಚಿತ್ತ. ನೆಟ್ ಫ್ಲಿಕ್ಸ್ ಮಾಧ್ಯಮದಲ್ಲಿ ನನ್ನ ಭವಿಷ್ಯ ಹೇಗಿರಬಹುದು ಎಂಬ ಕುತೂಹಲವಿತ್ತು. ಅದಕ್ಕೂ ಉತ್ತರ ಸಿಕ್ಕಿತು. ಹೀಗೇ ನಡೆದದ್ದೇ ದಾರಿಯಾಗಿದೆ’ ಎಂದು ನಗುವ ರಾಧಿಕಾ, ತಮ್ಮ ಸ್ಕ್ರೀನ್ ಟೆಸ್ಟ್ ದಿನಗಳನ್ನೂ ಹೊಸ ಶೋಧ ಎಂದೇ ಹೇಳಿಕೊಳ್ಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.