ADVERTISEMENT

ಜೋಗುಳದ ಗುಂಗಿನಲ್ಲಿ ರಾಧಿಕಾ ಪಂಡಿತ್

ಪ್ರಜಾವಾಣಿ ವಿಶೇಷ
Published 22 ನವೆಂಬರ್ 2018, 19:45 IST
Last Updated 22 ನವೆಂಬರ್ 2018, 19:45 IST
ಯಶ್‌ ಜತೆ ರಾಧಿಕಾ ಪಂಡಿತ್
ಯಶ್‌ ಜತೆ ರಾಧಿಕಾ ಪಂಡಿತ್   

ಬದುಕಿನಲ್ಲಿ ಏನೇ ಮಾಡಿದರೂ ಅದರಲ್ಲಿ ನನ್ನನ್ನು ಪೂರ್ತಿಯಾಗಿ ತೊಡಗಿಸಿಕೊಳ್ಳಬೇಕು; ಬದುಕಿನ ಎಲ್ಲ ಹಂತಗಳನ್ನೂ ಪೂರ್ಣವಾಗಿ ಅನುಭವಿಸಬೇಕು ಎಂದು ಮೊದಲಿನಿಂದಲೂಅಂದುಕೊಂಡವಳು ನಾನು. ನನ್ನ ವಿದ್ಯಾಭ್ಯಾಸದ ಸಂದರ್ಭದಲ್ಲಿ ಪೂರ್ತಿಯಾಗಿ ಅದರಲ್ಲಿ ತೊಡಗಿಕೊಂಡಿದ್ದೆ. ನಂತರ ನಟನೆಗೆ ಇಳಿದೆ. ವೃತ್ತಿಜೀವನಕ್ಕೆ ಪೂರ್ತಿಯಾಗಿ ನನ್ನನ್ನು ಕೊಟ್ಟುಕೊಂಡೆ. ಒಳ್ಳೊಳ್ಳೆ ಸಿನಿಮಾಗಳನ್ನು ಮಾಡಬೇಕು, ಒಳ್ಳೆಯ ನಟಿ ಎನಿಸಿಕೊಳ್ಳಬೇಕು ಎಂದು ನನ್ನ ಗುರಿಯಾಗಿತ್ತು. ಅದು ಸಾಧ್ಯವಾಯ್ತು.

ನಂತರ ಮದುವೆ ಆಗಿ ದಾಂಪತ್ಯಜೀವನಕ್ಕೆ ಅಡಿಯಿಟ್ಟೆ. ದೇವರ ದಯೆಯಿಂದ ನನಗೆ ಒಳ್ಳೆಯ ಹುಡುಗ ಸಿಕ್ಕ. ದಾಂಪತ್ಯ ಜೀವನವನ್ನು ಖುಷಿಯಿಂದ ಅನುಭವಿಸಿದೆ. ಈಗ ತಾಯಿಯಾಗುತ್ತಿದ್ದೇನೆ. ಇದು ಫ್ಯಾಮಿಲಿ ಟೈಮ್ ಎಂಜಾಯ್ ಮಾಡುವ ಸಮಯ.

ಹೀಗೆ ನಾನು ಅಂದುಕೊಂಡ ಹಾಗೆಯೇ ಬದುಕು ನಡೆದುಕೊಂಡು ಬಂದಿದೆ. ಇದೊಂದು ಅದ್ಭುತ ಪ್ರಯಾಣ.ನಾನು ತಾಯಿ ಆಗ್ತಾ ಇದ್ದೀನಿ ಅಂತ ಗೊತ್ತಾದ ಗಳಿಗೆ ನನಗಿನ್ನೂ ಚೆನ್ನಾಗಿ ನೆನಪಿದೆ. ಅಂದು ತುಂಬ ಖುಷಿಪಟ್ಟಿದ್ದೆ ನಾನು. ಈ ಸುದ್ದಿ ಕೇಳಿ ನನಗಿಂತ ಖುಷಿಪಡುವವರು ನನ್ನ ಸುತ್ತಲೂ ಇದ್ದರು. ನನ್ನ ಅಪ್ಪ ಅಮ್ಮ ಇರಲಿ, ಯಶ್‌ ಇರಲಿ ಎಲ್ಲರಿಗೂ ತುಂಬ ಖುಷಿಪಟ್ಟಿದ್ದರು.

ADVERTISEMENT

ನನಗೆ ಪ್ರಪೋಸ್‌ ಮಾಡಿದ ದಿನ ಯಶ್‌ ಮನಸಲ್ಲಿ ಒಂದು ಚಿತ್ರವಿತ್ತಲ್ಲ, ಅದು ಫ್ಯಾಮಿಲಿ ಚಿತ್ರವೇ ಆಗಿತ್ತು. ‘ಡೇಟ್‌ ಮಾಡೋಣ್ವಾ’, ‘ಬಾಯ್‌ಫ್ರೆಂಡ್‌ ಗರ್ಲ್‌ಫ್ರೆಂಡ್‌ ಥರ ಇರೋಣ್ವಾ’ ಅಂತೆಲ್ಲ ಅವರ ಮನಸಲ್ಲಿ ಇರಲೇ ಇಲ್ಲ. ಯಶ್‌ಗೆ ಮಕ್ಕಳು ಅಂದ್ರೆ ತುಂಬ ಇಷ್ಟ. ನಮಗೆ ಮಗು ಆಗ್ತಿದೆ ಎಂದು ಗೊತ್ತಾದಾಗ ಅವರಿಗೆ ಆದ ಖುಷಿ ನೋಡಿ ನನ್ನ ಖುಷಿ ದುಪ್ಪಟ್ಟಾಯ್ತು.

ಒಂದು ಜೀವವನ್ನು, ಜೀವನವನ್ನು ಸೃಷ್ಟಿಸುವ ಅವಕಾಶ ಹೆಣ್ಣಿಗೆ ದೇವರು ಕೊಟ್ಟಿರುವ ವಿಶೇಷ ಶಕ್ತಿ. ಅದು ಕೇವಲ ಹೆಣ್ಣಿಗೆ ಮಾತ್ರ ಇರುವ ಶಕ್ತಿ. ಹಾಗಾಗಿ ಒಂದು ಹೆಣ್ಣಾಗಿ ಇದು ನನಗೆ ತುಂಬ ಖುಷಿಯ–ಹೆಮ್ಮೆಯ ಗಳಿಗೆ.

ಅಲ್ಲದೆ ನನ್ನ ಹೊಟ್ಟೆಯಲ್ಲಿರುವ ಮಗು, ನಮ್ಮಿಬ್ಬರ ಪ್ರೀತಿಯ ಸಾಕ್ಷಿ ಅಲ್ವಾ? ನಮ್ಮ ಕುಟುಂಬ ಆರಂಭವಾಗುವ ಹಂತವಲ್ವಾ ಇದು? ‘ನಂದಗೋಕುಲ’ ಧಾರಾವಾಹಿಯಿಂದಲೇ ನಮ್ಮಿಬ್ಬರ ನಟನೆಯ ಜೀವನ ಶುರುವಾಗಿದ್ದು. ಒಟ್ಟೊಟ್ಟಿಗೇ ಬೆಳೆದೆವು. ಒಳ್ಳೆಯ ಸ್ನೇಹಿತರಾಗಿದ್ದ ಆ ದಿನಗಳಿಂದ ಇಂದು ತಂದೆ–ತಾಯಿ ಆಗುತ್ತಿರುವವರೆಗಿನ ಪ್ರಯಾಣ ನಮ್ಮಿಬ್ಬರಿಗೂ ವಿಶೇಷವಾದದ್ದು.

ಅಮ್ಮ ಅರ್ಥವಾಗುತ್ತಿದ್ದಾಳೆ

ಜೀವವೊಂದು ಹೊಟ್ಟೆಯಲ್ಲಿ ಅಂಕುರಿಸುವ, ಬೆಳೆಯುವ ಅನುಭವ ಶಬ್ದಗಳಲ್ಲಿ ಹೇಳಲು ಸಾಧ್ಯವಿಲ್ಲ. ನನಗೆ ಈಗ ನನ್ನಮ್ಮನ ಮಹತ್ವ ಅರಿವಿಗೆ ಬರಲು ಶುರುವಾಗಿದೆ. ನಾನು ಪ್ರತಿಸಲ ವಾಂತಿಮಾಡಿದಾಗ, ಏನೋ ತಿನ್ನಬೇಕು, ಏನೋ ಮಾಡಬೇಕು ಅನಿಸಿದಾಗ, ನನಗೆ ಕಾಲುನೋವು, ಬೆನ್ನುನೋವು ಬಂದಾಗ ಅಮ್ಮ ನೆನಪಾಗುತ್ತಾರೆ.

ನಾವು ಕಲಾವಿದರು. ಮುಖದ ಮೇಲೆ ಒಂದು ಮೊಡವೆ ಕಲೆ ಮೂಡಬಾರದು ಎಂದು ಎಚ್ಚರಿಕೆ ವಹಿಸುತ್ತಿರುತ್ತೇವೆ. ಆದರೆ ಈ ಸಮಯದಲ್ಲಿ ನಮ್ಮ ಇಡೀ ದೇಹ ಬದಲಾಗುತ್ತದೆ. ನಾನು ಈಗ ನನ್ನ ನಟನೆಯಿಂದ ಬ್ರೇಕ್‌ ತೆಗೆದುಕೊಂಡಿದ್ದೀನಿ. ಆದರೆ ನನ್ನಮ್ಮ ಎಂಟು ತಿಂಗಳವರೆಗೂ ಕೆಲಸಕ್ಕೆ ಹೋಗುತ್ತಿದ್ದರಂತೆ. ಅದೂ ಬಸ್‌ ಹತ್ತಿಕೊಂಡು ಹೋಗಿ! ನಾನು ಕೆಲಸಕ್ಕೆ ಹೋಗದಿದ್ದರೂ ವಾಂತಿ, ತಲೆನೋವು, ಬೆನ್ನುನೋವುಗಳು ಬಂದಾಗ ಸಹಿಸಿಕೊಳ್ಳಲಾಗದೆ ಒದ್ದಾಡುತ್ತಿರುತ್ತೇನೆ. ಆದರೆ ಅವರು ಈ ಎಲ್ಲವನ್ನೂ ಸಹಿಸಿಕೊಂಡು, ಮನೆಕೆಲಸವನ್ನೂ ಮಾಡಿಕೊಂಡು ನಮ್ಮನ್ನು ಹೆತ್ತರಲ್ಲ ಎಂದು ಯೋಚಿಸಿದರೆ ಆಶ್ಚರ್ಯವಾಗುತ್ತದೆ. ನಾನು ಅಮ್ಮನಾಗುವ ಪ್ರಕ್ರಿಯೆಯಲ್ಲಿ ನನ್ನಮ್ಮನ್ನು ಹೆಚ್ಚು ಹೆಚ್ಚು ಅರ್ಥಮಾಡಿಕೊಳ್ಳತೊಡಗಿದ್ದೇನೆ. ಅವರು ಅಂದು ಕಷ್ಟಪಟ್ಟಿದ್ದೆಲ್ಲವೂ ನಮಗೋಸ್ಕರ. ನನಗೆ ಮಗು ಹುಟ್ಟುವ ಮೊದಲೇ ಹೀಗೆ ಅನಿಸುತ್ತಿದೆ. ಮಗುವಾದ ಮೇಲೆ ಅದನ್ನು ಪಾಲಿಸುವುದರಲ್ಲಿ ಅಮ್ಮನೇ ನನಗೆ ಜತೆಯಾಗಬೇಕಷ್ಟೆ.

ನನ್ನ ಪೊರೆವ ತೊಟ್ಟಿಲು

ನನ್ನ ಕುಟುಂಬ ನನ್ನ ಶಕ್ತಿ. ಅದು ಯಾವತ್ತೂ ನನ್ನ ಮನಸಲ್ಲಿ ನಕಾರಾತ್ಮಕ ಆಲೋಚನೆ ಸುಳಿಯಲು ಬಿಟ್ಟಿಲ್ಲ. ಅಲ್ಲಿ ಹೋಗಬಾರದು, ಇಲ್ಲಿ ಹೋಗಬಾರದು ಎಂದು ನಿರ್ಬಂಧಪಡಿಸಲಿಲ್ಲ. ಮನೆಯಲ್ಲಿಯೇ ಕುಳಿತುಕೊಳ್ಳಬೇಕು, ಇಂಥ ಬಟ್ಟೆಯನ್ನೇ ಹಾಕಿಕೊಳ್ಳಬೇಕು ಎಂದೆಲ್ಲ ಯಾವತ್ತೂ ಹೇಳಿಲ್ಲ. ಗರ್ಭಿಣಿಯಾಗಿದ್ದರಿಂದ ನನ್ನ ಬದುಕೇ ಬದಲಾಗಿಹೋಯ್ತು; ಇನ್ಮುಂದೆ ಏನೂ ಮಾಡೋಕೆ ಸಾಧ್ಯ ಇಲ್ಲ ಎಂದು ಯಾವತ್ತೂ ಅನಿಸಿಲ್ಲ. ಸಿನಿಮಾ ಡಬ್ಬಿಂಗ್ ಕೂಡ ಮಾಡಿದ್ದೀನಿ. ಆರಾಮಾಗಿ ಓಡಾಡಿಕೊಂಡೇ ಇದ್ದೇನೆ. ಇಷ್ಟು ಸುರಕ್ಷಿತಭಾವದಲ್ಲಿ ನನ್ನನ್ನು ಪೊರೆಯುತ್ತಿರುವವರು ನನ್ನ ಗಂಡ ಮತ್ತು ಅಮ್ಮ.

ನಾನು ಕಾಲೇಜಿನಿಂದಲೂ ಕೆಲಸ ಮಾಡುತ್ತ ಬರುತ್ತಿದ್ದೇನೆ. ಮನೆಯಲ್ಲಿ ಖಾಲಿ ಕೂತ ಹುಡುಗಿಯೇ ಅಲ್ಲ ನಾನು. ಆದರೆ ಈ ಸಮಯದಲ್ಲಿ ಜಾಸ್ತಿ ಓಡಾಡುವುದಕ್ಕಾಗುವುದಿಲ್ಲ. ಹಾಗಾಗಿ ನನಗೆ ಬೋರ್‌ ಆಗುವ ಸಾಧ್ಯತೆ ಇದ್ದೇ ಇತ್ತು. ಎಷ್ಟೂ ಅಂತ ಪುಸ್ತಕಗಳನ್ನು ಓದುವುದು, ಸಿನಿಮಾಗಳನ್ನು ನೋಡುವುದು? ಆದರೆ ನಮ್ಮ ಸುತ್ತಮುತ್ತ ಇರುವವರು ನಮ್ಮೊಂದಿಗೆ ಖುಷಿ ಖುಷಿಯಾಗಿದ್ದರೆ ಮನಸ್ಸಿಗೆ ಸಿಗುವ ನೆಮ್ಮದಿಯೇ ಬೇರೆ. ಯಶ್‌, ಯಾವ ಚಿಂತೆಯನ್ನು ನನ್ನ ಹತ್ತಿರಕ್ಕೂ ಸುಳಿಯದ ಹಾಗೆ ನೋಡಿಕೊಂಡಿದ್ದಾರೆ. ಅಮ್ಮ ಮೊದಮೊದಲು ಬಯ್ಯುತ್ತಿದ್ದರು. ಹಾಗೆ ಮಾಡಬೇಕು ಹೀಗೆ ಮಾಡಬೇಕು ಎಂದೆಲ್ಲ. ಆದರೆ ಈಗ ಅವರ ದೃಷ್ಟಿಯೂ ಬದಲಾಗಿದೆ. ನನ್ನನ್ನು ತುಂಬ ಕಾಳಜಿಯಿಂದ ಮತ್ತೆ ಮಗುವಿನ ಥರವೇ ನೋಡಲು ಶುರುಮಾಡಿದ್ದಾರೆ. ತಾಯಿ ಆಗುತ್ತಿರುವುದು ನಾನಾದರೂ ಇಡೀ ಕುಟುಂಬ ಮಗುವಿನ ಬರುವನ್ನು ಸಂಭ್ರಮಿಸುತ್ತಿದೆ. ಮಗು ಬಂದಮೇಲೆ ನನ್ನನ್ನು ಎಲ್ಲರೂ ಮರೆತುಬಿಡುತ್ತಾರೇನೋ... ಹ್ಹ ಹ್ಹಾ..

ನಾನು ಈ ಹಿಂದೆ ಸಿನಿಮಾದಲ್ಲಿ ಎರಡು ಮೂರು ಸಲ ಬಸುರಿ ಹೆಂಗಸಿನ ಪಾತ್ರದಲ್ಲಿ ನಟಿಸಿದ್ದೇನೆ. ಆಗ ಅದು ನನಗೆ ಒಂದು ಪಾತ್ರ ಅಷ್ಟೇ ಆಗಿತ್ತು. ದಿಂಬು ಇಟ್ಟುಕೊಂಡು ನಟಿಸಿಬಿಡುತ್ತಿದ್ದೆ. ಅದಕ್ಕಿಂತ ಹೆಚ್ಚೇನೂ ಅನಿಸಿರಲಿಲ್ಲ. ಯಾವಾಗಲಾದರೂ ನಾನು ಓಡಾಡುತ್ತಿರುವಾಗ ಬಸುರಿ ಹೆಂಗಸರು ಬಂದರೂ ಅಷ್ಟೇನೂ ಗಮನ ಕೊಡುತ್ತಿರಲಿಲ್ಲ. ಎಲ್ಲಾದರೂ ಮಗು ಅಳುತ್ತಿರುವುದನ್ನು ಕೇಳಿದಾಗ ಇರಿಟೇಟ್‌ ಆಗುತ್ತಿರುತ್ತದೆ. ತಾಯಿ ಮಗುವನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲವಲ್ಲ ಅಂತ ಅಸಮಧಾನ ಹುಟ್ಟುತ್ತಿತ್ತು. ಆದರೆ ಈಗ ಅವೆಲ್ಲವೂ ಬೇರೆ ರೀತಿಯೇ ಆಗಿ ಗಮನ ಸೆಳೆಯುತ್ತಿವೆ. ಹೆಚ್ಚು ಆಪ್ತವಾಗುತ್ತಿವೆ. ನಾನು ಹೇಗೆ ಸಂಭಾಳಿಸುತ್ತೀನಿ ಎಂದು ಭಯವೂ ಆಗುತ್ತದೆ.

ನಟನೆಯ ಬದುಕು ಮುಗಿದಿಲ್ಲ

ಇದು ನನ್ನ ಬದುಕು. ನಟನೆ ಎನ್ನುವುದು ನನ್ನ ಬದುಕಿನ ಬಹುಮುಖ್ಯ ಭಾಗ. ಅದು ಯಾವತ್ತಿಗೂ ನನ್ನ ಬದುಕಿನ ಮುಖ್ಯಭಾಗ ಆಗಿಯೇ ಉಳಿದುಕೊಳ್ಳುತ್ತದೆ. ನಾನು ತಾಯಿ ಆದ ಮೇಲೆ ನಟನೆ ನಿಲ್ಲಿಸಿಬಿಡಬೇಕು ಎಂಬ ಆಲೋಚನೆ ಖಂಡಿತ ನನ್ನ ಮನಸಲ್ಲಿ ಇಲ್ಲ. ನಟನೆಯನ್ನು ನನ್ನ ಬದುಕಿನಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಈಗ ನನ್ನ ಕುಟುಂಬದ ಮೇಲೆ ಗಮನಹರಿಸುತ್ತಿದ್ದೇನೆ. ಆಮೇಲೆ ಖಂಡಿತ ನಟನೆ ಮುಂದುವರಿಸುತ್ತೇನೆ. ಯಾರೋ ಒಬ್ಬರು ಹೇಳಿದ್ದಾರಲ್ಲಾ ‘ಕಲಾವಿದನಿಗೆ ಸಾವು ಇರುವುದಿಲ್ಲ’ ಎಂದು. ಕಲೆಯ ಮೇಲಿನ ಪ್ರೀತಿ ಯಾವತ್ತೂ ಹೋಗುವುದಿಲ್ಲ.ಒಂದೊಮ್ಮೆ ನಾನು ಮನೆಯಲ್ಲಿ ಕೂರುತ್ತೇನೆ ಎಂದರೂ ಯಶ್‌ ಬಿಡುವುದಿಲ್ಲ. ಈಗ ನನ್ನ ಆದ್ಯತೆ ಕುಟುಂಬ. ಕುಟುಂಬ ಒಂದು ಹಂತಕ್ಕೆ ಬರುತ್ತಿದ್ದಂತೆಯೇ ಖಂಡಿತ ನಟನೆಗೆ ಮತ್ತೆ ಮರಳುತ್ತೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.