ADVERTISEMENT

ಕಾಲಿವುಡ್‌ಗೆ ರಾಧಿಕಾ ಪ್ರವೇಶ

ಕೆ.ಎಚ್.ಓಬಳೇಶ್
Published 5 ಜುಲೈ 2018, 20:29 IST
Last Updated 5 ಜುಲೈ 2018, 20:29 IST
ರಾಧಿಕಾ ಚೇತನ್‌
ರಾಧಿಕಾ ಚೇತನ್‌   

‘ಒಳ್ಳೆಯ ಸಿನಿಮಾ ನೋಡಿದಾಗ ಅಂತಹ ಪಾತ್ರದಲ್ಲಿ ನಟಿಸಬೇಕೆಂದು ಮನಸ್ಸು ತುಡಿಯುತ್ತದೆ. ಆ ಪಾತ್ರ ಮುಗಿದರೆ ಮುಂದೇನು ಎನ್ನುವ ಪ್ರಶ್ನೆ ಕಾಡುತ್ತದೆ. ನನಗೆ ಇಂತಹದ್ದೇ ಪಾತ್ರದಲ್ಲಿ ನಟಿಸಬೇಕೆಂಬ ಆಸೆಯಿಲ್ಲ. ಆದರೆ, ನಟಿಯರಾದ ಆರತಿ, ಕಲ್ಪನಾ ಅವರು ಮಾಡಿರುವಂತಹ ಪಾತ್ರಗಳಲ್ಲಿ ಅಭಿನಯಿಸುವ ಇಚ್ಛೆಯಿದೆ’

–ಹೀಗೆ ತಮ್ಮ ನಟನೆಯ ಕನಸನ್ನು ಬಿಚ್ಚಿಡುತ್ತಾರೆ ನಟಿ ರಾಧಿಕಾ ಚೇತನ್. ‘ನಾನು ಪಾತ್ರಗಳಿಗೆ ಚೌಕಟ್ಟು ವಿಧಿಸುವುದಿಲ್ಲ. ನಟನೆ ಮೂಲಕ ತೃಪ್ತಿ ಪಡೆಯುತ್ತೇನೆ’ ಎನ್ನುತ್ತಾರೆ.

ರಾಧಿಕಾ ಓದಿದ್ದು ಎಂಜಿನಿಯರಿಂಗ್‌ ಪದವಿ. ರಂಗದ ನಂಟು ಬೆಳೆಸಿಕೊಂಡಿರುವ ಅವರು ‘ರಂಗಿತರಂಗ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪ್ರವೇಶಿಸಿದರು. ಆ ಚಿತ್ರದಲ್ಲಿ ಭಯಪಡುವ ಪಾತ್ರ ನಿರ್ವಹಿಸಿದ್ದ ಅವರಿಗೆ, ‘ಯುಟರ್ನ್’ ಚಿತ್ರದಲ್ಲಿ ಇದಕ್ಕೆ ತದ್ವಿರುದ್ಧದ ಪಾತ್ರ ಸಿಕ್ಕಿತ್ತು. ಈ ವಾರ ತೆರೆಕಾಣುತ್ತಿರುವ ‘ಅಸತೋಮ ಸದ್ಗಮಯ’ ಚಿತ್ರದಲ್ಲಿ ತನ್ನ ಮೂಲ ಹುಡುಕಿಕೊಂಡು ಭಾರತಕ್ಕೆ ಬರುವ ಫಿನ್ಲೆಂಡ್‌ನ ಯುವತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ADVERTISEMENT

ರಾಧಿಕಾ ಉಡುಪಿಯವರು. ಆದರೆ, ಬೆಳೆದಿದ್ದು ಮೈಸೂರಿನಲ್ಲಿ. ಕಾಲೇಜಿನ ದಿನಗಳಲ್ಲಿಯೇ ರಂಗಭೂಮಿಯ ಸಖ್ಯ ಬೆಳೆಸಿಕೊಂಡ ಅವರು, ‘ವಿ ಮೂವ್‌ ಥಿಯೇಟರ್’ ತಂಡದಲ್ಲಿ ಗುರುತಿಸಿಕೊಂಡಿದ್ದರು. ಅವರು ಕಥಕ್‌ ನೃತ್ಯಗಾತಿಯೂ ಹೌದು.

‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ... ಚಿತ್ರದಲ್ಲಿ ಅನಂತನಾಗ್‌ ಸರ್‌ ಅವರೊಟ್ಟಿಗೆ ನಟಿಸಿದೆ. ನನ್ನ ಮನಸ್ಸಿಗೆ ಹತ್ತಿರವಾಗಿದ್ದ ಪಾತ್ರವದು. ಅಸತೋಮ ಸದ್ಗಮಯ ಚಿತ್ರದ ಪಾತ್ರವೂ ಅಂತಹದ್ದೇ ಖುಷಿ ಕೊಟ್ಟಿದೆ. ನನ್ನ ಹಿಂದಿನ ಚಿತ್ರಗಳಿಗಿಂತ ಭಿನ್ನವಾದ ಪಾತ್ರ. ಈ ಫಿನ್ಲೆಂಡ್‌ ಬೆಡಗಿಗೆ ಪೇಟಿಂಗ್‌, ಯೋಗಾಭ್ಯಾಸ ಕೂಡ ಗೊತ್ತು. ಭಾರತೀಯ ಸಂಸ್ಕೃತಿ ಬಗ್ಗೆ ಅವಳಿಗೆ ಅಪರಿಮಿತ ಪ್ರೀತಿ’ ಎಂದು ನಕ್ಕರು.

ಚಿತ್ರದಲ್ಲಿನ ಪಾತ್ರಕ್ಕಾಗಿ ಅವರು ಸಾಕಷ್ಟು ತಯಾರಿ ನಡೆಸಿದರಂತೆ. ಫಿನ್ಲೆಂಡ್‌ನ ವೇಷಭೂಷಣ ಜೊತೆಗೆ ಹೇರ್‌ಸ್ಟೈಲ್‌ ಕೂಡ ಬದಲಾವಣೆ ಮಾಡಿಕೊಂಡಿದ್ದಾರಂತೆ. ‘ಅಲ್ಲಿನ ಸಂಸ್ಕೃತಿ ಬಗ್ಗೆ ಆಳವಾಗಿ ಅಧ್ಯಯನ ನಡೆಸಿದ ಬಳಿಕ ಪಾತ್ರ ನಿರ್ವಹಿಸಿದೆ’ ಎನ್ನುತ್ತಾರೆ.

‘ಪ್ರಸ್ತುತ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುತ್ತಿವೆ. ಇದಕ್ಕೆ ಕಾರಣಗಳು ಹಲವು. ಸಮಾಜದಲ್ಲಿ ಈ ಶಾಲೆಗಳಲ್ಲಿ ಓದುವ ಮಕ್ಕಳನ್ನು ನೋಡುವ ದೃಷ್ಟಿಯೇ ಭಿನ್ನವಾಗಿದೆ. ಇದರ ಅರಿವು ನನಗಿದೆ. ಚಿತ್ರದಲ್ಲಿ ಇಂದಿನ ಶೈಕ್ಷಣಿಕ ವ್ಯವಸ್ಥೆ ಕುರಿತು ಹೇಳಲಾಗಿದೆ’ ಎಂಬುದು ಅವರ ವಿವರಣೆ.

‘ರಂಗಿತರಂಗ’ ಚಿತ್ರದ ಬಳಿಕ ಸಿಕ್ಕಿದ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡ ಖುಷಿ ಅವರಿಗಿದೆ. ಆದರೆ, ಪಾತ್ರಗಳ ಆಯ್ಕೆಯಲ್ಲಿ ಅವರು ಸಾಕಷ್ಟು ಚ್ಯೂಸಿ. ತಮಿಳಿನ ಒಂದು ಸಿನಿಮಾದಲ್ಲಿ ನಟಿಸುವ ಅವಕಾಶ ಬಂದಿದೆಯಂತೆ.

‘ಪರಭಾಷೆಯ ಚಿತ್ರಗಳಲ್ಲೂ ನಟಿಸಲು ನಾನು ಸಿದ್ಧ. ಆದರೆ, ಒಳ್ಳೆಯ ಪಾತ್ರಗಳಿಗಷ್ಟೇ ನನ್ನ ಮೊದಲ ಆದ್ಯತೆ. ಆ ಪಾತ್ರ ನನಗೆ ಖುಷಿ ಕೊಡಬೇಕು. ಜೊತೆಗೆ, ಪ್ರೇಕ್ಷಕರಿಗೂ ಇಷ್ಟವಾಗಬೇಕು’ ಎನ್ನುವುದು ಅವರ ಸ್ಪಷ್ಟನುಡಿ.

‘ತಮಿಳು ಚಿತ್ರವೊಂದರಲ್ಲಿ ನಟಿಸಲು ಆಹ್ವಾನ ಬಂದಿರುವುದು ನಿಜ. ಅದು ಮಾತುಕತೆಯ ಹಂತದಲ್ಲಿದೆ. ಶೀಘ್ರವೇ, ಅದರ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತೇನೆ’ ಎನ್ನುತ್ತಾರೆ.

ಸದ್ಯ ಅವರು ‘ಚೇಸ್‌’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ. ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ... ಚಿತ್ರ ನಿರೀಕ್ಷಿತ ಯಶಸ್ಸು ತಂದುಕೊಡದಿದ್ದರೂ ಪಾತ್ರ ತೃಪ್ತಿ ಕೊಟ್ಟಿತು. ಅಸತೋಮ ಸದ್ಗಮಯ ಚಿತ್ರದಲ್ಲಿ ನನ್ನಲ್ಲಿನ ಭಾವನೆಗಳ ಅಭಿವ್ಯಕ್ತಿಗೆ ಅವಕಾಶ ಸಿಕ್ಕಿದೆ’ ಎನ್ನುತ್ತಾರೆ ರಾಧಿಕಾ.⇒v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.