ADVERTISEMENT

ಸಂದರ್ಶನ ‌| ಅಭಿನಯವೇ ನನಗೆ ಚಿಕಿತ್ಸೆ ಎಂದ ನಟ ರಾಘವೇಂದ್ರ ರಾಜ್‌ಕುಮಾರ್‌

ವಿನಾಯಕ ಕೆ.ಎಸ್.
Published 7 ಸೆಪ್ಟೆಂಬರ್ 2023, 23:31 IST
Last Updated 7 ಸೆಪ್ಟೆಂಬರ್ 2023, 23:31 IST
<div class="paragraphs"><p>ನಟ ರಾಘವೇಂದ್ರ ರಾಜ್‌ಕುಮಾರ್‌</p></div>

ನಟ ರಾಘವೇಂದ್ರ ರಾಜ್‌ಕುಮಾರ್‌

   
ರಾಘವೇಂದ್ರ ರಾಜ್‌ಕುಮಾರ್‌, ಶ್ರುತಿ ಮುಖ್ಯಭೂಮಿಕೆಯಲ್ಲಿರುವ ‘13’ ಚಿತ್ರ ಮುಂದಿನ ವಾರ ತೆರೆ ಕಾಣುತ್ತಿದೆ. ಚಿತ್ರದ ಕುರಿತು, ತಮ್ಮ ಐದು ದಶಕಗಳ ಸಿನಿ ಪಯಣದ ಕುರಿತು ರಾಘವೇಂದ್ರ ರಾಜ್‌ಕುಮಾರ್‌ ‘ಸಿನಿಮಾ ಪುರವಣಿ’ಯೊಂದಿಗೆ ಮಾತಿಗೆ ಸಿಕ್ಕರು......

ಈ ಸಿನಿಮಾದಲ್ಲಿ ನಿಮ್ಮ ಪಾತ್ರವೇನು?

ನಿವೃತ್ತ ಸೈನಿಕ. ನಿವೃತ್ತಿ ಬಳಿಕ ಗುಜರಿ ಅಂಗಡಿ ಮಾಲೀಕ ಮೋಹನ್ ಕುಮಾರ್ ಆಗಿ ಕಾಣಿಸಿಕೊಂಡಿದ್ದೇನೆ. ಮಾಮೂಲಿ ನಾಯಕ–ನಾಯಕಿ ಕಥೆ ಹೊಂದಿರುವ ಚಿತ್ರವಲ್ಲ. ಗಟ್ಟಿಯಾದ ಕಥಾವಸ್ತು, ಚಿತ್ರಕಥೆಯೇ ಇಲ್ಲಿ ನಾಯಕ. ನಟಿ ಶ್ರುತಿ ಜೊತೆಗೆ ಬಹಳ ವರ್ಷದ ನಂತರ ನಟಿಸಿರುವೆ. ನಾವಿಬ್ಬರು ಚಿತ್ರದಲ್ಲಿ ಗಂಡ–ಹೆಂಡತಿ. ನಾನು ಹಿಂದೂ. ಶ್ರುತಿ ಅವರು ಮುಸ್ಲಿಂ. ಆದಾಗ್ಯೂ ಇಬ್ಬರ ಬದುಕಿಗೆ ಜಾತಿ, ಧರ್ಮ ಅಡ್ಡ ಬರುವುದಿಲ್ಲ. ಒಂದೇ ಮನೆಯಲ್ಲಿ ಇಬ್ಬರೂ ಪೂಜೆ ಮತ್ತು ನಮಾಜ್‌ನಲ್ಲಿ ಭಾಗಿಯಾಗುತ್ತೇವೆ.‌

ADVERTISEMENT

ಹಾಗಿದ್ದರೆ ಚಿತ್ರದಲ್ಲಿ ನೀವು ಎಷ್ಟು ಕಾಲ ಕಾಣಿಸಿಕೊಳ್ಳುವಿರಿ?

ಸಿನಿಮಾದಲ್ಲಿ ಪೂರ್ತಿಯಾಗಿಯೇ ಕಾಣಿಸಿಕೊಳ್ಳುತ್ತೇನೆ. ಆದರೆ ನಾಯಕನನ್ನು ವಿಜೃಂಬಿಸುವ ಕಥೆಯಲ್ಲ. ಈಗೆಲ್ಲ ಸಿನಿಮಾದಲ್ಲಿ ರಾಘಣ್ಣ ಇರುತ್ತಾರೆ ಹೊರತು, ರಾಘಣ್ಣನದ್ದೇ ಸಿನಿಮಾ ಆಗಿರುವುದಿಲ್ಲ. ಲಕ್ವ ಹೊಡೆದು ಚೇತರಿಸಿಕೊಂಡ ನಂತರ ನನಗೆ ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸುವುದು ಒಂದು ರೀತಿಯ ಚಿಕಿತ್ಸೆಯಂತೆ ಭಾಸವಾಗುತ್ತದೆ. ಸೆಟ್‌ನಲ್ಲಿ ಎಲ್ಲರ ಜೊತೆ ಬೆರೆಯುತ್ತೇನೆ, ಓಡಾಡುತ್ತೇನೆ, ಉತ್ಸಾಹದಿಂದ ಭಾಗಿಯಾಗುತ್ತೇನೆ. ಇದೆಲ್ಲ ಒಂದು ರೀತಿ ನನ್ನನ್ನು ಸಕ್ರಿಯವಾಗಿಡುತ್ತದೆ.

ನಿಮ್ಮ ಮುಂದಿನ ಯೋಜನೆಗಳ ಮಾಹಿತಿ ಸಿಗಬಹುದಾ?

‘ಸರ್ಕಾರಿ ಶಾಲೆ’ ಎಂಬ ಚಿತ್ರವೊಂದು ‘ಅಪ್ಪು’ ಶಾಲಾದಿನಗಳನ್ನು ನೆನಪಿಸುವ ಚಿತ್ರ. ಹೀಗಾಗಿ ಈ ಚಿತ್ರದಲ್ಲೊಂದು ಪಾತ್ರ ಮಾಡಿರುವೆ. ‘ರಂಗಸಮುದ್ರ’ ಚಿತ್ರದಲ್ಲಿ ನಟಿಸಿರುವೆ. ವಿನಯ್ ರಾಜ್‌ಕುಮಾರ್‌ ‘ಪೆಪೆ’ ಚಿತ್ರದಲ್ಲಿ ಇದ್ದೇನೆ. ಆದರೆ ಅಪ್ಪನಾಗಿ ಅಲ್ಲ, ಬದಲಿಗೆ ಒಂದು ಪಾತ್ರದಲ್ಲಿ ನಟಿಸಿರುವೆ. ಇವತ್ತಿನ ಸಿನಿಮಾ ಬೇರೆ ರೀತಿಯೇ ಇದೆ. ಹೊಸಬರ ಜೊತೆ ನಾನು ಒಂದಷ್ಟು ಕಲಿಯಲು ಯತ್ನಿಸುತ್ತಿರುವೆ. 

ನೀವು ನಾಯಕರಾಗಿ ನಟಿಸುತ್ತಿದ್ದ ದಿನಗಳಿಗೂ, ಇವತ್ತಿಗೂ ಚಿತ್ರರಂಗ ಎಷ್ಟು ಬದಲಾಗಿದೆ ಎನ್ನಿಸುತ್ತದೆ?

ಬಹಳ ಒಳ್ಳೆ ಪ್ರಶ್ನೆ ಕೇಳಿದ್ದೀರಿ. ಆವಾಗ ನನ್ನ ಚಿತ್ರಗಳಿಗೆ ಅಮ್ಮನೇ ನಿರ್ಮಾಪಕಿ. ನಮ್ಮದೇ ನಿರ್ಮಾಣ ಸಂಸ್ಥೆ. ಒಂದು ರೀತಿ ಯಜಮಾನನಾಗಿದ್ದೆ. ಇಡೀ ಸೆಟ್‌ ನಾನು ಹೇಳಿದಂತೆ ಕೇಳುತ್ತಿತ್ತು. ಜನ ನಮ್ಮ ಸಿನಿಮಾಗಳನ್ನು ನೋಡುತ್ತಿದ್ದರು. ಹೀಗಾಗಿ ಅಷ್ಟೊಂದು ಆಸಕ್ತಿಯಿಂದ ನಟನೆಯಲ್ಲಿ ತೊಡಗಿಸಿಕೊಳ್ಳಲಿಲ್ಲ. ಈಗ ಹಾಗಲ್ಲ. ನಾನು ಸಂಬಳಕ್ಕೆ ಕೆಲಸ ಮಾಡುವ ನೌಕರ. ನನ್ನ ನಿರ್ಮಾಪಕನಿಗೆ ಮೋಸವಾಗಬಾರದೆಂದು ಹೊಸಬರ ಜೊತೆ ತೊಡಗಿಸಿಕೊಂಡು ಸಾಕಷ್ಟು ಕಲಿಯುತ್ತಿದ್ದೇನೆ. ಕಳೆದ 10 ವರ್ಷಗಳಲ್ಲಿ ನಟನಾಗಿ ಸಾಕಷ್ಟು ಕಲಿತಿರುವೆ. ಆವತ್ತೂ ಹೀಗೆ ಆಸಕ್ತಿಯಿಂದ ಕಲಿತಿದ್ದರೆ ನಾನು ಶಿವಣ್ಣ, ಅಪ್ಪು ರೀತಿಯೇ ಬೆಳೆದಿರುತ್ತಿದ್ದೆ ಎಂದು ಈಗ ಅನ್ನಿಸುತ್ತದೆ.

ನೀವು ಅಂದುಕೊಂಡು ಈವರೆಗೂ ಮಾಡಲಾಗದ ಪಾತ್ರಗಳು ಅಥವಾ ಸಿನಿಮಾಗಳು ಯಾವುವು?

ನಾನು ರಾಜ್‌ಕುಮಾರ್‌ ಮಗನಾಗಿರಬಹುದು. ಅವರ ವರ್ಚಸ್ಸಿನಿಂದಲೇ ನಟನಾಗಿರಬಹುದು. ಆದರೆ ನಟನಾಗಿ ಅವರ ಸಮೀಪ ಸುಳಿಯಲೂ ಸಾಧ್ಯವಿಲ್ಲ. ಅಪ್ಪಾಜಿ ಮಾಡಿದಂತೆ ಐತಿಹಾಸಿಕ, ಪೌರಾಣಿಕ ಪಾತ್ರಗಳನ್ನು ಮಾಡಬೇಕು ಎಂಬ ಆಸೆ ಕನಸಾಗಿಯೇ ಉಳಿದಿದೆ. ರಾಘವೇಂದ್ರ ಸ್ವಾಮಿಗಳು, ಕನಕದಾಸರ ಪಾತ್ರಗಳನ್ನು ಹೊಂದಿರುವ ಕಥೆಗಳು, ಆ ರೀತಿ ಸಿನಿಮಾ ಮಾಡಬಲ್ಲ ನಿರ್ದೇಶಕರು ನನಗೆ ಸಿಗಲಿಲ್ಲ. ಸಿಕ್ಕರೆ ಈಗಲೂ ಮಾಡುವ ಹಂಬಲವಿದೆ.

ನಿಮ್ಮ ನಿರ್ಮಾಣ ಸಂಸ್ಥೆಯಿಂದ ಹೊಸ ಸಿನಿಮಾಗಳ ಆಲೋಚನೆ ಇದೆಯಾ?

‘ವಜ್ರೇಶ್ವರಿ ಕಂಬೈನ್ಸ್‌’ ಅಮ್ಮ ಕಟ್ಟಿದ ಸಂಸ್ಥೆ. ನೂರಾರು ಅತ್ಯುತ್ತಮ ಸಿನಿಮಾಗಳನ್ನು ಮಾಡಿದ್ದರು. ಈಗ ಆ ಸಂಸ್ಥೆಯ ಮೂಲಕ ಏನೂ ಮಾಡುತ್ತಿಲ್ಲ. ಅವರು ಮಾಡಿಟ್ಟ ಹೆಸರನ್ನು ಹಾಳು ಮಾಡಬಾರದು, ಕನಿಷ್ಠ ಉಳಿಸಿಕೊಳ್ಳಬೇಕು. ‘ಶಿವಣ್ಣ’, ‘ಅಪ್ಪು’ ಅವರವರದ್ದೇ ನಿರ್ಮಾಣ ಸಂಸ್ಥೆಗಳನ್ನು ಕಟ್ಟಿದ್ದಾರೆ. ಮುಂದೆ ಒಳ್ಳೆ ಕಥೆ ಸಿಕ್ಕಿ, ಮಕ್ಕಳು ಸಂಸ್ಥೆಯನ್ನು ಬೆಳೆಸಿಕೊಂಡು ಹೋಗಲು ಬಯಸಿದರೆ ಈ ಸಂಸ್ಥೆಯಿಂದ ಸಿನಿಮಾಗಳು ಬರಬಹುದು. ಸದ್ಯಕ್ಕಂತು ಯಾವ ಆಲೋಚನೆಯೂ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.