ಹೊಂಬಾಳೆ ಫಿಲ್ಮ್ಸ್ ಹಾಗೂ ನಿರ್ದೇಶಕ ಸಂತೋಷ್ ಆನಂದರಾಮ್ ಕಾಂಬಿನೇಷನ್‌ನಲ್ಲಿ ಮೂಡಿಬಂದಿದ್ದ ‘ರಾಜಕುಮಾರ’ ಹಾಗೂ ‘ಯುವರತ್ನ’ ಬಾಕ್ಸ್ ಆಫೀಸ್‌ನಲ್ಲಿ ಗೆದ್ದಿದ್ದವು. ಇದೀಗ ಇದೇ ಕಾಂಬಿನೇಷನ್‌ನಲ್ಲಿ ಸೆಟ್ಟೇರಿರುವ ‘ರಾಘವೇಂದ್ರ ಸ್ಟೋರ್ಸ್’ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.
ಮನರಂಜನೆಯ ರಸದೌತಣ ಬಡಿಸಲು ನಟ ನವರಸ ನಾಯಕ ಜಗ್ಗೇಶ್ ವರಮಹಾಲಕ್ಷ್ಮಿ ಹಬ್ಬದಂದು ಬರಲಿದ್ದಾರೆ.
‘ರಾಘವೇಂದ್ರ ಸ್ಟೋರ್ಸ್ ಅಡುಗೆ ಸವಿಯಲು ಸಮಯ ಬಂದಿದೆ. ವರಮಹಾಲಕ್ಷ್ಮಿಯ ಹಬ್ಬದಂದು(ಆ.5) ಸಿಹಿಸವಿಯಲು ತಯಾರಾಗಿ. ಇದು ಚಿತ್ರವಲ್ಲ ಒಂದು ಅದ್ಭುತ ಕಾದಂಬರಿ. ಇಂಥ ಅವಕಾಶ ನೀಡಿದ ಹೊಂಬಾಳೆ ಫಿಲ್ಸ್‌ಗೆ ಧನ್ಯವಾದ. ಸಂತೋಷ್ ಆನಂದರಾಮ್ ನನ್ನನ್ನು ಬಹಳ ಅದ್ಭುತವಾಗಿ ಬಳಸಿಕೊಂಡಿದ್ದಾನೆ, ಧನ್ಯವಾದ’ ಎಂದು ಜಗ್ಗೇಶ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿ ಟ್ವೀಟ್ ಮಾಡಿರುವ ಸಂತೋಷ್ ಆನಂದರಾಮ್, ‘ಅಣ್ಣ ನಿಮ್ಮಂತ ಅಪ್ರತಿಮ ಕಲಾವಿದರ ಜೊತೆ ಸಿನಿಮಾ ಮಾಡುವುದು ನಮ್ಮಂತ ನಿರ್ದೇಶಕರಿಗೆ, ಬರಹಗಾರರಿಗೆ ಒಂದು ಅನುಭವ ಹಾಗು ಕಲಿಕೆ. ನಿಮ್ಮ 40 ವರ್ಷದ ಅನುಭವ, ಕನ್ನಡ ಭಾಷೆ ಮೇಲಿರುವ ಅಭಿಮಾನ ಹಾಗು ಪಾಂಡಿತ್ಯ ಅದ್ಭುತ. ಈ ಸಿನಿಮಾದಲ್ಲಿ ನೀವು ನಗಿಸಿದ್ದೀರಿ, ಅಳಿಸಿದ್ದಿರಿ, ಜೀವಿಸಿದ್ದೀರಿ’ ಎಂದಿದ್ದಾರೆ. ಹೊಂಬಾಳೆ ಫಿಲ್ಮ್ಸ್‌ನ 12ನೇ ಚಿತ್ರವಾಗಿ ‘ರಾಘವೇಂದ್ರ ಸ್ಟೋರ್ಸ್’ ಸೆಟ್ಟೇರಿತ್ತು. ಕಳೆದ ನವೆಂಬರ್ 22ರಿಂದ ಚಿತ್ರದ ಚಿತ್ರೀಕರಣ ಆರಂಭವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.