ADVERTISEMENT

ಗಟ್ಟಿತನ ಕಲಿಸಲು ರಂಗಭೂಮಿಯೇ ಬೇಕು!

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 19:45 IST
Last Updated 9 ಏಪ್ರಿಲ್ 2020, 19:45 IST
ರಘುಬೀರ್ ಯಾದವ್ (ಚಿತ್ರ: ವಿಕಿ ಕಾಮನ್ಸ್‌)
ರಘುಬೀರ್ ಯಾದವ್ (ಚಿತ್ರ: ವಿಕಿ ಕಾಮನ್ಸ್‌)   

ಕೊರತೆ ಎದುರಾದಾಗಲೇ ಮನುಷ್ಯ ಪಾಠ ಕಲಿಯುವುದು. ಹಾಗಾಗಿ, ವೈಭವೋಪೇತ ವ್ಯವಸ್ಥೆಯ ಅಡಿ ಜೀವತಳೆಯುವ ಕಲೆಗಳಲ್ಲಿ ಗಟ್ಟಿತನ ಇರುವುದಿಲ್ಲ...

–ಇದು ಹಿರಿಯ ನಟ ರಘುಬೀರ್ ಯಾದವ್ ಅವರ ನಂಬಿಕೆ. ಅಮೆಜಾನ್‌ ಪ್ರೈಮ್‌ನಲ್ಲಿ ಪ್ರಸಾರ ಆಗಿರುವ ‘ಪಂಚಾಯತ್’ ವೆಬ್ ಸರಣಿಯಲ್ಲಿ ಯಾದವ್ ಅವರು ಹಳ್ಳಿಯ ಮುಖ್ಯಸ್ಥನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

‘ಜನ ನಮ್ಮ ಸಂಸ್ಕೃತಿಯನ್ನೇ ವ್ಯಾಪಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಕಲಾವಿದರು ತಮ್ಮನ್ನು ಜನರಿಂದ ದೂರ ಮಾಡಿಕೊಂಡಿದ್ದಾರೆ. ಹಿಂದೆ, ಏನಾದರೂ ಕಲಿಯಬೇಕು ಎಂದಾದರೆ ಬಹಳಷ್ಟು ಕಷ್ಟ ಅನುಭವಿಸಬೇಕಿತ್ತು. ಹಾಗಾಗಿ, ಆ ಕಲಿಕೆಗೆ ಒಂದು ಆತ್ಮ ಇರುತ್ತಿತ್ತು. ಕಲೆ ವ್ಯಾಪಾರವಾದರೆ, ಅದು ತನ್ನ ಆತ್ಮವನ್ನೇ ಕಳೆದುಕೊಳ್ಳುತ್ತದೆ’ ಎಂದು ಯಾದವ್ ಅವರು ಮಾರ್ಮಿಕವಾಗಿ ಹೇಳಿದ್ದಾರೆ.

ADVERTISEMENT

‘ನಾನು ರಂಗಭೂಮಿಯಲ್ಲಿ ಸಕ್ರಿಯವಾಗಿದ್ದಾಗ, ದಿನವೊಂದಕ್ಕೆ ಎರಡೂವರೆ ರೂಪಾಯಿ ಸಂಪಾದಿಸುತ್ತಿದ್ದೆ. ಕೆಲವು ಸಂದರ್ಭಗಳಲ್ಲಿ ನಾನು ದಿನವೊಂದಕ್ಕೆ ಬರೀ ಐವತ್ತು ಪೈಸೆ ಸಂಪಾದಿಸುತ್ತಿದ್ದುದೂ ಇದೆ. ಆರು ವರ್ಷ ನಾನು ಅಲೆಮಾರಿಯಂತೆ ಬದುಕಿದೆ. ಆದರೆ ಆ ಜೀವನ ನನಗೆ ಕಲೆ, ಸಂಸ್ಕೃತಿ ಮತ್ತು ಸಂಗೀತದ ಬಗ್ಗೆ ಎಲ್ಲವನ್ನೂ ಕಲಿಸಿತು’ ಎಂದು ಯಾದವ್ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಅಲೆಮಾರಿ ಜೀವನವನ್ನೇ ಮುಂದುವರಿಸಬೇಕು ಎಂದು ಯಾದವ್ ಅವರು ಅಂದುಕೊಂಡಿದ್ದೂ ಇತ್ತಂತೆ. ಆದರೆ, ರಂಗಭೂಮಿಯಲ್ಲಿ ಆರು ವರ್ಷಗಳನ್ನು ಕಳೆದ ನಂತರ ಅವರು ಲಖನೌಗೆ ಬಂದರು. ಅಲ್ಲಿಂದ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್‌ಎಸ್‌ಡಿ) ಸೇರಿದರು.

ಸಿನಿಮಾಗಳ ಗುಣಮಟ್ಟ ಕಡಿಮೆ ಆಗುತ್ತಿದೆ ಎಂದು ಭಾವಿಸಿರುವ ಯಾದವ್, ತಮಗೆ ರಂಗಭೂಮಿಯೇ ಹೆಚ್ಚು ಇಷ್ಟ ಎಂದು ಹೇಳುತ್ತಾರೆ. ಏಕೆ ಎಂದು ಪ್ರಶ್ನಿಸಿದರೆ, ಅಲ್ಲಿ ಪಾತ್ರಗಳು ಹೆಚ್ಚು ನೈಜವಾಗಿರುತ್ತವೆ ಎಂದು ಉತ್ತರಿಸುತ್ತಾರೆ.

‘ಪಂಚಾಯತ್’ ವೆಬ್ ಸರಣಿಯನ್ನು ದೀಪಕ್ ಕುಮಾರ್ ಮಿಶ್ರಾ ನಿರ್ದೇಶಿಸಿದ್ದಾರೆ. ಇದು ಗ್ರಾಮೀಣ ಭಾರತದ ಸಾರವನ್ನು ಬಹಳ ಸುಂದರವಾಗಿ ಸೆರಹಿಡಿದಿದೆ ಎನ್ನುವ ಪ್ರಶಂಸೆಯ ಮಾತುಗಳನ್ನು ಗಿಟ್ಟಿಸಿಕೊಂಡಿದೆ. ಎಂಜಿನಿಯರಿಂಗ್ ಪದವೀಧರನೊಬ್ಬ ಒಳ್ಳೆಯ ಕೆಲಸ ಸಿಗದ ಕಾರಣ, ಪಂಚಾಯತ್ ಕಾರ್ಯದರ್ಶಿಯಾಗಿ ಕೆಲಸ ಆರಂಭಿಸುವ ಕಥೆ ಇದರಲ್ಲಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.