ನಟ ರಾಜ್ ಬಿ.ಶೆಟ್ಟಿ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಂಡವರು. ‘ಟೋಬಿ’ಯಲ್ಲಿ ‘ಟೋಬಿ’ ಎಂಬ ಮೂಗನಾಗಿ, ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಲ್ಲಿ ನಂದಿಬಟ್ಟಲು ಹೂವಿನಂಥ ಮನಸ್ಸಿನ ‘ಅನಿಕೇತ್’ ಆಗಿ ಪ್ರೇಕ್ಷಕರ ಎದುರಿಗೆ ಬಂದ ರಾಜ್, ಇದೀಗ ‘ರೂಪಾಂತರ’ ಎಂಬ ಸಿನಿಮಾದಲ್ಲಿ ಹೆಸರೇ ಇಲ್ಲದ ಪಾತ್ರವೊಂದರ ಮೂಲಕ ತೆರೆ ಮೇಲೆ ಬರುತ್ತಿದ್ದಾರೆ. ಮಿಥಿಲೇಷ್ ಎಡವಲತ್ ನಿರ್ದೇಶಿಸಿರುವ ಈ ಸಿನಿಮಾ ಇಂದು (ಜುಲೈ 26) ಬಿಡುಗಡೆಯಾಗುತ್ತಿದ್ದು, ಈ ಹೊತ್ತಿನಲ್ಲಿ ರಾಜ್ ಸಿನಿಮಾ ಪುರವಣಿ ಜತೆ ಮಾತನಾಡಿದ್ದಾರೆ.
‘ನಾನು ನಟನಾಗಿ ಮತ್ತು ಸಿನಿಮಾವನ್ನು ಪ್ರಸ್ತುತ ಪಡಿಸುವ ವ್ಯಕ್ತಿಯಾಗಿ ಅಷ್ಟೇ ಅಲ್ಲ, ‘ರೂಪಾಂತರ’ ಸಿನಿಮಾದ ಮೊದಲ ದಿನದಿಂದಲೂ ಈ ಪ್ರಾಜೆಕ್ಟ್ ಜೊತೆಗಿದ್ದೇನೆ. ಇದು ನಮ್ಮದೇ ಸಿನಿಮಾ. ಬಹಳ ಹಿಂದೆಯೇ ಈ ‘ರೂಪಾಂತರ’ವೆಂಬ ಚಿಟ್ಟೆ ಹಾರಾಡುತ್ತಿತ್ತು. ನಾನು ನಟನಾಗಿ ಈ ಪ್ರಾಜೆಕ್ಟ್‌ನಲ್ಲಿ ಇರುತ್ತೇನೋ, ಇಲ್ಲವೋ ಎನ್ನುವುದಕ್ಕಿಂತ ಮುಂಚೆಯೇ ಈ ಸಿನಿಮಾದಲ್ಲಿ ನಾನು ತೊಡಗಿಸಿಕೊಂಡಿದ್ದೆ. ಮಿಥಿಲೇಷ್ ಈ ಕಥೆಯನ್ನು ‘ಒಂದು ಮೊಟ್ಟೆಯ ಕಥೆ’ಯ ನಿರ್ಮಾಪಕ ಸುಹಾನ್ ಮುಂದಿಟ್ಟಿದ್ದರು. ‘ಒಂದು ಮೊಟ್ಟೆಯ ಕಥೆ’ ಸಿನಿಮಾ ರಿಲೀಸ್ ಆಗಿ ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ಪ್ರದರ್ಶನವಿತ್ತು. ಆ ಸಂದರ್ಭದಲ್ಲಿ ಸುಹಾನ್ ಮಿಥಿಲೇಷ್ ಸಿನಿಮಾ ಕಥೆಯ ಬಗ್ಗೆ ನನಗೆ ತಿಳಿಸಿದ್ದರು. ಅಲ್ಲಿಗೇ ಬಂದು ಮಿಥಿಲೇಷ್ ‘ರೂಪಾಂತರ’ ಕಥೆ ಹೇಳಿದ್ದರು. ಹೀಗಾಗಿ ಇದು ಸುಮಾರು ಆರೇಳು ವರ್ಷಗಳ ಹಿಂದೆಯೇ ಚಿಗುರೊಡೆದ ಸಿನಿಮಾ. ಈ ಸಿನಿಮಾವನ್ನು ತೆರೆಗೆ ತರಲು ತುಂಬಾ ಸಮಯ ತೆಗೆದುಕೊಳ್ಳಬೇಕಾಯಿತು. ಮಿಥಿಲೇಷ್ ಹೇಳಿದ ಕಥೆ ಈಗ ಬಂದಿರುವ ಸಿನಿಮಾದ ಚಿತ್ರಕಥೆಯ ರೀತಿಯಲ್ಲಿ ಇರಲಿಲ್ಲ. ಅದು ಒಂದು ಕಥೆಯ ಮಾದರಿಯಲ್ಲಿತ್ತಷ್ಟೇ. ಕಥೆ ನಮ್ಮನ್ನು ಬಹಳ ಕಾಡಿತು. ನಮ್ಮದೇ ಸಿನಿಮಾ ಎಂದರೆ ನಾನು ನಿರ್ದೇಶನ ಮಾಡಿದಾಗಷ್ಟೇ ಅದು ನಮ್ಮ ಸಿನಿಮಾ ಆಗುತ್ತೆ ಎಂದಲ್ಲ. ಮಿಥಿಲೇಷ್ ಕನಸನ್ನು ನನಸು ಮಾಡಲು ನಾನು, ಸುಹಾನ್, ಪ್ರವೀಣ್ ಶ್ರಿಯಾನ್, ಮಿಥುನ್ ಮುಕುಂದನ್ ಇದ್ದೆವು. ಎಲ್ಲ ರೀತಿಯಲ್ಲೂ ಈ ಸಿನಿಮಾ ಜೊತೆ ಇರಬೇಕು ಎಂದು ಜೊತೆಗೂಡಿ ಕನಸು ಕಂಡವರು ನಾವು’ ಎಂದರು ರಾಜ್.
‘ಈ ಸಿನಿಮಾದಲ್ಲಿ ನಟನಾಗಿರುವುದರ ಜೊತೆಗೆ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದೇನೆ. ಮಿಥಿಲೇಷ್ ಕೇರಳದ ಪೈಯನ್ನೂರಿನವರು. ಬೆಂಗಳೂರಿನಲ್ಲೇ ಹಲವು ವರ್ಷಗಳಿಂದ ಇದ್ದಾರೆ. ‘ರೂಪಾಂತರ’ ಅವರ ಮೊದಲ ಪ್ರಯತ್ನ. ಮೊದಲಿಗೆ ಈ ಸಿನಿಮಾದ ಚಿತ್ರಕಥೆ ಇಂಗ್ಲಿಷ್‌ನಲ್ಲಿ ಸಿದ್ಧವಿತ್ತು. ಆದರೆ ಅದರಲ್ಲಿ ಸಣ್ಣಪುಟ್ಟ ದೋಷಗಳಿದ್ದವು. ಮಿಥಿಲೇಷ್‌ಗೆ ಆ ಚಿತ್ರಕಥೆಯಲ್ಲಿ ಸಮಸ್ಯೆ ಇದೆ ಎಂದು ತಿಳಿದಿತ್ತು. ಆದರೆ ಯಾವ ರೀತಿಯಲ್ಲಿ ಅದನ್ನು ಸರಿಪಡಿಸಬಹುದು ಎಂದು ತಿಳಿದಿರಲಿಲ್ಲ. ಆ ಸಂದರ್ಭದಲ್ಲಿ ಈ ಚಿತ್ರಕಥೆಯ ಮಾದರಿಯನ್ನು ಕೊಂಚ ಬದಲಿಸಬೇಕು, ಪಾತ್ರಗಳನ್ನು ಭಿನ್ನವಾಗಿ ಬರೆಯಬೇಕಾಗುತ್ತದೆ ಎಂದಿದ್ದೆ. ಸಿನಿಮಾಗೆ ಸಂಪೂರ್ಣವಾದ ಸಂಭಾಷಣೆಯನ್ನು ಬರೆದಿದ್ದೇನೆ. ಈ ಸಿನಿಮಾ ನಾಲ್ಕು ಕಥೆಗಳ ಗುಚ್ಛ. ಅದರಲ್ಲಿ ನನ್ನ ಪಾತ್ರದ ಒಂದು ಕಥೆಯಿದೆ. ನಾನು ರೌಡಿಯಾಗಿ ನಟಿಸಿದ್ದೇನೆ. ಪಾತ್ರದ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕೆಂದರೆ ಸಿನಿಮಾ ನೋಡಬೇಕು. ಇರುವ ಕಥೆಗಳಲ್ಲಿ ಎರಡು ಸಾಮಾಜಿಕ ಕಥೆಗಳಿವೆ. ಇವೆಲ್ಲವೂ ಕಾಲ್ಪನಿಕ. ಇಲ್ಲಿ ಯಾವ ಕಥೆಗಳಿಗೂ ನಿರ್ದಿಷ್ಟ ಅಂತ್ಯವಿಲ್ಲ. ‘ರೂಪಾಂತರ’ ಆಗುವ ಘಳಿಗೆಯಲ್ಲಿ ಕಥೆ ಅಂತ್ಯವಾಗುತ್ತದೆ’ ಎನ್ನುತ್ತಾರೆ ರಾಜ್.
‘ಈ ಮಾದರಿಯ ಸಿನಿಮಾಗಳು ಹಿಂದೆ ನಮ್ಮಲ್ಲಿಯೂ ಬಂದಿವೆ. ಆದರೆ ಆ ಸಿನಿಮಾಗಳಲ್ಲಿ ಪ್ರತ್ಯೇಕ ಕಥೆಗಳೇ ಇದ್ದವು. ಪ್ರತ್ಯೇಕ ಕಥೆಗಳಾವುದೂ ಕ್ಲೈಮ್ಯಾಕ್ಸ್‌ಗೆ ಬಂದು ಕೂಡಿಕೊಳ್ಳುತ್ತಿರಲಿಲ್ಲ. ಈ ರೀತಿಯ ಕಥೆಗಳನ್ನು ಬರೆಯುವಾಗ ನಮಗಿದ್ದ ಸವಾಲು ಹಲವು. ಕಥೆಗಳು ಸಾಗುತ್ತಾ ಅದಕ್ಕೊಂದು ಆತ್ಮ ಸೃಷ್ಟಿಯಾಗಬೇಕು. ಎಲ್ಲರ ಬದಲಾವಣೆಯ ಕಥೆಯೇ ‘ರೂಪಾಂತರ’. ಆ ಬದಲಾವಣೆಯ ಘಟ್ಟಗಳು, ಘಟನೆಗಳ ಗುಚ್ಛ ಇದು. ಈ ಕಥೆ ನನ್ನ ಕೈಗೆ ಸಿಕ್ಕ ಬಳಿಕ ಒಂದೂವರೆ ವರ್ಷ ಅದನ್ನು ನಾನು ಮುಟ್ಟಿರಲಿಲ್ಲ. ಬಳಿಕ ಕೇವಲ ಐದು ದಿನದಲ್ಲಿ ಚಿತ್ರಕಥೆಯನ್ನು, ಹೆಚ್ಚುವರಿ ಚಿತ್ರಕಥೆಯನ್ನು ಬರೆದಿದ್ದೆ. ಒಬ್ಬ ಅನುಭವಿ ನಟನಿಂದ ಮಾಡಿಸಬೇಕಿದ್ದ ನಟನೆಯನ್ನು ನಾವು ವಿಜಯಪುರದ ಸೋಮಶೇಖರ್ ಬೋಳೆಗಾಂವ್(ಅಜ್ಜನ ಪಾತ್ರಧಾರಿ) ಎಂಬಂತವರಿಂದಲೂ ತೆಗೆಸಿದೆವು. ಇದು ಸುಲಭವಾಗಿರಲಿಲ್ಲ. ನಾವು ಈ ಪಾತ್ರ ಎಲ್ಲ ಪಾತ್ರಗಳನ್ನೂ ಮೀರಿಸಬೇಕು ಎಂದು ನಿರ್ಧರಿಸಿದ್ದೆವು. ಅವರು ಅದನ್ನು ಸಮರ್ಥವಾಗಿ ನಿಭಾಯಿಸಿದರು. ಅವರು ಈ ಸಿನಿಮಾದ ಜೀವಾಳ. ಸಿನಿಮಾ ಬಿಡುಗಡೆಗೆ ಮುನ್ನವೇ ಅವರು ನಿಧನರಾದರು ಎನ್ನುವುದು ದುಃಖದ ವಿಚಾರ’ ಎಂದರು ರಾಜ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.