ADVERTISEMENT

PV WEB EXCLUSIVE: ‘ಮೇರಾ ನಾಮ್ ಜೋಕರ್‌’ಗೆ 50 ವರ್ಷ

ಬಾಲಿವುಡ್‌ನ ಸುದೀರ್ಘ ಅವಧಿಯ ಚಲನಚಿತ್ರಕ್ಕೆ ಸುವರ್ಣ ಮಹೋತ್ಸವದ ಸಂಭ್ರಮ

ರಾಹುಲ ಬೆಳಗಲಿ
Published 19 ಡಿಸೆಂಬರ್ 2020, 14:42 IST
Last Updated 19 ಡಿಸೆಂಬರ್ 2020, 14:42 IST
ಮೇರಾ ನಾಮ್ ಜೋಕರ್ ಚಿತ್ರದ ಪೋಸ್ಟರ್
ಮೇರಾ ನಾಮ್ ಜೋಕರ್ ಚಿತ್ರದ ಪೋಸ್ಟರ್   

ಮೇರಾ ನಾಮ್ ಜೋಕರ್!

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ವಿಶಿಷ್ಟ ದಾಖಲೆ ನಿರ್ಮಿಸಿದ ಮತ್ತು ಸಿನಿಪ್ರಿಯರಿಗೆ ಹುಬ್ಬೇರಿಸುವಂತೆ ಮಾಡಿದ ಚಿತ್ರ ಇದು. ಬಾಲಿವುಡ್‌ನ ‘ಶೋ ಮ್ಯಾನ್’ ರಾಜ್ ‌ಕಪೂರ್ ಅವರ ಮಹತ್ವಾಕಾಂಕ್ಷೆಯ ಈ ಚಿತ್ರವು ದೇಶದಲ್ಲಿ ಅಲ್ಲದೇ ವಿದೇಶದಲ್ಲೂ ಛಾಪು ಮೂಡಿಸಿತ್ತು.

ಆಸಕ್ತಿಕರ ಸಂಗತಿಯೆಂದರೆ, ಇದು ಇತ್ತ ಸೂಪರ್ ಹಿಟ್ ಚಿತ್ರಗಳ ಪಟ್ಟಿಯಲ್ಲಿ ಸೇರಲಿಲ್ಲ, ಅತ್ತ ನಿರೀಕ್ಷಿತ ಪ್ರಮಾಣದಲ್ಲಿ ಆರ್ಥಿಕ ಲಾಭವೂ ತಂದು ಕೊಡಲಿಲ್ಲ. ಆದರೆ, ಕೆಲವೇ ಶ್ರೇಷ್ಠ ಚಿತ್ರಗಳ ಪಟ್ಟಿಯಲ್ಲಿ ಇದು ಸೇರದೇ ಇರಲಿಲ್ಲ.

ADVERTISEMENT

ಜೀವನ ಎಂಬುದು ಎಷ್ಟು ಜಟಿಲ ಮತ್ತು ಬಡತನ ಎಷ್ಟು ಕಠೋರ ಎಂಬುದನ್ನು ಈ ಚಿತ್ರವು ಮನೋಜ್ಞವಾಗಿ ಸಾರಿ ಹೇಳಿತು. ಮನುಷ್ಯನ ಸ್ವಭಾವ, ಬದಲಾಗುವ ವ್ಯಕ್ತಿತ್ವ, ಬದುಕಿನುದ್ದಕ್ಕೂ ಕಾಡುವ ಏರಿಳಿತ, ನೋವು ಅದುಮಿಟ್ಟು ನಗುವ ಸ್ಥಿತಿ, ಸವಾಲು ಎದುರಿಸುವ ಬಗೆ, ಪ್ರತಿಯೊಂದು ಹಂತದಲ್ಲೂ ತಲೆದೋರುವ ಸಂಘರ್ಷ ಎಲ್ಲವನ್ನೂ ಸೂಕ್ಷ್ಮವಾಗಿ ಬಿಡಿಸಿಟ್ಟ ಈ ಚಿತ್ರವು ರಾಜ್‌ಕಪೂರ್ ಪಾಲಿಗೆ ಜೀವನದ ಕಡೆಯ ಕ್ಷಣದವರೆಗೆ ಮುದ್ದಿನ ಮಗುವಾಗಿತ್ತು.

ಭಾರತೀಯ ಚಿತ್ರರಂಗದ ಸುದೀರ್ಘ ಅವಧಿಯ ಚಿತ್ರಗಳಲ್ಲಿ ಒಂದಾದ ‘ಮೇರಾ ನಾಮ್ ಜೋಕರ್’ ತೆರೆ ಕಂಡು ಡಿಸೆಂಬರ್ 18ಕ್ಕೆ ಬರೋಬ್ಬರಿ 50 ವರ್ಷಗಳಾದವು. 1970ರ ಡಿಸೆಂಬರ್ 18ರಂದು ಬಿಡುಗಡೆಯಾದ ಈ ಚಿತ್ರದ ಕಥೆ ಮತ್ತು ಚಿತ್ರಕಥೆ ಬರೆದವರು ಕೆ.ಎ. ಅಬ್ಬಾಸ್. ಚಿತ್ರದ ನಿರ್ಮಾಣ, ನಿರ್ದೇಶನ ಮತ್ತು ಜೋಕರ್‌ನ ಪ್ರಮುಖ ಪಾತ್ರ ನಿಭಾಯಿಸಿದವರು ರಾಜ್‌ ಕಪೂರ್.

ಶಂಕರ್-ಜೈಕಿಶನ್ ಸಂಗೀತವುಳ್ಳ ಈ ಚಿತ್ರದ ಚಿತ್ರೀಕರಣ ದೇಶದ ವಿವಿಧೆಡೆ ಅಲ್ಲದೇ ಆಗಿನ ಸೋವಿಯತ್ ಒಕ್ಕೂಟದ ಮಾಸ್ಕೊದಲ್ಲೂ ನಡೆಯಿತು. ಚಿತ್ರೀಕರಣ ಸಂಪೂರ್ಣಗೊಂಡು ಬಿಡುಗಡೆಯಾಗಲು 6 ವರ್ಷಗಳು ಬೇಕಾದವು.

ಮನೋಜ್‌ಕುಮಾರ್, ಧರ್ಮೇಂದ್ರ, ರಾಜೇಂದ್ರಕುಮಾರ್, ಸಿಮಿ ಗೆರೆವಾಲ್, ಪದ್ಮಿನಿ, ರಷ್ಯಾ ನಟಿ ಕ್ಸೇನಿಯಾರ‍್ಯಾಬಿಂಕಿನಾ ಸೇರಿದಂತೆ ಖ್ಯಾತನಾಮರು ಅಭಿನಯಿಸಿದ ಈ ಚಿತ್ರವು ಪ್ರೇಕ್ಷಕರ ಮನಸ್ಸು ಗೆಲ್ಲಲಿಲ್ಲ.

ಚಿತ್ರದ ಸೋಲಿಗೆ ಕಾರಣವೇನು ಎಂದು ಪತ್ತೆ ಮಾಡಲು ಸಾಕಷ್ಟು ಪ್ರಯತ್ನ ಮಾಡಲಾಯಿತು. ಚಿತ್ರವು ಸುದೀರ್ಘವಿದ್ದ ಕಾರಣಕ್ಕೆ ಪ್ರೇಕ್ಷಕರು ಮೆಚ್ಚಲಿಲ್ಲವೇ? ಪ್ರಸ್ತುತಿ ಚೆನ್ನಾಗಿರಲಿಲ್ಲವೇ? ವಿಷಯಗಳ ಗ್ರಹಿಕೆ ಕಷ್ಟವಾಯಿತೇ ಹೀಗೆ ಹತ್ತು ಹಲವು ಕಾರಣಗಳ ಬಗ್ಗೆ ಚರ್ಚಿಸಲಾಯಿತು. ನಿರಂತರ ಅವಲೋಕನ ನಡೆಯಿತು. ಆದರೆ, ಕಡೆಗೂ ಅದಕ್ಕೆ ಸ್ಪಷ್ಟ ಉತ್ತರ ಸಿಗಲಿಲ್ಲ. ಚಿತ್ರವಿಮರ್ಶಕರು, ‘ತಪ್ಪಾಗಿ ಅರ್ಥೈಸಲಾದ ಮಾಸ್ಟರ್‌ಪೀಸ್' ಎಂಬ ಒಂದು ಸಾಲಿನ ವ್ಯಾಖ್ಯಾನ ನೀಡಿ ಸುಮ್ಮನಾದರು.

6 ವರ್ಷ ಕಾಡಿದ ಜೋಕರ್
ಯಾವುದೇ ಚಿತ್ರ ಕೈಗೆತ್ತಿಕೊಂಡರೂ ಅದರಲ್ಲಿ ಶ್ರದ್ಧೆ ಮತ್ತು ಬದ್ಧತೆಯಿಂದ ತೊಡಗಿಸಿಕೊಳ್ಳುತ್ತಿದ್ದ ರಾಜ್ ಕಪೂರ್ ಅವರಿಗೆ ‘ಮೇರಾ ನಾಮ್ ಜೋಕರ್’ ಸವಾಲಾಗಿ ಕಾಡಿತು. ಚಿತ್ರ ನಿರ್ಮಾಣಕ್ಕಾಗಿ ಅವರು ಮನೆ, ಆರ್‌ಕೆ ಸ್ಟುಡಿಯೋ ಮತ್ತು ಪತ್ನಿಯ ಚಿನ್ನಾಭರಣ ಕೂಡ ಒತ್ತೆ ಇಡಬೇಕಾಯಿತು. ಸತತ 6 ವರ್ಷ ಚಿತ್ರೀಕರಣ ಕೈಗೊಂಡು ಜೋಕರ್‌ದ್ದೇ ಧ್ಯಾನ ಮಾಡಿದರು.

ತಮ್ಮ ಸ್ವಂತ ಜೀವನಗಾಥೆಯನ್ನು ಈ ಚಿತ್ರದ ಮೂಲಕ ಹೇಳಲು ಯತ್ನಿಸಿದರು. ಒಬ್ಬ ಕಲಾವಿದ ಅದರಲ್ಲೂ ಜೋಕರ್ ಪಾತ್ರಧಾರಿ ಯಾವುದೆಲ್ಲ ಸಂಕಷ್ಟಗಳಿಂದ ದಾಟಿ ಹೋಗಬೇಕಾಗುತ್ತದೆ ಎಂಬುದನ್ನು ತೋರಿಸಿಕೊಟ್ಟರು.

1960ರಲ್ಲಿ ಜೆಕೊಸ್ಲೊವಾಕಿಯಾ ಕಲಾವಿದರು ಮುಂಬೈಯಲ್ಲಿ ಪ್ರದರ್ಶಿಸಿದ ಸರ್ಕಸ್‌, ರಾಜ್‌ಕಪೂರ್ ಅವರಿಗೆ ಚಿತ್ರ ನಿರ್ಮಿಸಲು ಸ್ಫೂರ್ತಿ ನೀಡಿತು. ಅದನ್ನು ವೀಕ್ಷಿಸಿದ ಮಾರನೇ ದಿನವೇ ಕೆ.ಎ.ಅಬ್ಬಾಸ್ ಅವರನ್ನು ಭೇಟಿಯಾಗಿ, ಇಂಥ ಚಿತ್ರಕಥೆ ಬರೆಯಲು ಹೇಳಿದರು. ಸ್ವತಃ ನೋವುಂಡು ಎಲ್ಲರ ಮೊಗದಲ್ಲೂ ನಗು ತರಿಸುವ ಜೋಕರ್‌ನ ಬದುಕಿನ ಕಥೆಯನ್ನು ಆಧರಿಸಿ ಬರೆಯುವಂತೆ ತಿಳಿಸಿದರು.

ಕೆ.ಎ.ಅಬ್ಬಾಸ್ ಅವರು ಬರೆಯುತ್ತ ಹೋದಂತೆ ಒಟ್ಟು 6 ಅಧ್ಯಾಯಗಳು ಮೂಡಿ ಬಂದವು. ತಲಾ ಮೂರು ಅಧ್ಯಾಯಗಳನ್ನು ಆಧರಿಸಿ ಒಟ್ಟು ಎರಡು ಚಿತ್ರಗಳನ್ನು ನಿರ್ಮಿಸಲು ಯೋಜಿಸಲಾಯಿತು. 1961ರಲ್ಲಿ ಕೆ.ಎ.ಅಬ್ಬಾಸ್ ಮತ್ತು ವಿ.ಪಿ. ಸಾಠೆ ಅವರು ಆರ್.ಕೆ.ಸ್ಟುಡಿಯೋದಲ್ಲಿ ರಾಜ್ ಕಪೂರ್ ಅವರನ್ನು ಭೇಟಿಯಾಗಿ 200 ಪುಟಗಳ ಚಿತ್ರಕಥೆಯನ್ನು ಒಪ್ಪಿಸಿದರು. ಅದನ್ನು ಎಷ್ಟು ಧ್ಯಾನಸ್ಥ ಸ್ಥಿತಿಯಲ್ಲಿ ಓದಿದರೆಂದರೆ, ದೃಶ್ಯಗಳನ್ನು ಕಲ್ಪಿಸಿಕೊಂಡು ಮನಸ್ಸಿನಲ್ಲೇ ಸಿದ್ಧತೆ ಮಾಡಿಕೊಳ್ಳತೊಡಗಿದರು.

ಚಿತ್ರೀಕರಣಕ್ಕೆ ಪ್ರಯಾಸ
ಆಗ ರಾಜ್ ‌ಕಪೂರ್ ಅವರ ವಯಸ್ಸು 40ರ ಆಸುಪಾಸಿನಲ್ಲಿತ್ತು. ಶಿಸ್ತುರಹಿತ ಬದುಕು, ಅನಿಯಮಿತ ಮದ್ಯಸೇವನೆ ಮುಂತಾದ ಕಾರಣದಿಂದ ಅವರ ದೇಹವು ನಾಯಕನಟನಾಗುವ ವರ್ಚಸ್ಸು ಕಳೆದುಕೊಂಡಿತ್ತು. ಆದರೆ, ಜೋಕರ್ ಪಾತ್ರವನ್ನು ತಾವೇ ಮಾಡಬೇಕು ಎಂಬ ಇರಾದೆ ಅವರದಾಗಿತ್ತು. 1965ರಲ್ಲಿ ಚಿತ್ರೀಕರಣ ಆರಂಭಿಸುತ್ತಿದ್ದಂತೆ ಒಂದೊಂದು ಸವಾಲು, ಸಂಕಷ್ಟಗಳು ತಲೆದೋರತೊಡಗಿದವು. ಅನಿರೀಕ್ಷಿತ ಬೆಳವಣಿಗೆಗಳಿಂದ ಚಿತ್ರೀಕರಣ ಪೂರ್ಣಗೊಳಿಸಲು ಪ್ರಯಾಸ ಪಡಬೇಕಾಯಿತು.

ಚಿತ್ರದಲ್ಲಿ ಮೂವರು ನಾಯಕನಟಿಯರು ಇರುವಂತೆ ಮೂರು ಅಧ್ಯಾಯಗಳಿವೆ. ಮೂರನೇ ಅಧ್ಯಾಯವನ್ನು ಮೊದಲು ಚಿತ್ರೀಕರಣ ಮಾಡಲಾಯಿತು. ನಂತರ ಎರಡನೇ ಅಧ್ಯಾಯದ ಚಿತ್ರೀಕರಣ ಡಾರ್ಜಲಿಂಗ್‌ನ ಸೇಂಟ್‌ ಪೌಲ್ ಶಾಲೆ ಆವರಣದಲ್ಲಿ ಮತ್ತು ಪುಣೆ ಸಮೀಪದ ಲೋನಿ ಬಳಿ ಚಿತ್ರೀಕರಣ ನಡೆಯಿತು.

1968ರಲ್ಲಿ ಜೆಮಿನಿ ಸರ್ಕಸ್ ಜೊತೆ ಒಪ್ಪಂದ ಮಾಡಿಕೊಂಡು, ಸರ್ಕಸ್‌ ಆವರಣದಲ್ಲಿ ಚಿತ್ರೀಕರಣ ಆರಂಭಿಸಲಾಯಿತು. ಈ ಅವಧಿಯಲ್ಲೇ ರಷ್ಯಾದ 20 ಕಲಾವಿದೆಯರು ಪಾಲ್ಗೊಂಡರು. ಜೆಮಿನಿ ಸರ್ಕಸ್ ಕಲಾವಿದರು ತಮ್ಮ ಪ್ರದರ್ಶನವನ್ನು ಮಧ್ಯಾಹ್ನ ಮತ್ತು ಸಂಜೆ ವೇಳೆ ನಡೆಸಿಕೊಟ್ಟರೆ, ಚಿತ್ರೀಕರಣವು ಬೆಳಗಿನ ಮತ್ತು ಬಿಡುವಿನ ವೇಳೆ ನಡೆಯುತಿತ್ತು. ಅಂತೂ ಇಂತೂ ಕಷ್ಟಪಟ್ಟು ಚಿತ್ರೀಕರಣ ಪೂರ್ಣಗೊಂಡಾಗ, ಚಿತ್ರದ ವೀಕ್ಷಣಾ ಅವಧಿಯು 5 ಗಂಟೆಗೂ ಹೆಚ್ಚಿರುವುದು ಗೊತ್ತಾಯಿತು.

ಆಸಕ್ತಿಕರ ಸಂಗತಿಗಳು
ಇಷ್ಟು ದೀರ್ಘಾವಧಿಯ ಚಿತ್ರವನ್ನು ನೋಡಲು ಪ್ರೇಕ್ಷಕರು ಇಷ್ಟಪಡಲಿಕ್ಕಿಲ್ಲ ಎಂದು ರಾಜ್‌ ಕಪೂರ್ ಅನಿವಾರ್ಯವಾಗಿ ಕತ್ತರಿಪ್ರಯೋಗ ಮಾಡಬೇಕಾಯಿತು. ಕೆಲ ದೃಶ್ಯಗಳನ್ನು ಮತ್ತು ಗೀತೆಗಳನ್ನು ಕಡಿತಗೊಳಿಸಿ, 4 ಗಂಟೆಗೆ ಸೀಮಿತಗೊಳಿಸುವಷ್ಟರಲ್ಲಿ ಸಾಕುಸಾಕಾಗಿ ಹೋಯಿತು. ಆದ್ದದ್ದು ಎಲ್ಲವೂ ಒಳ್ಳೆಯದಕ್ಕೆ ಎಂಬ ಭಾವನೆಯಲ್ಲೇ ಭಾರಿ ನಿರೀಕ್ಷೆಯೊಂದಿಗೆ ಚಿತ್ರವನ್ನು 1970ರಲ್ಲಿ ಅವರು ಬಿಡುಗಡೆ ಮಾಡಿದರು. ಆದರೆ, ಪ್ರೇಕ್ಷಕರು ಚಿತ್ರಮಂದಿರದತ್ತ ಮುಖ ಮಾಡಲಿಲ್ಲ.

ಈ ಚಿತ್ರದ ಕುರಿತು ಅಚ್ಚರಿದಾಯಕ ಸಂಗತಿಗಳು ಸಹ ಇವೆ. ಮೇರು ಗಾಯಕಿ ಲತಾ ಮಂಗೇಶ್ಕರ್ ಅವರು ರಾಜ್‌ಕಪೂರ್ ಅವರ ಬಹುತೇಕ ಚಿತ್ರಗಳಿಗೆ ಹಾಡಿದರು, ಆದರೆ ಈ ಚಿತ್ರಕ್ಕೆ ಹಾಡಲಿಲ್ಲ. ನಟ ಮನೋಜ್ ಕುಮಾರ್ ಅವರು ದೃಶ್ಯಕ್ಕೆ ಅನುಸಾರ ಸಂಭಾಷಣೆ ಸ್ವತಃ ಬರೆದು ಅಭಿನಯಿಸಿದರು. ರಾಜ್‌ಕಪೂರ್ ಅವರ ಪುತ್ರ ರಿಷಿ ಕಪೂರ್ ಅವರಿಗೆ ಇದು ಮೊದಲನೇ ಚಿತ್ರ. ಈ ಚಿತ್ರದ ಎರಡನೇ ಭಾಗ ಹೊರತರಲು ಯೋಜಿಸಲಾಗಿತ್ತು. ನಟಿ ಸಿಮಿ ಗೆರೆವಾಲ್ ಅವರು ನದಿ ದಂಡೆ ಬಳಿ ಬಟ್ಟೆ ಬದಲಿಸಿಕೊಳ್ಳುವ ದೃಶ್ಯ ಚರ್ಚೆಗೆ ಕಾರಣವಾಗಿತ್ತು. ಎರಡು ಇಂಟರ್ವೆಲ್‌ ಒಂದು ಇಂಟರ್ವಲ್‌ಗೆ ಸೀಮಿತಗೊಳಿಸಲಾಯಿತು.

ಮೇರಾ ನಾಮ್ ಜೋಕರ್ ಸೋಲಿನ ಕುರಿತು ರಾಜ್‌ಕಪೂರ್ ಅವರನ್ನು ಕೇಳಿದಾಗ, ಅವರು ನಗುತ್ತಲೇ ಪ್ರತಿಕ್ರಿಯಿಸಿದ್ದರು.

‘ತಾಯಿಯು ಏಳು ಮಕ್ಕಳನ್ನು ಸಾಕಬಹುದು. ಆದರೆ, ಅವರ ಹಣೆಬರಹ ಬರೆಯಲು ಆಗುವುದಿಲ್ಲ. ಮಕ್ಕಳು ಅವರದ್ದೇ ಆದ ಗುರಿ ಮತ್ತು ಯಶಸ್ಸು ಹೊಂದುತ್ತಾರೆ. ನನ್ನ ಯಾವ ಚಿತ್ರಗಳು ಇಷ್ಟ, ಯಾವುದು ಇಲ್ಲವೆಂದು ಕೇಳಿದರೆ ಏನೆಂದು ಹೇಳಲಿ? ಎಲ್ಲಾ ಚಿತ್ರಗಳು ನನ್ನವೇ. ಕೆಲವು ಚಿತ್ರಗಳು ಜಾದೂ ಮಾಡಿದವು. ಹಿಟ್ ಆದವು. ಯಶಸ್ಸು ಕಂಡವು. ಕೆಲವು ಸೋತವು. ಸೋತ ಚಿತ್ರವು ನನ್ನ ಪಾಲಿಗೆ ಸಂಕಷ್ಟ ಎದುರಿಸಿದ ಮಗು. ಗೆದ್ದ ಮಗು ಎಲ್ಲರ ಮನ ಗೆಲ್ಲುತ್ತ ಮುಂದೆ ಸಾಗುತ್ತದೆ. ಆದರೆ, ವೈಕಲ್ಯ ಎದುರಿಸುತ್ತಿರುವ ಮಗು ನಮ್ಮೊಂದಿಗೆ ಉಳಿಯುತ್ತದೆ. ಹತ್ತಿರವಾಗುತ್ತದೆ. ಅಂತಹ ಒಂದು ಮಗುವಿನ ಹೆಸರೇ ‘ಮೇರಾ ನಾಮ್ ಜೋಕರ್’. ‘ಜಾಗತೇ ರಹೋ’ ಚಿತ್ರವು ಕೂಡ ಇದೇ ರೀತಿ ಸೋಲುಂಡಿತು. ಆದರೆ, ಈ ಎರಡೂ ಚಿತ್ರಗಳು ನನ್ನ ಆಪ್ತವಾದವು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.