ADVERTISEMENT

ಮುಂಬೈ ಟು ಲಂಡನ್... ಇದು ರಾಜ್ ಕುಂದ್ರಾ ಅಶ್ಲೀಲ ಚಿತ್ರಗಳ ಯಾನ

ಪಿಟಿಐ
Published 21 ಜುಲೈ 2021, 12:54 IST
Last Updated 21 ಜುಲೈ 2021, 12:54 IST
ರಾಜ್ ಕುಂದ್ರಾ
ರಾಜ್ ಕುಂದ್ರಾ   

ಮುಂಬೈ: ಕಂಪನಿಗಳೆಲ್ಲಾ ಲಂಡನ್‌ನಲ್ಲಿ. ಚಿತ್ರನಿರ್ಮಾಣ ಮುಂಬೈಯಲ್ಲಿ. ಹಣಕಾಸು ಲೆಕ್ಕಾಚಾರ ಕುಂದ್ರಾ ಅವರಿಗೆ ಸೇರಿದ ವಿಯಾನ್‌ ಇಂಡಸ್ಟ್ರೀಸ್‌ ಖಾತೆಯ ಮೂಲಕ ನಿರ್ವಹಣೆ...

– ಇದು ಅಶ್ಲೀಲ ಚಿತ್ರ ನಿರ್ಮಾಣ ಮತ್ತು ಆ್ಯಪ್‌ಗಳ ಮೂಲಕ ಪ್ರಸಾರ ಮಾಡುತ್ತಿದ್ದ ಆರೋಪದ ಮೇಲೆ ಬಂಧಿತರಾಗಿರುವ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್‌ ಕುಂದ್ರಾ ಅವರ ‘ಉದ್ಯಮ’ದ ಪರಿ. ಭಾರತದ ಕಾನೂನು ಕಣ್ತಪ್ಪಿಸಲು ವಿದೇಶಿ ನೋಂದಾಯಿತ ಕಂಪನಿಯ ಮೂಲಕ ಅಶ್ಲೀಲ ಚಿತ್ರಗಳ ವ್ಯವಹಾರ ನಡೆಸುತ್ತಿದ್ದರು ಎಂಬುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.

ಈ ವಿಷಯ ಬಹಿರಂಗಪಡಿಸಿದ್ದು ಮುಂಬೈನ ಜಂಟಿ ಪೊಲೀಸ್‌ ಆಯುಕ್ತ ಮಿಲಿಂದ್‌ ಭಾರಂಬೆ.

ADVERTISEMENT

ಲಂಡನ್‌ನ ಕೆನ್ರಿನ್‌ ಕಂಪನಿ ಒಡೆತನ್ ಹಾಟ್‌ಷಾಟ್ಸ್‌ ಅಪ್ಲಿಕೇಷನ್‌ ಮೂಲಕ ಅಶ್ಲೀಲ ಚಿತ್ರಗಳ ಪ್ರಸಾರ ಆಗುತ್ತಿತ್ತು. ಕೆನ್ರಿನ್‌ ಕಂಪನಿ ಕುಂದ್ರಾ ಅವರ ಸೋದರ ಸಂಬಂಧಿಗೆ ಸೇರಿದೆ.

ಕುಂದ್ರಾ ಬಂಧನ ವಿಳಂಬವೇಕೆ ಎಂಬ ಮಾತಿಗೆ ಸ್ಪಷ್ಟನೆ ನೀಡಿದ ಮಿಲಿಂದ್‌ ಅವರು, ‘ಆರೋಪಿಗಳ ವ್ಯವಹಾರದ ಸಂಪೂರ್ಣ ಜಾಡು ಹಿಡಿಯಬೇಕಿತ್ತು. ಎಲೆಕ್ಟ್ರಾನಿಕ್‌ ಹಣ ವರ್ಗಾವಣೆ, ಹತ್ತಾರು ಖಾತೆಗಳ ನಿರ್ವಹಣೆ, ಅಲ್ಲಿ ಆಗಿರುವ ವ್ಯವಹಾರಗಳು, ವಾಟ್ಸ್‌ ಆ್ಯಪ್‌ ಚಾಟ್‌ನ ದಾಖಲೆಗಳು ಮತ್ತು ಇತರ ಸಾಕ್ಷ್ಯ ಸಂಗ್ರಹದ ಬಳಿಕ ಬಂಧನ ನಡೆದಿದೆ’ ಎಂದು ಹೇಳಿದರು.

ನಟಿಯರಿಗೆ ಕೆಲವು ಸಾವಿರ; ಮಾಲೀಕರಿಗೆ ಲಕ್ಷ ಲಕ್ಷ!

ಈ ಅಶ್ಲೀಲ ಚಿತ್ರ ನಿರ್ಮಾಣದಲ್ಲಿ ತೊಡಗಿದ ನಟಿಯರು ಕೇವಲ ಕೆಲವು ಸಾವಿರಗಳಷ್ಟು ಕನಿಷ್ಠ ಸಂಭಾವನೆ ಪಡೆಯುತ್ತಿದ್ದರು. ಆದರೆ, ಇದು ಪ್ರಸಾರ ಆಗುವಾಗ ನಿರ್ಮಾಣ ಕಂಪನಿಗೆ ಲಕ್ಷಾಂತರ ರೂಪಾಯಿ ಗಳಿಕೆ ಮಾಡುತ್ತಿತ್ತು. ಚಿತ್ರ ಮಾರಾಟದ ಹಣ, ಅಪ್ಲಿಕೇಷನ್‌ (ಹಾಟ್‌ಷಾಟ್‌)ನ ಚಂದಾದಾರಿಕೆ ಹಣ ಇದರಲ್ಲಿ ಸೇರಿದೆ. ಇದುವರೆಗೆ ಸುಮಾರು ₹ 7.50 ಕೋಟಿ ಮೊತ್ತದಷ್ಟು ಸಂಗ್ರಹವಾಗಿರುವ ವಿವಿಧ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಅವರು ಹೇಳಿದರು.

ಇಬ್ಬರ ದೂರು

ಈ ಜಾಲಕ್ಕೆ ಸಿಲುಕಿದ ಒಬ್ಬ ಮಹಿಳೆ ಮುಂಬೈನ ಮಾಲ್ವಾನಿ ಠಾಣೆಯಲ್ಲಿ, ಮತ್ತೊಬ್ಬರು ಲೋನಾವಾಲಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಳಿಕ ಮುಂಬೈನ ಅಪರಾಧ ವಿಭಾಗವು ಈ ಪ್ರಕರಣದ ತನಿಖೆಯನ್ನು ಆರಂಭಿಸಿತು. ಇದಕ್ಕೂ ಮೊದಲು ಮಹಾರಾಷ್ಟ್ರದ ಸೈಬರ್‌ ಪೊಲೀಸರಿಗೂ ಈ ಹಗರಣದ ಬಗ್ಗೆ ದೂರು ಬಂದಿತ್ತು.

ಕಲಾವಿದರಿಗೆ ವೆಬ್‌ಸರಣಿಗಳಲ್ಲಿ ಅಥವಾ ಕಿರುಚಿತ್ರಗಳಲ್ಲಿ ಒಳ್ಳೆಯ ಅವಕಾಶ ನೀಡುವ ಆಮಿಷವೊಡ್ಡಿ ಆಡಿಷನ್‌ಗೆ ಕರೆತರಲಾಗುತ್ತಿತ್ತು. ಆಡಿಷನ್‌ ವೇಳೆಯಲ್ಲೇ ಅವರಿಂದ ‘ಬೋಲ್ಡ್‌’ ದೃಶ್ಯಗಳನ್ನು ಕಾಣಿಸುವಂತೆ ಕೋರಲಾಯಿತು. ಮುಂದೆ ಪೂರ್ಣಪ್ರಮಾಣದ ಶೂಟಿಂಗ್‌ ವೇಳೆ ಅರೆನಗ್ನ ಅಥವಾ ಪೂರ್ಣ ನಗ್ನ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವಂತೆ ಕೇಳುತ್ತಿದ್ದರು. ಬಹುತೇಕ ಸನ್ನಿವೇಶಗಳು ಕಲಾವಿದರ ಇಚ್ಛೆಗೆ ವಿರುದ್ಧವಾಗಿಯೇ ಇರುತ್ತಿದ್ದವು’ ಎಂದು ಮಿಲಿಂದ್‌ ಹೇಳಿದರು.

ಜಗತ್ತಿನಲ್ಲಿ ಇಂಥ ಅನೇಕ ಅಪ್ಲಿಕೇಷನ್‌ಗಳು ಕಾರ್ಯಾಚರಿಸುತ್ತಿವೆ. ಈ ಹಗರಣದ ಸುಳಿವು ದೊರೆತ ಆ್ಯಪಲ್‌ ಕಂಪನಿ ಹಾಟ್‌ಷಾಟ್‌ ಆ್ಯಪನ್ನು ತನ್ನ ಪ್ಲೇಸ್ಟೋರ್‌ನಿಂದ ತೆಗೆದುಹಾಕಿದೆ ಎಂದು ಅವರು ಮಾಹಿತಿ ನೀಡಿದರು.

ಬಂಧಿತರು

ನಿರ್ಮಾಪಕರಾದ ರೋಮಾ ಖಾನ್ ಮತ್ತು ಅವರ ಪತಿ, ನಟಿ ಗೆಹ್ನಾ ವಶಿಷ್ಠ, ನಿರ್ದೇಶಕ ತನ್ವೀರ್ ಹಶ್ಮಿ ಮತ್ತು ಉಮೇಶ್ ಕಾಮತ್ (ಕುಂದ್ರಾ ಅವರ ಸಂಸ್ಥೆಯ ವ್ಯವಹಾರ ನೋಡಿಕೊಳ್ಳುತ್ತಿದ್ದರು) ಅವರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.

ಮುಂಬೈನ ಹೊರವಲಯದ ಬಂಗಲೆಯೊಂದರಲ್ಲಿ ಈ ಚಿತ್ರಗಳ ಶೂಟಿಂಗ್‌ ನಡೆಯುತ್ತಿತ್ತು. ಹಳೇ ಕಾಲದ ಕಟ್ಟಡವಾಗಿರುವ ಈ ಬಂಗಲೆಯಲ್ಲಿ ಸಣ್ಣ ಸಣ್ಣ ಕಾಟೇಜ್‌ಗಳು ಇವೆ. ಇಲ್ಲಿ ಕಡಿಮೆ ಸಂಖ್ಯೆಯ ಸಿಬ್ಬಂದಿ ಹಾಗೂ ಕಲಾವಿದರನ್ನು ಬಳಸಿ ಚಿತ್ರೀಕರಣ ಮಾಡಲಾಗುತ್ತಿತ್ತು ಎಂದು ಕೆಲವು ಸುದ್ದಿ ವಾಹಿನಿಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.