ಉದ್ಯಮಿ, ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರನ್ನು ಅಶ್ಲೀಲ ಚಿತ್ರಗಳ ನಿರ್ಮಾಣ ಮತ್ತು ಆ್ಯಪ್ ಮೂಲಕ ವಿತರಣೆ ಆರೋಪಕ್ಕೆ ಸಂಬಂಧಿಸಿ ಬಂಧಿಸಿದ ಬೆನ್ನಲ್ಲೇ ರೂಪದರ್ಶಿ ಸಾಗರಿಕಾ ಶೋನಾ ಅವರ ಸಂದರ್ಶನವೊಂದು ಸುದ್ದಿಯಲ್ಲಿದೆ.
‘ರಾಜ್ ಕುಂದ್ರಾ ಅವರ ಸಂಸ್ಥೆಯ ವೆಬ್ ಸಿರೀಸ್ ನಿರ್ಮಾಣ ಸಂಬಂಧಿಸಿ ಆನ್‌ಲೈನ್‌ನಲ್ಲಿ ನಗ್ನವಾಗಿ ಆಡಿಷನ್ ಕೊಡಬೇಕು ಎಂದು ಹೇಳಿದ್ದರು’ ಎಂದು ಸಾಗರಿಕಾ ಆರೋಪಿಸಿದ್ದಾರೆ.
‘ಇಲ್ಲಿ ನಟಿಸಿದರೆ ಬಹಳ ಉನ್ನತಮಟ್ಟಕ್ಕೆ ಏರಬಹುದು ಎಂಬ ಭರವಸೆಯನ್ನೂ ಉಮೇಶ್ ಕಾಮತ್ (ರಾಜ್ ಕುಂದ್ರಾ ಅವರ ಸಹಾಯಕ) ಅವರು ನೀಡಿದ್ದರು. ಲಾಕ್‌ಡೌನ್ ಇದ್ದ ಕಾರಣ ಆಡಿಷನ್‌ಗೆ ಹೋಗಲಾಗುತ್ತಿರಲಿಲ್ಲ. ಹಾಗಾಗಿ ವಿಡಿಯೋ ಕಾಲ್‌ನಲ್ಲಿ ಸಂದರ್ಶನ ಕೊಡಲು ಎಂದು ಹೇಳಿದರು. ವಿಡಿಯೋ ಕಾಲ್‌ನಲ್ಲಿ ಸೇರಿದಾಗ ನಾನು ನಗ್ನವಾಗಿ ಪೋಸ್ ನೀಡುವಂತೆ ಹೇಳಿದರು. ನನಗೆ ಆಘಾತವಾಯಿತು. ನಾನು ನಿರಾಕರಿಸಿದೆ. ವಿಡಿಯೋ ಕಾಲ್‌ನಲ್ಲಿ ಮೂವರು ಇದ್ದರು. ಅವರ ಪೈಕಿ ಮುಖ ಮುಚ್ಚಿಕೊಂಡಿದ್ದ ಒಬ್ಬರು ರಾಜ್ ಕುಂದ್ರಾ ಅವರೇ ಇದ್ದಿರಬೇಕು. ಏಕೆಂದರೆ ಉಮೇಶ್ ಕಾಮತ್ ಅವರು ಈ ಮುಖ ಮುಚ್ಚಿಕೊಂಡಿದ್ದ ವ್ಯಕ್ತಿಯನ್ನು ರಾಜ್ ಕುಂದ್ರಾ ಎಂದು ಹೇಳಿ ಕರೆಯುತ್ತಿದ್ದರು. ಒಂದು ವೇಳೆ ಅವರು ಈ ದಂಧೆಯಲ್ಲಿ ತೊಡಗಿಸಿಕೊಂಡಿರುವುದೇ ನಿಜವಾದರೆ ಅವರನ್ನು ಬಂಧಿಸಿ ವಿಚಾರಣೆ ಮಾಡಬೇಕು. ಇದರಿಂದ ಎಷ್ಟೋ ಜನರ ಬದುಕು ಹಾಳಾಗಿದೆ’ ಎಂದು ಸಾಗರಿಕಾ ಹೇಳಿದ್ದಾರೆ.
‘ಕುಂದ್ರಾ ಅವರೇ ಇಂಥ ಜಾಲತಾಣಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಇಂಥ ಎಷ್ಟು ಜಾಲತಾಣಗಳಿವೆಯೋ ಅವುಗಳ ಮಾಲೀಕರು ಅವರೇ’ ಎಂದೂ ಅವರು ಹೇಳಿದ್ದಾರೆ.
‘ನಾನು ಎಲ್ಲ ಹೆಣ್ಣುಮಕ್ಕಳಿಗೆ ಇಂಥ ವಿಚಾರಗಳ ಕುರಿತು. ಜಾಗೃತಿ ಮೂಡಿಸುತ್ತಿದ್ದೇನೆ. ಹಣದಾಸೆಗಾಗಿ ಇಂಥ ಚಿತ್ರಗಳಲ್ಲಿ ಪಾಲ್ಗೊಳ್ಳುವುದು, ಇದರಿಂದ ಜೀವನ ಹಾಳು ಮಾಡಿಕೊಳ್ಳುವುದು ಸಲ್ಲದು. ಹೆಣ್ಣುಮಕ್ಕಳು ಮಾಡೆಲಿಂಗ್ ಕ್ಷೇತ್ರದಲ್ಲಿ ಬೆಳೆಯಲು ಸಾಕಷ್ಟು ಹೋರಾಟ ಮಾಡಲೇಬೇಕಾಗುತ್ತದೆ. ಆದರೆ, ಇಂಥ ಜಾಲಗಳಲ್ಲಿ ಸಿಲುಕಿ ಬದುಕನ್ನೇ ಹಾಳುಮಾಡಿಕೊಳ್ಳುವ ಅಪಾಯವಿದೆ’ ಎಂದು ಅವರು ಎಚ್ಚರಿಸಿದ್ದಾರೆ.
‘ಅಶ್ಲೀಲ ವಿಷಯ ಪ್ರಸಾರ ಮಾಡುವ ಎಲ್ಲ ಜಾಲತಾಣಗಳನ್ನು ಬಂದ್ ಮಾಡಬೇಕು. ನಾವು ಭಾರತೀಯರು. ನಮ್ಮ ಸಂಸ್ಕೃತಿ ಭಿನ್ನವಾದದ್ದು ಮತ್ತು ಖ್ಯಾತವಾದದ್ದು. ಇಂಥ ವಿಚಾರಗಳಿಂದ ತುಂಬಾ ತಪ್ಪು ನಡೆಯುತ್ತಿದೆ’ ಎಂದು ಸಾಗರಿಕಾ ಹೇಳಿದ್ದಾರೆ.
ಉಮೇಶ್ ಕಾಮತ್ ಅವರನ್ನು ಫೆ. 9ರಂದು ಬಂಧಿಸಲಾಗಿತ್ತು. ಉಮೇಶ್ ಬಗ್ಗೆ ಗೆಹಾನಾ ವಸಿಷ್ಠ್ ಮಾಹಿತಿ ನೀಡಿದ್ದರು. ಜೊತೆಗೆ ಶೆರ‍್ಲಿನ್ ಛೋಪ್ರಾ, ಪೂನಮ್ ಪಾಂಡೆ ಕೂಡಾ ರಾಜ್ ವಿರುದ್ಧ ಆರೋಪ ಮಾಡಿದ್ದಾರೆ. ಪ್ರಕರಣದಲ್ಲಿ ರಾಜ್ ಕುಂದ್ರಾ ಸಹಿತ 11 ಮಂದಿಯ ಬಂಧನವಾಗಿದೆ.
ಸಾಗರಿಕಾ ಅವರ ಹೇಳಿಕೆ ವೀಕ್ಷಿಸಲು
ಟ್ರೋಲ್‌ಗೊಳಗಾದ ರಾಜ್ ಕುಂದ್ರಾ
ರಾಜ್ ಕುಂದ್ರಾ ಅವರ ಟ್ವಿಟರ್ ಸ್ಟೇಟಸ್ ಬಳಸಿ ಟ್ರೋಲ್ ಮಾಡುವುದು ಆರಂಭವಾಗಿದೆ. ‘ಜೀವನ ಎಂದರೆ ಸರಿಯಾದ ಆಯ್ಕೆಗಳನ್ನು ಮಾಡುವುದರ ಬಗೆಗೇ ಇದೆ’ ಎಂದು ಅವರು ಬರೆದುಕೊಂಡಿದ್ದರು. ಹಾಗಿದ್ದರೆ ಸರಿಯಾದ ಆಯ್ಕೆ ಯಾವುದು...? ಎಂದೆಲ್ಲಾ ಟ್ರೋಲಿಗರು ಕೀಟಲೆ ಮಾಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.