ಮುಂಬೈ: ಭಾರೀ ಜನಮೆಚ್ಚುಗೆ ಜೊತೆಗೆ ಪ್ರಶಸ್ತಿಗಳನ್ನೂ ಬಾಚುತ್ತಿರುವ ‘ಆರ್‌ಆರ್‌ಆರ್’ಸಿನಿಮಾದ ‘ನಾಟು ನಾಟು’ ಹಾಡಿನ ಚಿತ್ರೀಕರಣ ಕುರಿತಂತ ನಿರ್ದೇಶಕ ರಾಜಮೌಳಿ ಮೆಲುಕು ಹಾಕಿದ್ದಾರೆ.
ಉಕ್ರೇನ್‌ನ ಅಧ್ಯಕ್ಷರ ಅರಮನೆಯಲ್ಲಿ ನಡೆದ ಚಿತ್ರೀಕರಣದ ಸಂದರ್ಭ ಅಲ್ಲಿನ ಜನತೆ ನೀಡಿದ ಸಹಕಾರವನ್ನು ಅವರು ಸಂದರ್ಶನವೊಂದರಲ್ಲಿ ಶ್ಲಾಘಿಸಿದ್ದಾರೆ.
ಎಂ.ಎಂ. ಕೀರವಾಣಿ ಸಂಗೀತ ನಿರ್ದೇಶನದ ನಾಟು ನಾಟು ಹಾಡು, ಅತ್ಯುತ್ತಮ ಮೂಲಗೀತೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಸ್ಪರ್ಧೆಯಲ್ಲಿ ಸ್ಥಾನ ಪಡೆದಿದೆ.
ನಾವು ಭಾರತದಲ್ಲೇ ಹಾಡಿನ ಚಿತ್ರೀಕರಣ ಮಾಡಬೇಕಿತ್ತು. ಮಾನ್ಸೂನ್ ಕಾರಣದಿಂದ ಉಕ್ರೇನ್ ರಾಜಧಾನಿ ಕೀವ್‌ನ ಅಧ್ಯಕ್ಷರ ಅರಮನೆಯನ್ನು ಆಯ್ಕೆ ಮಾಡಿಕೊಂಡೆವು ಎಂದು ಹೇಳಿದ್ದಾರೆ.
‘ನಾಟು ನಾಟು ಹಾಡಿನ ಬಗ್ಗೆ ಮಾತನಾಡುವಾಗ ನನ್ನ ಮನಸ್ಸಿಗೆ ಬರುವುದೆಂದರೆ ಅದನ್ನು ಚಿತ್ರೀಕರಿಸಿದ ಸ್ಥಳ. ಕೀವ್‌ನ ಅಧ್ಯಕ್ಷರ ಅರಮನೆಯಲ್ಲಿ ಚಿತ್ರೀಕರಣ ನಡೆಯಿತು. ಭಾರತದಲ್ಲೇ ಚಿತ್ರೀಕರಣ ಆಗಬೇಕಿತ್ತು. ಆದರೆ, ಆಗ ಮುಂಗಾರು ಆರಂಭವಾಗಿದ್ದರಿಂದ ಬೇರೆ ಸ್ಥಳದ ಹುಡುಕಾಟದಲ್ಲಿದ್ದೆವು. ಈ ಸ್ಥಳ ಸಿಕ್ಕಿತು’ ಎಂದು ಅವರು ಹೇಳಿದ್ದಾರೆ.
'ಅದು ಅಧ್ಯಕ್ಷರ ಅರಮನೆ ಆಗಿದ್ದರಿಂದ ಅನುಮತಿ ಸಿಗುವುದು ಕಷ್ಟವಾಗಬಹುದು. ಬೇರೆ ಸ್ಥಳಕ್ಕೆ ಹೋಗೋಣ ಅಂದುಕೊಂಡಿದ್ದೆ. ಆದರೆ, ಅವರು, ಇದು ಉಕ್ರೇನ್, ನಿಮ್ಮ ಕೆಲಸ ಆಗುತ್ತದೆ ಎಂದು ಹೇಳಿದರು. ನಮಗೆ ಅಷ್ಟು ಸಹಕಾರ ನೀಡಿದ ಉಕ್ರೇನ್ ತಂಡಕ್ಕೆ ನಾನು ಆಭಾರಿಯಾಗಿದ್ದೇನೆ. ನೃತ್ಯಪಟುಗಳ ನೃತ್ಯಕ್ಕೆ ಸಾಕಷ್ಟು ಸ್ಥಳ, ಅರಮನೆಯ ಬಣ್ಣಗಳು ಎಲ್ಲವೂ ಕೂಡಿಬಂದಿತು’ ಎಂದು ರಾಜಮೌಳಿ ಹೇಳಿದ್ದಾರೆ.
ಭಾರತದ ಇಬ್ಬರು ಕ್ರಾಂತಿಕಾರಿಗಳಾದ ಅಲ್ಲೂರಿ ಸೀತಾರಾಮರಾಜು ಮತ್ತು ಕೋಮರಂ ಭೀಮ್ ಸುತ್ತ ಹೆಣೆದಿರುವ ಸ್ವಾತಂತ್ರ್ಯ ಪೂರ್ವದ ಕಥಾಧರಿತ ಚಿತ್ರ ಆರ್‌ಆರ್‌ಆರ್. ಜೂನಿಯರ್ ಎನ್‌ಟಿಆರ್, ರಾಮ ಚರಣ್ ಜೊತೆಗೆ ಆಲಿಯಾ ಭಟ್, ಅಜಯ್ ದೇವಗನ್ ಮತ್ತು ಶ್ರೀಯಾ ಶರನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
‘ಉಕ್ರೇನ್ ಜನರ ವೃತ್ತಿಪರತೆ ಕಂಡು ನಿಜಕ್ಕೂ ಅಚ್ಚರಿಗೊಂಡಿದ್ದೇನೆ. ಅವರ ಜೊತೆ ಕೆಲಸ ಮಾಡಿದ್ದು ಅತ್ಯಂತ ಒಳ್ಳೆಯ ಅನುಭವ’ ಎಂದು ರಾಜಮೌಳಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.