ADVERTISEMENT

Rajiv Kapoor| ಗಂಗೆಯ ನೆನಪುಳಿಸಿ ಹೋದ ‘ನರೇಂದ್ರ’

ಪಿಟಿಐ
Published 9 ಫೆಬ್ರುವರಿ 2021, 16:59 IST
Last Updated 9 ಫೆಬ್ರುವರಿ 2021, 16:59 IST
ರಾಜೀವ್‌ ಕಪೂರ್‌
ರಾಜೀವ್‌ ಕಪೂರ್‌   

ಮುಂಬೈ: ‘ರಾಮ್ ತೇರಿ ಗಂಗಾ ಮೈಲಿ’ಯ ‘ನರೇಂದ್ರ ಸಹಾಯ್‌’ ನೆನಪುಗಳ ಗಂಗೆಯನ್ನಷ್ಟೇ ಉಳಿಸಿ ಇಹದ ಪಯಣ ಮುಗಿಸಿದ್ದಾರೆ.

ಅದು 1985ರ ಅವಧಿ ‘ರಾಮ್‌ ತೇರಿ ಗಂಗಾ ಮೈಲಿ’ ಸಿನಿಮಾ ಒಂದಿಷ್ಟು ಮೈಚಳಿ ಬಿಟ್ಟ ದೃಶ್ಯಗಳನ್ನು ಒಳಗೊಂಡಿತ್ತು ಎಂಬ ಕಾರಣಕ್ಕೆ ಸೆನ್ಸಾರ್‌ ಮಂಡಳಿಯ ಸಂಪ್ರದಾಯವಾದಿ ಮನಸ್ಸುಗಳು ಒಪ್ಪಲಿಲ್ಲವಂತೆ. ಕೊನೆಗೂ ಅದಕ್ಕೆ ‘ಯು’ ಪ್ರಮಾಣಪತ್ರ ಸಿಕ್ಕಿತು. ಪದೇಪದೇ ಶೋಷಣೆಗೊಳಗಾಗುವ ಕಥಾನಾಯಕಿ ಅಪವಿತ್ರಳಾದ ಗಂಗೆಯಂತಾಗಿದ್ದಳು ಎಂಬ ರೂಪಕವನ್ನಿಟ್ಟುಕೊಂಡು ಬಂದ ಸಿನಿಮಾ ಅದು.

ಇಲ್ಲಿ ರಾಜೀವ್‌ ಕಪೂರ್‌ ಅವರು ಚಿತ್ರದ ನಾಯಕ ನರೇಂದ್ರಸಹಾಯ್‌. ಕಥಾನಾಯಕಿ ಗಂಗಾ ಆಗಿ ಮಂದಾಕಿನಿ ನಟಿಸಿದ್ದರು. ಗಟ್ಟಿ ಕಥಾವಸ್ತುವಿನ ಜತೆಗೆ ನಾಯಕ ನಾಯಕಿಯ ಶೃಂಗಾರದ ದೃಶ್ಯಗಳೇ ಚಿತ್ರವನ್ನು ಯಶಸ್ಸಿನತ್ತ ಒಯ್ದಿದ್ದವು. ರಾಜೀವ್‌ ಕಪೂರ್‌ ಅವರಿಗೆ ಭರ್ಜರಿ ಬ್ರೇಕ್‌ ಕೊಟ್ಟ ಸಿನಿಮಾ ಅದು. ತಂದೆ ರಾಜ್‌ಕಪೂರ್‌ ಅವರೇ ಈ ಚಿತ್ರ ನಿರ್ದೇಶಿಸಿದ್ದರು. ಅಲ್ಲಿಂದ ರಾಜೀವ್‌ ಹಿಂದಿರುಗಿ ನೋಡಲಿಲ್ಲ.

ADVERTISEMENT

1983ರಲ್ಲಿ ‘ಏಕ್‌ ಜಾನ್‌ ಹೈ ಹಮ್‌’ ಸಿನಿಮಾ ಮೂಲಕ ಅವರು ಬಾಲಿವುಡ್‌ಗೆ ಕಾಲಿಟ್ಟರು. ‘ರಾಮ್‌ತೇರಿ...’ ಬಳಿಕ ‘ಆಸ್‌ಮಾನ್‌’, ‘ಲವರ್‌ ಬಾಯ್‌’, ‘ಜಬರ್ದಸ್ತ್‌’, ‘ಹಮ್‌ ತೋ ಚಲೇ ಪರ್ದೇಸ್‌’ ಹೀಗೆ ಸಾಲು ಸಾಲು ಚಿತ್ರಗಳು ಬಂದವು. ‘ಜಿಮ್ಮೇದಾರ್‌’, ’ನಾಗ್‌ನಾಗಿನ್‌’ ‘ಶುಕ್ರಿಯಾ’, ‘ಝಲ್‌ಝಲಾ’, ‘ಪ್ರೀತಿ’, ‘ಅಂಗಾರೇ’, ‘ಲವ’, ‘ಮೇರಾ ಸಾಥಿ’ ಅವರು ನಟಿಸಿದ ಪ್ರಮುಖ ಚಿತ್ರಗಳು. 1996ರಲ್ಲಿ ಸಹೋದರ ರಿಶಿಕಪೂರ್‌ ಅವರ ‘ಪ್ರೇಮ್‌ ಗ್ರಂಥ್‌‘ ಚಿತ್ರಕ್ಕೆ ರಾಜೀವ್‌ ನಿರ್ದೇಶನ ಮಾಡಿದ್ದರು. ‘ಆ ಅಬ್‌ ಲೌಟ್‌ ಚಲೇ’, ‘ಪ್ರೇಮ್‌ಗ್ರಂಥ್‌’, ‘ಹೆನ್ನಾ’ ಅವರ ನಿರ್ಮಾಣದ ಚಿತ್ರಗಳು. ಇತ್ತೀಚೆಗಷ್ಟೆ ಚಿತ್ರರಂಗದ ಚಟುವಟಿಕೆಗಳಿಂದ ಸ್ವಲ್ಪ ದೂರ
ಉಳಿದಿದ್ದರು.

ರಾಜ್‌ ಕಪೂರ್‌– ಕೃಷ್ಣಾ ಕಪೂರ್‌ ದಂಪತಿಯ ಪುತ್ರ ರಾಜೀವ್‌ ಅವರು ಜನಿಸಿದ್ದು ಆಗಸ್ಟ್‌ 25ರಂದು. ಕಪೂರ್ ಕುಟುಂಬಕ್ಕೆ ಬಾಲಿವುಡ್‌ನಲ್ಲಿ ದೊಡ್ಡ ಗೌರವ ಇದೆ.

ಕಳೆದ ವರ್ಷ ರಣಬೀರ್‌ ಕಪೂರ್‌ ಅವರ ತಂದೆ ನಟ ರಿಷಿ ಕಪೂರ್‌ ನಿಧನರಾಗಿದ್ದರು. ಈಗ ರಾಜೀವ್‌ ಕಪೂರ್‌ ಇಲ್ಲವಾಗಿದ್ದಾರೆ. ಕಪೂರ್‌ ಕುಟುಂಬದ ಹಿರಿಯ ಸ್ತಂಭಗಳು ಕಳಚಿಕೊಳ್ಳುತ್ತಿರುವುದು ಕಪೂರ್‌ ಕುಟುಂಬ ಹಾಗೂ ಬಾಲಿವುಡ್‌ಗೆ ಆಘಾತ
ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.