ಕಂಬಳ ಕರಾವಳಿ ಭಾಗದ ಸಂಸ್ಕೃತಿಯ ಭಾಗ. ಕೆಸರುಗದ್ದೆಯಲ್ಲಿ ಕೋಣವನ್ನು ಓಡಿಸುವ ಸಂಪ್ರದಾಯವಾದ ಕಂಬಳವು ಉಡುಪಿ ಹಾಗೂ ದಕ್ಷಿಣಕನ್ನಡ ಭಾಗದಲ್ಲಿ ಹೆಚ್ಚು ಜನಪ್ರಿಯ. ಈಗ ಕಂಬಳದ ಮೇಲೆ ಸಿನಿಮಾ ಮಾಡಲು ಹೊರಟಿದ್ದಾರೆ ಚಂದನವನದ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು.
ವರ್ಷದ ಹಿಂದೆ ನಿರ್ಮಾಪಕ ನಿಖಿಲ್ ಮಂಜು ಕಂಬಳದ ಓಟಗಾರ ಶ್ರೀನಿವಾಸ ಗೌಡ ಅವರ ಮೇಲೆ ಸಿನಿಮಾ ಮಾಡುವುದಾಗಿ ತಿಳಿಸಿದ್ದರು. ಶ್ರೀನಿವಾಸ ಗೌಡ ಕೆಸರುಗದ್ದೆಯಲ್ಲಿ ಉಸೈನ್ ಬೋಲ್ಟ್‌ಗಿಂತಲೂ ವೇಗವಾಗಿ ಓಡಿ ದಾಖಲೆ ನಿರ್ಮಿಸಿದ್ದರು. ಈಗ ರಾಜೇಂದ್ರ ಸಿಂಗ್ ಬಾಬು ಕಂಬಳದ ವಿಷಯವನ್ನು ತೆರೆ ಮೇಲೆ ತರಲು ಸಜ್ಜಾಗಿದ್ದಾರೆ ಎನ್ನುತ್ತಿವೆ ಮೂಲಗಳು.
ಇತ್ತೀಚೆಗೆ ಮೂಡಿಬಿದರೆಯಲ್ಲಿದ್ದ ಬಾಬು ‘500 ವರ್ಷಗಳ ಇತಿಹಾಸವಿರುವ ಕಂಬಳವು ಕನ್ನಡ ಸಿನಿಮಾದಲ್ಲಿ ಪ್ರಸ್ತಾಪವಾಗದ ವಿಷಯವಾಗಿ ಉಳಿದಿದೆ. ನಾನು ಈ ಸಿನಿಮಾಕ್ಕೆ ಸಂಬಂಧಿಸಿ ಸ್ಕ್ರಿಪ್ಟ್ ಕೆಲಸದಲ್ಲಿ ತೊಡಗಿದ್ದೇನೆ’ ಎಂದಿದ್ದಾರೆ.
‘ಒಮ್ಮೆ ಸ್ಕ್ರಿಪ್ಟ್ ಅಂತಿಮವಾದ ಮೇಲೆ ಪಾತ್ರವರ್ಗದ ಬಗ್ಗೆ ಯೋಚಿಸುತ್ತೇನೆ. ಈ ಸಿನಿಮಾವನ್ನು ಕನ್ನಡ ಹಾಗೂ ತುಳುವಿನಲ್ಲಿ ಮಾಡುವ ಯೋಚನೆ ಇದೆ’ ಎಂದಿದ್ದಾರೆ ಸಿಂಗ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.