ಕನ್ನಡ ಸಿನಿಮಾ ಪ್ರೇಕ್ಷಕರ ಪಾಲಿಗೆ ಜನವರಿ 10ರ ಶುಕ್ರವಾರ ಶೂನ್ಯ ದಿನ ಎಂದರೆ ತಪ್ಪಲ್ಲ. ಏಕೆಂದರೆ ಈ ವಾರ ಒಂದು ಕನ್ನಡ ಸಿನಿಮಾವೂ ಬಿಡುಗಡೆಯಾಗುತ್ತಿಲ್ಲ. ತಮಿಳು ಮತ್ತು ತೆಲುಗು ಚಿತ್ರಗಳು ಈ ವಾರ ಥಿಯೇಟರ್‌ಗೆ ಲಗ್ಗೆ ಇಡುತ್ತಿರುವುದೇ ಇದಕ್ಕೆ ಮೂಲ ಕಾರಣ.
ಪರಭಾಷೆಯ ಸಿನಿಮಾಗಳು ಮಲ್ಟಿಫ್ಲೆಕ್ಸ್ ಸೇರಿದಂತೆ ಹೆಚ್ಚಿನ ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿರುವುದರಿಂದ ಕನ್ನಡ ಸಿನಿಮಾಗಳಿಗೆ ಥಿಯೇಟರ್ ಸಮಸ್ಯೆ ಎದುರಾಗಿದೆ. ಹಾಗಾಗಿ, ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ ಎನ್ನಲಾಗಿದೆ.
ಎ.ಆರ್. ಮುರುಗದಾಸ್ ನಿರ್ದೇಶನದ ‘ಸೂಪರ್ ಸ್ಟಾರ್’ ರಜನಿಕಾಂತ್ ನಟನೆಯ ‘ದರ್ಬಾರ್’ ಚಿತ್ರ ಜ. 9ರಂದು ಬಿಡುಗಡೆಯಾಗುತ್ತಿದೆ. ಲೈಕಾ ಪ್ರೊಡಕ್ಷನ್ ಕಂಪನಿ ನಿರ್ಮಾಣದ ಈ ಸಿನಿಮಾ ಏಕಕಾಲಕ್ಕೆ ತಮಿಳು ಸೇರಿದಂತೆ ಹಿಂದಿ, ತೆಲುಗು ಮತ್ತು ಮಲಯಾಳದಲ್ಲಿ ತೆರೆ ಕಾಣುತ್ತಿದೆ. ರಜನಿಕಾಂತ್ ಅವರು ಹಲವು ವರ್ಷದ ಬಳಿಕ ಪೊಲೀಸ್ ಅಧಿಕಾರಿಯಾಗಿ ಇದರಲ್ಲಿ ಬಣ್ಣ ಹಚ್ಚಿದ್ದಾರೆ. ಕಥೆ ಮತ್ತು ಮೇಕಿಂಗ್‌ನಿಂದಲೇ ಈ ಚಿತ್ರ ಕುತೂಹಲ ಸೃಷ್ಟಿಸಿದೆ. ಅಂದಹಾಗೆ ಇದರಲ್ಲಿ ರಜನಿಗೆ ನಟಿ ನಯನತಾರಾ ಜೋಡಿ.
ಜನವರಿ 10ರಂದು ‘ಟಾಲಿವುಡ್ ಪ್ರಿನ್ಸ್’ ಮಹೇಶ್‌ಬಾಬು ನಟನೆಯ ತೆಲುಗಿನ ‘ಸರಿಲೇರು ನೀಕೆವ್ವರು’ ಚಿತ್ರ ತೆರೆ ಕಾಣುತ್ತಿದೆ. ಇದಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ಅನಿಲ್ ರವಿಪುಡಿ. ವಿಜಯಶಾಂತಿ ಎರಡು ದಶಕದ ಬಳಿಕ ಈ ಚಿತ್ರದ ಮೂಲಕ ಮತ್ತೆ ಬಣ್ಣಹಚ್ಚಿದ್ದಾರೆ. ಅಂದಹಾಗೆ ಕನ್ನಡತಿ ರಶ್ಮಿಕಾ ಮಂದಣ್ಣ ಅವರು ಮಹೇಶ್‌ಬಾಬು ಅವರಿಗೆ ಇದರಲ್ಲಿ ನಾಯಕಿಯಾಗಿದ್ದಾರೆ.
ತೆಲುಗಿನ ‘ಅಲಾ ವೈಕುಂಠಪುರಮುಲೋ’ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಮತ್ತು ಅಲ್ಲು ಅರ್ಜುನ್ ಅವರ ಕಾಂಬಿನೇಷನ್‌ನಡಿ ಮೂಡಿಬರುತ್ತಿರುವ ಚಿತ್ರ. ಈ ಸಿನಿಮಾ ಜನವರಿ 12ರಂದು ಬಿಡುಗಡೆಯಾಗುತ್ತಿದೆ. ಇದರಲ್ಲಿ ಕನ್ನಡತಿ ಪೂಜಾ ಹೆಗ್ಡೆ ಅವರು ಅಲ್ಲು ಅರ್ಜುನ್ ಜೊತೆಗೆ ಸೊಂಟ ಬಳುಕಿಸಿದ್ದಾರೆ.
ದೀಪಿಕಾ ಪಡುಕೋಣೆ ನಟನೆಯಆ್ಯಸಿಡ್ ಸಂತ್ರಸ್ತೆಯ ಜೀವನಾಧಾರಿತ ಹಿಂದಿಚಿತ್ರ ‘ಛಪಾಕ್’ಜನವರಿ 10 ರಂದು ತೆರೆಕಾಣುತ್ತಿದೆ. ಮೇಘನಾ ಗುಲ್ಜಾರ್ ಅವರು ನಿರ್ದೇಶಿಸಿರುವ ಸಿನಿಮಾ ಇದು.
ಈ ನಾಲ್ಕು ಚಿತ್ರಗಳು ಬಿಗ್ ಬಜೆಟ್ ಚಿತ್ರಗಳಾಗಿವೆ. ಹಲವು ಚಿತ್ರಮಂದಿರಗಳಿಗೆ ಲಗ್ಗೆ ಇಡಲಿವೆ. ಕರ್ನಾಟಕದಲ್ಲಿಯೂ ರಜನಿಕಾಂತ್, ಮಹೇಶ್‌ಬಾಬು ಮತ್ತು ಅಲ್ಲು ಅರ್ಜುನ್ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ.
ಮತ್ತೊಂದೆಡೆ ಕನ್ನಡದಲ್ಲಿಯೂ ಹಲವು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಆದರೆ, ಈ ಮೂರು ಚಿತ್ರಗಳ ಅಬ್ಬರ ಜೋರಿರುವುದರಿಂದ ಕನ್ನಡದ ಯಾವೊಬ್ಬ ನಿರ್ಮಾಪಕರು ತಮ್ಮ ಸಿನಿಮಾಗಳನ್ನು ಬಿಡುಗಡೆಗೊಳಿಸುವ ಸಾಹಸಕ್ಕೆ ಮುಂದಾಗಿಲ್ಲ.
ನಂದ ಕಿಶೋರ್ ನಿರ್ದೇಶನದ ‘ಆ್ಯಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ‘ಪೊಗರು’ ಚಿತ್ರದ ಶೂಟಿಂಗ್ ಪೂರ್ಣಗೊಂಡಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಜನವರಿಯಲ್ಲಿಯೇ ಈ ಸಿನಿಮಾವೂ ಬಿಡುಗಡೆಯಾಗಬೇಕಿತ್ತು. ಆದರೆ, ತಮಿಳು ಮತ್ತು ತೆಲುಗು ಚಿತ್ರಗಳು ಬಿಡುಗಡೆಯಾಗುತ್ತಿರುವುದರಿಂದ ಈ ಚಿತ್ರದ ಬಿಡುಗಡೆಯ ದಿನಾಂಕವೂ ಮುಂದಕ್ಕೆ ಹೋಗಿದೆಯಂತೆ. ಫೆಬ್ರುವರಿ ಅಂತ್ಯಕ್ಕೆ ಅಥವಾ ಮಾರ್ಚ್‌ನಲ್ಲಿ ‘ಪೊಗರು’ ತನ್ನ ಖದರ್ ತೋರಿಸುವ ನಿರೀಕ್ಷೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.