ಗುಂಡ್ಲುಪೇಟೆ: ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಡಿಸ್ಕವರಿ ಚಾನೆಲ್‌ನ ಜನಪ್ರಿಯ ಕಾರ್ಯಕ್ರಮ ಮ್ಯಾನ್ ವರ್ಸಸ್ ವೈಲ್ಡ್‌ನ ಬೇರ್ ಗ್ರಿಲ್ಸ್ ಅವರು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೀಡು ಬಿಟ್ಟಿದ್ದು, ಚಿತ್ರೀಕರಣದಲ್ಲಿ ತೊಡಗಿದ್ದಾರೆ.
ರಜನಿಕಾಂತ್ ಅವರು ಸೋಮವಾರವೇ ಬಂಡೀಪುರದಲ್ಲಿರುವ ಸೆರಾಯ್ ರೆಸಾರ್ಟ್‌ನಲ್ಲಿ ತಂಗಿದ್ದರು. ಬೇರ್ ಗ್ರಿಲ್ಸ್ ಅವರು ಮಂಗಳವಾರ ಬೆಳಿಗ್ಗೆ 10.30ರ ಸುಮಾರಿಗೆ ಹೆಲಿಕಾಪ್ಟರ್‌ನಲ್ಲಿ ಗುಂಡ್ಲುಪೇಟೆಯಲ್ಲಿ ಬಂದಿಳಿದು, ನೇರವಾಗಿ ಮದ್ದೂರು ವಲಯದ ಅರಣ್ಯ ಪ್ರದೇಶಕ್ಕೆ ಹೋಗಿದ್ದಾರೆ.
ಮುಂಬೈನ ಸೆವೆನ್‌ಟೌರಸ್ ಎಂಟರ್‌ಟೈನ್‌ಮೆಂಟ್ ಸ್ಟುಡಿಯೊಸ್ ಸಂಸ್ಥೆ ಅರಣ್ಯ ಇಲಾಖೆಯೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದಾರೆ. ಇಲಾಖೆಯು ಸೋಮವಾರದಿಂದ (ಜ.27) ಬುಧವಾರ (ಜ.29) ಮಧ್ಯಾಹ್ನದವರೆಗೆ ಚಿತ್ರೀಕರಣ ನಡೆಸಲು ಅನುಮತಿ ನೀಡಿದೆ.
‘ಬಂಡೀಪುರದಲ್ಲಿ ನಾಲ್ಕು ಪ್ರದೇಶದಲ್ಲಿ ಚಿತ್ರೀಕರಣ ನಡೆಸಲಾಗುತ್ತದೆ ಎಂಬ ಮಾಹಿತಿ ಇದೆ.ಯಾರಿಗೂ ಪ್ರವೇಶ ಇಲ್ಲವಾಗಿದೆ. ಪೋನ್ ಕೊಂಡೊಯ್ಯದಂತೆ ಅರಣ್ಯ ಸಿಬ್ಬಂದಿಗೂ ಸೂಚನೆ ಕೊಟ್ಟಿದ್ದಾರೆ’ ಎಂದು ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ತಿಳಿಸಿದರು.
ಮಾನವ-ವನ್ಯಜೀವಿ ಸಂಘರ್ಷದ ಬಗ್ಗೆ ಜಾಗೃತಿ ಮೂಡಿಸಲು ಸಿದ್ಧಪಡಿಸಲಾಗುತ್ತಿರುವ ಸಾಕ್ಷ್ಯಚಿತ್ರದಲ್ಲಿ ಇಬ್ಬರೂ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಕೆಲವರು ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದ ಚಿತ್ರೀಕರಣ ನಡೆಸಲಾಗುತ್ತಿದೆ ಎಂದು ಹೇಳುತ್ತಿದ್ದಾರೆ.ಚಿತ್ರೀಕರಣ ನಡೆಯುತ್ತಿರುವ ಸ್ಥಳ ಹಾಗೂ ವಿವರಗಳನ್ನು ಗೋಪ್ಯವಾಗಿ ಇಡಲಾಗಿದೆ.
ವಿರೋಧ: ಈ ಮಧ್ಯೆ, ಬೇಸಿಗೆ ಆರಂಭದಲ್ಲಿ ಚಿತ್ರೀಕರಣ ನಡೆಸಲು ಅನುಮತಿ ನೀಡಿರುವುದಕ್ಕೆ ಕೆಲವು ಪರಿಸರ ವಾದಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಅರಣ್ಯ ಸಿಬ್ಬಂದಿ ಕಾಳ್ಗಿಚ್ಚು ತಡೆಗಟ್ಟುವ ಸಲುವಾಗಿ ಬೆಂಕಿ ರೇಖೆ, ಇನ್ನಿತರ ಕೆಲಸಗಳಒತ್ತಡದಲ್ಲಿ ಇರುತ್ತಾರೆ. ಅ ಕೆಲಸವನ್ನು ಬಿಟ್ಟು ಇವರ ರಕ್ಷಣೆಗೆ ನಿಲ್ಲಬೇಕಾಗುತ್ತದೆ. ಮಳೆಗಾಲದಲ್ಲಿ ಅಥವಾ ನಂತರ ಅವಕಾಶ ನೀಡಬೇಕಿತ್ತು’ ಎಂದು ಪರಿಸರವಾದಿ ಜೋಸೆಫ್ ಹೂವರ್ ಹೇಳಿದ್ದಾರೆ.
‘ರಜನಿಕಾಂತ್ ಅವರು ತಮಿಳುನಾಡಿನ ಸರ್ಕಾರದ ಗಮನ ಸೆಳೆದು ಮಧುಮಲೆ ಹುಲಿ ಸಂರಕ್ಷಿತ ಅರಣ್ಯದಲ್ಲಿ ನಡೆಯುತ್ತಿರುವ ರಾತ್ರಿ ಸಫಾರಿಯನ್ನು ನಿಲ್ಲಿಸಲು ಒತ್ತಡ ತರಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
ಹಿಂದೆಯೂ ವಿರೋಧ: ಈ ಹಿಂದೆ ಡಾ.ರಾಜ್‌ಕುಮಾರ್ ಅಭಿನಯದ ‘ಹುಲಿ ಹಾಲಿನ ಮೇವು’ ಚಿತ್ರದ ಶೂಟಿಂಗ್‌ಗಾಗಿ ಅಂದಿನ ಗುಂಡೂರಾವ್ ಸರ್ಕಾರ ಅನುಮತಿ ನೀಡಿತ್ತು. ಪರಿಸರವಾದಿಗಳಿಂದ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಅನುಮತಿ ವಾಪಸ್ ಪಡೆಯಲಾಗಿತ್ತು. ಆದಾದ ಬಳಿಕ, ಈಗ ಚಿತ್ರೀಕರಣ ನಡೆಸಲು ಅನುಮತಿ ನೀಡಲಾಗಿದೆ.
‘ಮ್ಯಾನ್ ವರ್ಸಸ್ ವೈಲ್ಡ್’
ಡಿಸ್ಕವರಿ ಚಾನೆಲ್‌ನ ಜನಪ್ರಿಯ ಕಾರ್ಯಕ್ರಮ. ಬೇರ್ ಗ್ರಿಲ್ಸ್ ಇದರ ನಿರೂಪಕ. ಪರಿಚಯ ಇಲ್ಲದಿರುವ ದಟ್ಟ ಅರಣ್ಯದಲ್ಲಿ ವ್ಯಕ್ತಿಯೊಬ್ಬ ಒಂಟಿಯಾಗಿ ಸಂಚರಿಸುತ್ತ, ಅಲ್ಲಿ ಎದುರಾಗುವ ಸಂಕಷ್ಟಗಳನ್ನು ದಾಟಿ, ಜೀವಿಸಬಹುದಾದ ಸಾಧ್ಯತೆಗಳನ್ನು ಇದರಲ್ಲಿ ತೋರಿಸಿಕೊಡಲಾಗುತ್ತದೆ. ಈ ಕಾರ್ಯಕ್ರಮಕ್ಕೆ ವಿಶ್ವದಾದ್ಯಂತ ಅಸಂಖ್ಯಾತ ನೋಡುಗರಿದ್ದಾರೆ.
ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಖ್ಯಾತ ಟೆನಿಸ್ ಆಟಗಾರ ರೋಜರ್ ಫೆಡರರ್, ಮಿಷೆಲ್ ಬಿ ಜಾರ್ಡನ್, ಜ್ಯಾಕ್ ಎಫ್ರಾನ್ ಸೇರಿದಂತೆ ವಿಶ್ವದ ಹಲವು ಗಣ್ಯರು ಈ ಅಡ್ವೆಂಚರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅನುಭವ ಹಂಚಿಕೊಂಡಿದ್ದಾರೆ.
ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಗ್ರಿಲ್ಸ್‌ನ ಜೊತೆಗೆ ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಭರ್ಜಿ ಹಿಡಿದು ಹೆಜ್ಜೆ ಹಾಕಿದ್ದರು. ಹುಲಿಗಳ ಸಂಖ್ಯೆ ಹೆಚ್ಚಿರುವ ಈ ಕಾನನದಲ್ಲಿ ಮೋದಿ ಅವರು ತಮ್ಮ ಬಾಲ್ಯದ ನೆನಪುಗಳನ್ನು ಬಿಚ್ಚಿಟ್ಟಿದ್ದರು. ವಿಶ್ವದ 180 ದೇಶಗಳಲ್ಲಿ ಏಕಕಾಲಕ್ಕೆ ಈ ಕಾರ್ಯಕ್ರಮ ಪ್ರಸಾರವಾಗಿತ್ತು.
ಈ ವರ್ಷ ಗ್ರಿಲ್ಸ್ ‘ಸೂಪರ್ ಸ್ಟಾರ್’ ರಜನಿಕಾಂತ್ ಜೊತೆಗೆ ಕಾಡಿನಲ್ಲಿ ಹೆಜ್ಜೆಹಾಕಲು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರಕ್ಕೆ ಆಗಮಿಸಿದ್ದಾರೆ. ಬಂಡೀಪುರ ಜೀವವೈವಿಧ್ಯದ ತಾಣ. ಕರ್ನಾಟಕದಲ್ಲಿಯೇ ಅತಿಹೆಚ್ಚು ಹುಲಿಗಳಿರುವ ಅರಣ್ಯವೂ ಹೌದು.
‘ತಲೈವ’ ಜೊತೆಗೆ ಶೂಟಿಂಗ್ ಪೂರ್ಣಗೊಳಿಸಿದ ಬಳಿಕ ಗ್ರಿಲ್ಸ್ ಬಾಲಿವುಡ್ ನಟ ಅಕ್ಷಯ್‌ಕುಮಾರ್ ಜೊತೆಗೆ ಮೂರು ಗಂಟೆಗಳ ಕಾಲ ಶೂಟಿಂಗ್ ನಡೆಸಲಿದ್ದಾರಂತೆ. ಅವರು ಬುಧವಾರದಂದು ಬಂಡೀಪುರಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.
ಉತ್ತರ ಭಾರತದ ಅರಣ್ಯ ಪ್ರದೇಶಗಳಲ್ಲಿ ಶೂಟಿಂಗ್ ನಡೆಸಲು ಡಿಸ್ಕವರಿ ಚಾನೆಲ್ ತಂಡ ಈ ಮೊದಲು ನಿರ್ಧರಿಸಿತ್ತಂತೆ. ಆದರೆ, ಅಲ್ಲಿನ ಅನುಮತಿ ದೊರೆಕಿಲ್ಲ. ಹಾಗಾಗಿ, ಬಂಡೀಪುರದಲ್ಲಿ ಚಿತ್ರೀಕರಣ ನಡೆಸಲು ತೀರ್ಮಾನಿಸಲಾಗಿದೆಯಂತೆ. ಈ ಶೂಟಿಂಗ್‌ಗಾಗಿ ಅರಣ್ಯ ಇಲಾಖೆಯು ವಿಶೇಷ ಅನುಮತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.