ತುಮಕೂರು: ಚಲನಚಿತ್ರ ಕ್ಷೇತ್ರದಲ್ಲಿನ ಸಾಧನೆಗಾಗಿ ಹಿರಿಯ ಛಾಯಾಗ್ರಾಹಕ ತಿಪಟೂರಿನ ಬಿ.ಎಸ್.ಬಸವರಾಜು ಹಾಗೂ ಕ್ರೀಡಾ ಕ್ಷೇತ್ರದ (ವಾಲಿಬಾಲ್ ತರಬೇತಿ) ಸಾಧನೆಗಾಗಿ ಗುಬ್ಬಿ ತಾಲ್ಲೂಕು ಕಲ್ಲೂರು ಕ್ರಾಸ್ ಬಳಿಯ ಕುಣಾಘಟ್ಟದ ನಿವಾಸಿ ಎಚ್.ಬಿ.ನಂಜೇಗೌಡ ಅವರು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಇಬ್ಬರು ಸಾಧಕರು ಜಿಲ್ಲೆಯ ಕೀರ್ತಿಯನ್ನು ರಾಜ್ಯ ಮಟ್ಟದಲ್ಲಿ ಎತ್ತಿ ಹಿಡಿದಿದ್ದಾರೆ.
ಕ್ಯಾಮೆರಾ ಕಣ್ಣು: 55 ವರ್ಷಗಳ ಕಾಲ ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಬಸವರಾಜು ಅವರು 120ಕ್ಕೂ ಹೆಚ್ಚು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ.
ಮೊದಲಿಗೆ ಒರಿಯಾ ಭಾಷೆಯ ರಘುನಾಥ್ ನಿರ್ದೇಶನದ ‘ಹೀರಾ ಮೋತಿ ಔರ್ ಮಾಣಿಕ್ಯ’ ಸಿನಿಮಾದಲ್ಲಿ ಕೆಲಸ ಮಾಡಿದರು. ಇದು ಅವರು ಪೂರ್ಣ ಪ್ರಮಾಣದ ಛಾಯಾಗ್ರಾಹಕರಾಗಿ ಕೆಲಸ ಮಾಡಿದ ಮೊದಲ ಚಿತ್ರ. ಅಲ್ಲಿಂದ ತಮಿಳು ಸಿನಿಮಾಗಳತ್ತ ಮುಖ ಮಾಡಿದರು. ನಂತರ ಕನ್ನಡಕ್ಕೆ ಬಂದ ಅವರು ‘ಅಂಧದ ಅರಮನೆ’ ಸಿನಿಮಾದಲ್ಲಿ ಕೆಲಸ ಮಾಡಿದರು. ಇದು ಅವರ ಕನ್ನಡದ ಮೊದಲ ಚಿತ್ರ.
1968–69ರಲ್ಲಿ ಸ್ನೇಹಿತರ ಜತೆ ಸೇರಿ ‘ಊರ್ವಶಿ’ ಸಿನಿಮಾ ನಿರ್ಮಿಸಿದರು. ಪುಟ್ಟಣ್ಣ ಕಣಗಾಲ್ ಅವರ ‘ಮಾನಸ ಸರೋವರ’, ‘ಧರಣಿ ಮಂಡಲ ಮಧ್ಯದೊಳಗೆ’, ‘ಅಮೃತಗಳಿಗೆ’ ಸಿನಿಮಾಗಳಿಗೆಛಾಯಾಗ್ರಾಹಕರಾಗಿ ಕೆಲಸ ಮಾಡಿದರು. ‘ಬೂತಯ್ಯನ ಮಗ ಅಯ್ಯು’ ಅವರಿಗೆ ಹೆಚ್ಚಿನ ಮನ್ನಣೆ ತಂದುಕೊಟ್ಟಿತು. ‘ಉಪಾಸನೆ’, ‘ಪುಟ್ಟ ಹೆಂಡ್ತಿ’, ‘ಕಾವ್ಯ’, ‘ರಾವಣ ರಾಜ್ಯ’, ‘ನೆನಪಿನ ದೋಣಿ’ ‘ನನ್ನ ಗೋಪಾಲ’ ಇವು ಅವರುಛಾಯಾಗ್ರಾಹಕರಾಗಿ ಕೆಲಸ ಮಾಡಿದ ಪ್ರಮುಖ ಚಿತ್ರಗಳು. ವಿ.ಕೆ.ರಾಮಮೂರ್ತಿ, ಕೂಡ್ಲು ರಾಮಕೃಷ್ಣ, ಎ.ಟಿ.ರಘು ಹೀಗೆ ಹಲವು ನಿರ್ದೇಶಕರ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.
ಋತ್ವಿಕ್ ಸಿಂಹ ನಿರ್ದೇಶನದ ‘ರಸಋಷಿ ಕುವೆಂಪು’ ಸಿನಿಮಾಛಾಯಾಗ್ರಾಹಕರಾಗಿ ಬಸವರಾಜು ಅವರು ಕೆಲಸ ಮಾಡಿದ ಕೊನೆಯ ಚಿತ್ರ. ಜೀವಮಾನದ ಸಾಧನೆಗಾಗಿ ಅವರಿಗೆ ರಾಜ್ಯ ಸರ್ಕಾರ ನೀಡುವ ಡಾ.ವಿಷ್ಣುವರ್ಧನ್ ಪ್ರಶಸ್ತಿ ಸಂದಿದೆ. ಸದ್ಯ ಬೆಂಗಳೂರಿನಲ್ಲಿ ನೆಲೆ
ನಿಂತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.