ನವದೆಹಲಿ:‘ನಟಿ ತನುಶ್ರೀ ದತ್ತ ಸಲಿಂಗಿ. ಅವಳು ನನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾಳೆ’ ಎಂದು ಬಾಲಿವುಡ್ ನಟಿ ರಾಖಿ ಸಾವಂತ್ ಟ್ವೀಟ್ ಮಾಡಿದ್ದು, ‘ಮೀ ಟೂ’ ಅಭಿಯಾನಕ್ಕೆ ಮತ್ತೊಂದು ತಿರುವು ಸಿಕ್ಕಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೂ ಮಾತನಾಡಿರುವ ರಾಖಿ, ‘ಈಗ ‘ಶೀ ಟೂ’ ಬಗ್ಗೆ ಮಾತನಾಡುವ ಕಾಲ ಬಂದಿದೆ. ಮಹಿಳೆ ಮೇಲೆ ಮತ್ತೊಬ್ಬ ಮಹಿಳೆ ಅತ್ಯಾಚಾರ ಎಸಗಲು ಹೇಗೆ ಸಾಧ್ಯ ಎಂದು ನೀವು ಪ್ರಶ್ನಿಸಬಹುದು. ತನುಶ್ರೀ ಮಿಸ್ ಇಂಡಿಯಾ ಎನ್ನುವುದೂ ನನಗೆ ಗೊತ್ತು. 12 ವರ್ಷಗಳಿಂದ ಆಕೆ ನನ್ನ ಉತ್ತಮ ಗೆಳತಿ. ಆದರೆ, ಅವಳು ಪುರುಷರಂತೆ ವರ್ತಿಸುತ್ತಾಳೆ’ ಎಂದು ಆರೋಪಿಸಿದ್ದಾರೆ.
ತನುಶ್ರೀ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದ ನಟ ನಾನಾ ಪಾಟೇಕರ್ ಅವರನ್ನು ರಾಖಿ ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ಇದೇ ಆರೋಪ ಎದುರಿಸುತ್ತಿರುವ ಅಲೋಕ್‌ನಾಥ್, ಗಣೇಶ ಆಚಾರ್ಯ ಮತ್ತು ಅನು ಮಲ್ಲಿಕ್ ಅವರ ಪರವಾಗಿಯೂ ಮಾತನಾಡಿದ್ದಾರೆ. ‘ಮೀ ಟೂ’ ಅಭಿಯಾನ ಕೈಗೊಳ್ಳಲು ತನುಶ್ರೀ ಹಣ ಪಡೆದಿದ್ದಾರೆ ಎಂದೂ ರಾಖಿ ಆರೋಪ ಮಾಡಿದ್ದಾರೆ.
‘ತನುಶ್ರೀ ನನ್ನೊಂದಿಗೆ ವರ್ತಿಸಿದ ರೀತಿ ಬಗ್ಗೆ ಹೇಳಿಕೊಳ್ಳಲು ಅಸಹ್ಯ ಎನಿಸುತ್ತದೆ. ಆಗಲೇ ಈ ವಿಷಯವನ್ನು ನಾನು ಹೇಳಿದ್ದರೆ ನನ್ನ ಕೊಲೆಯಾಗುವ ಸಾಧ್ಯತೆ ಇತ್ತು’ ಎಂದೂ ಅವರು ಹೇಳಿದ್ದಾರೆ.
ರಾಖಿ ವಿರುದ್ಧ ತನುಶ್ರೀ ₹10 ಕೋಟಿ ಮೊತ್ತದ ಮಾನಹಾನಿ ಪ್ರಕರಣ ದಾಖಲಿಸಿದ್ದರೆ, ತನ್ನನ್ನು ‘ಕೀಳುದರ್ಜೆಯ ಹೆಣ್ಣು’ ಎಂದಿದ್ದಕ್ಕಾಗಿ ತನುಶ್ರೀ ವಿರುದ್ಧ ₹50 ಕೋಟಿ ಮಾನಹಾನಿ ಪ್ರಕರಣ ದಾಖಲಿಸುವುದಾಗಿರಾಖಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.