ADVERTISEMENT

ಗೋವಿನ ಹಾಡಿನ ಚಿಕ್ಕ ಗುಟ್ಟು

‘ಪುಣ್ಯಕೋಟಿ’ ಕೆಲಸದಲ್ಲಿ ರಕ್ಷಿತ್ ಬ್ಯುಸಿ

​ಪ್ರಜಾವಾಣಿ ವಾರ್ತೆ
Published 1 ಮೇ 2020, 19:30 IST
Last Updated 1 ಮೇ 2020, 19:30 IST
ನಟ ರಕ್ಷಿತ್‌ ಶೆಟ್ಟಿ
ನಟ ರಕ್ಷಿತ್‌ ಶೆಟ್ಟಿ   

‘ಅವನೇ ಶ್ರೀಮನ್ನಾರಾಯಣ’ ಚಿತ್ರದ ನಂತರ ರಕ್ಷಿತ್ ಶೆಟ್ಟಿ ಅವರಿಗೆ ಲಾಕ್‌ಡೌನ್‌ ಕಾರಣದಿಂದಾಗಿ ದೀರ್ಘ ರಜೆ ಸಿಕ್ಕಿದಂತೆ ಆಗಿದೆ. ಈ ರಜಾಕಾಲದಲ್ಲಿ ರಕ್ಷಿತ್ ಅವರು ಪುಸ್ತಕಗಳ ಓದು, ಸಿನಿಮಾ ವೀಕ್ಷಣೆ ಹಾಗೂ ಒಂದಿಷ್ಟು ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲ, ತಮ್ಮ ನಿರ್ದೇಶನದ ಮುಂದಿನ ಸಿನಿಮಾ ‘ಪುಣ್ಯಕೋಟಿ’ಗೆ ಅಗತ್ಯವಿರುವ ಒಂದಿಷ್ಟು ಅಧ್ಯಯನ ಹಾಗೂ ಅದರ ಸ್ಕ್ರಿಪ್ಟ್‌ ಬರವಣಿಗೆ ಕೆಲಸದಲ್ಲಿ ಕೂಡ ರಕ್ಷಿತ್ ಬ್ಯುಸಿಯಾಗಿ ಇದ್ದಾರೆ. ‘ಅಧ್ಯಯನ ಹಾಗೂ ಸ್ಕ್ರಿಪ್ಟ್‌ ಬರವಣಿಗೆ ಕೆಲಸ ಒಟ್ಟೊಟ್ಟಿಗೆ ಸಾಗುತ್ತಿವೆ’ ಎಂದು ಪ್ರಜಾಪ್ಲಸ್‌ ಜೊತೆ ಮಾತಿಗೆ ಸಿಕ್ಕಿದ್ದ ರಕ್ಷಿತ್ ಹೇಳಿದರು.

ಪುಣ್ಯಕೋಟಿ ಸಿನಿಮಾದ ಕಥೆಯ ಎಳೆಯನ್ನೂ ಒಂದಿಷ್ಟು ತಿಳಿಸಿದರು ರಕ್ಷಿತ್. ‘ಪುಣ್ಯಕೋಟಿ ಗೋವಿನ ಹಾಡಿನಲ್ಲಿ ಬರುವ ಕಥೆಯನ್ನು ಇಟ್ಟುಕೊಂಡು, ಅದನ್ನು ಇನ್ನೊಂದಿಷ್ಟು ಬೆಳೆಸಿ ಸಿನಿಮಾ ಕಥೆ ಸಿದ್ಧಮಾಡುತ್ತಿದ್ದೇನೆ. ಅಂದಹಾಗೆ, ಇದು ಆ್ಯನಿಮೇಷನ್ ಸಿನಿಮಾ ಅಂತೂ ಅಲ್ಲ’ ಎಂದರು.

ADVERTISEMENT

ಗೋವಿನ ಪಾತ್ರವನ್ನು ಒಬ್ಬಳು ಹೆಣ್ಣುಮಗಳ ಜೊತೆ ಸಮೀಕರಿಸಿ, ಹುಲಿಯ ಪಾತ್ರವನ್ನು ಪುರುಷನೊಬ್ಬನ ಜೊತೆ ಸಮೀಕರಿಸಿ ಕಥೆ ಸಿದ್ಧವಾಗುತ್ತಿದೆ. ಹಾಡಿನಲ್ಲಿ ಬರುವ ಗೋವು ಸತ್ಯಕ್ಕಾಗಿ ಪ್ರಾಣತ್ಯಾಗಕ್ಕೂ ಸಿದ್ಧವಿರುತ್ತದೆ. ಚಿತ್ರದಲ್ಲಿ ಬರುವ ಹೆಣ್ಣುಮಗಳು ಸತ್ಯಕ್ಕಾಗಿ ಯಾವೆಲ್ಲ ತ್ಯಾಗಕ್ಕೆ ಸಿದ್ಧವಾಗಿರುತ್ತಾಳೆ, ಹುಲಿಯನ್ನು ಪ್ರತಿನಿಧಿಸುವ ಪುರುಷ ಪಾತ್ರ ಯಾವ ರೀತಿ ವರ್ತಿಸುತ್ತದೆ ಎಂಬುದು ಸಿನಿಮಾ ಕಥೆಯ ಭಾಗ ಎಂದು ವಿವರಿಸಿದರು.

‘ಇಡೀ ಕಥೆ ಹಿಂದಿನ ಕಾಲಘಟ್ಟವೊಂದರಲ್ಲಿ ನಡೆಯುತ್ತದೆ. ಅಮೀಶ್ ತ್ರಿಪಾಠಿ ಅವರು ಬರೆದ ಶಿವ ಸರಣಿ ಕಥೆಯ ಮಾದರಿಯಲ್ಲಿ ಈ ಚಿತ್ರದ ಕಥೆಯನ್ನು ಕಲ್ಪಿಸಿಕೊಳ್ಳಬಹುದು. ನಮ್ಮ ಸಿನಿಮಾದಲ್ಲಿ ಫ್ಯಾಂಟಸಿ, ಪುರಾಣ, ವಾಸ್ತವಗಳ ಮಿಶ್ರಣ ಇರುತ್ತದೆ’ ಎಂದು ಅವರು ಹೇಳಿದರು.

ತಾವು ಕಲ್ಪಿಸಿಕೊಂಡಿರುವ ರೀತಿಯಲ್ಲಿ ಸಿನಿಮಾ ಮಾಡುವುದು ದೊಡ್ಡ ಸಾಹಸ ಎಂಬ ಅರಿವು ರಕ್ಷಿತ್ ಅವರಿಗೆ ಇದೆ. ಆದರೆ, ಈ ಚಿತ್ರವನ್ನು ತಾವು ಮಾಡಲೇಬೇಕು ಎಂಬ ನಿರ್ಧಾರ ಅವರದ್ದು. ತಮ್ಮ ತಲೆಯಲ್ಲಿ ಇರುವ ಕಥೆಯನ್ನು ಒಂದೇ ಸಿನಿಮಾ ಮೂಲಕ ಹೇಳಬೇಕು ಎಂಬ ಹಟ ಅವರಲ್ಲಿ ಇಲ್ಲ. ‘ಪುಣ್ಯಕೋಟಿ’ ಸಿನಿಮಾವನ್ನು ಎರಡು ಭಾಗಗಳಲ್ಲಿ ಕೂಡ ಹೇಳಬಹುದು ಎಂದು ಅವರು ಅಭಿಪ್ರಾಯಪಡುತ್ತಾರೆ.

‘ಚಿತ್ರದಲ್ಲಿ ನಾನು ಪಾತ್ರವಾಗಿ ಇರುತ್ತೇನೆ. ಗೆಳೆಯ ರಿಷಬ್ ಶೆಟ್ಟಿ ಕೂಡ ಒಂದು ಪಾತ್ರವಾಗಿ ಇದ್ದೇ ಇರುತ್ತಾನೆ, ಖಂಡಿತ’ ಎಂದು ರಕ್ಷಿತ್ ದೃಢವಾಗಿ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.