ADVERTISEMENT

ಚುನಾವಣಾ ಕಣಕ್ಕೆ ಆರ್‌ಜಿವಿ: ಪವನ್ ಕಲ್ಯಾಣ್ ವಿರುದ್ಧ ಪೀಠಾ‍ಪುರಂನಿಂದ ಸ್ಪರ್ಧೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಮಾರ್ಚ್ 2024, 14:19 IST
Last Updated 14 ಮಾರ್ಚ್ 2024, 14:19 IST
<div class="paragraphs"><p>ರಾಮ್‌ ಗೋಪಾಲ್ ವರ್ಮ ಮತ್ತು ಪವನ್ ಕಲ್ಯಾಣ್</p></div>

ರಾಮ್‌ ಗೋಪಾಲ್ ವರ್ಮ ಮತ್ತು ಪವನ್ ಕಲ್ಯಾಣ್

   

ಹೈದರಾಬಾದ್‌: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಚಿತ್ರ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಗುರುವಾರ ಘೋಷಿಸಿದ್ದಾರೆ.

ಆಂಧ್ರಪ್ರದೇಶದ ಪೀಠಾಪುರಂ ಲೋಕಸಭಾ ಕ್ಷೇತ್ರದಲ್ಲಿ ಜನ ಸೇನಾ ಪಕ್ಷದ ಮುಖ್ಯಸ್ಥ ಹಾಗೂ ನಟ ಪವನ್‌ ಕಲ್ಯಾಣ್‌ ವಿರುದ್ಧ ಕಣಕ್ಕಿಳಿಯುವುದಾಗಿ ಅವರು ತಮ್ಮ ‘ಎಕ್ಸ್‌’ ಖಾತೆಯಲ್ಲಿ ಹೇಳಿದ್ದಾರೆ.

ADVERTISEMENT

‘ನಾನು ಪೀಠಾಪುರಂ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದೇನೆ ಎಂದು ತಿಳಿಸಲು ಹರ್ಷಿಸುತ್ತೇನೆ. ಇದು ದಿಢೀರ್‌ ನಿರ್ಧಾರ’ ಎಂದು ಪೋಸ್ಟ್‌ ಮಾಡಿರುವ ಅವರು, ಹೆಚ್ಚಿನ ವಿವರಗಳನ್ನು ತಿಳಿಸಿಲ್ಲ.

ಟಿಡಿಪಿ, ಜನ ಸೇನಾ ಪಕ್ಷ ಹಾಗೂ ಬಿಜೆಪಿ ಚುನಾವಣಾ ಮೈತ್ರಿ ಘೋಷಿಸಿರುವ ಬೆನ್ನಲ್ಲೇ, ರಾಮ್‌ಗೋಪಾಲ್‌ ವರ್ಮಾ ಅವರು ತಮ್ಮ ಈ ನಿರ್ಧಾರವನ್ನು ಪ್ರಕಟಿಸಿರುವುದು ಗಮನಾರ್ಹ.

ಕಳೆದ ವರ್ಷ ಬಿಡುಗಡೆಗೊಂಡಿದ್ದ ರಾಮ್‌ಗೋಪಾಲ್‌ ವರ್ಮಾ ನಿರ್ದೇಶನದ ಚಿತ್ರ ‘ವ್ಯೂಹಂ’ ಭಾರಿ ವಿವಾದಕ್ಕೆ ಕಾರಣವಾಗಿತ್ತು. ನಂತರ, ರಾಮ್‌ಗೋಪಾಲ್‌ ವರ್ಮಾ ಅವರನ್ನು ರಾಜ್ಯದಿಂದ ಉಚ್ಚಾಟಿಸಬೇಕು ಎಂದು ರಾಜ್ಯದ ಹಲವಾರು ರಾಜಕೀಯ ಮುಖಂಡರು ಆಗ್ರಹಿಸಿದ್ದರು.

ಇದೇ ವಿಚಾರವಾಗಿ, ಹೈದರಾಬಾದ್‌ನಲ್ಲಿರುವ ತಮ್ಮ ಕಚೇರಿ ಮುಂದೆ ನಡೆದಿದ್ದ ಪ್ರತಿಭಟನೆಗೆ ಸಂಬಂಧಿಸಿ ರಾಮ್‌ ಗೋಪಾಲ್ ವರ್ಮಾ ಅವರು ಟಿಡಿಪಿ ವರಿಷ್ಠ ಎನ್‌.ಚಂದ್ರಬಾಬು ನಾಯ್ಡು, ಪುತ್ರ ನಾರಾ ಲೋಕೇಶ್‌ ಹಾಗೂ ಜನ ಸೇನಾ ಪಕ್ಷದ ಸಂಸ್ಥಾಪಕ ಪವನ್‌ ಕಲ್ಯಾಣ್‌ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಅವಿಭಜಿತ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೈ.ಎಸ್‌.ರಾಜಶೇಖರ ರೆಡ್ಡಿ ಅವರ ಸಾವಿಗೆ ಸಂಬಂಧಿಸಿದ ಸನ್ನಿವೇಶಗಳ ಕುರಿತ ಕಥಾವಸ್ತು ಹೊಂದಿದ್ದ ಈ ಚಿತ್ರದಲ್ಲಿ ಮಾನಸ ರಾಧಾಕೃಷ್ಣನ್‌, ಅಜ್ಮಲ್ ಅಮೀರ್‌ ಹಾಗೂ ಸುರಭಿ ಪ್ರಭಾವತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.