ಹಿಂದಿ ಭಾಷೆ ವಿಚಾರವಾಗಿ ಕನ್ನಡದ ಖ್ಯಾತ ನಟ ಸುದೀಪ್ ಹಾಗೂ ಬಾಲಿವುಡ್‌ನ ಅಜಯ್ ದೇವಗನ್ ನಡುವೆ ಟ್ವಿಟರ್‌ನಲ್ಲಿ ನಡೆದ ಚರ್ಚೆಗೆ ಸಂಬಂಧಿಸಿದಂತೆ, ಸಿನಿಮಾ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರುಪ್ರತಿಕ್ರಿಯಿಸಿದ್ದಾರೆ.
ಕಿಚ್ಚ ಸುದೀಪ್ ಅವರು ಕಾರ್ಯಕ್ರಮವೊಂದರಲ್ಲಿ 'ಹಿಂದಿ ರಾಷ್ಟ್ರಭಾಷೆ ಅಲ್ಲ' ಎಂದಿದ್ದರು. ಅದಕ್ಕೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದ ಅಜಯ್ ದೇವಗನ್, 'ಹಿಂದಿ ರಾಷ್ಟ್ರ ಭಾಷೆ' ಎಂದು ಪ್ರತಿಪಾದಿಸಿದ್ದರು. 'ರಾಷ್ಟ್ರಭಾಷೆ' ವಿಚಾರದ ಬಗ್ಗೆ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಕನ್ನಡಿಗರು ಅಜಯ್ ದೇವಗನ್ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಸುದೀಪ್ ಪರ ಬ್ಯಾಟ್ ಬೀಸಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, 'ಮೂಲ ನೆಲದ ಸತ್ಯವನ್ನು ಯಾರೊಬ್ಬರೂ ಅಲ್ಲಗಳೆಯಲಾಗದು ಸುದೀಪ್ ಸರ್. ಉತ್ತರದ ನಟ–ನಟಿಯರು, ದಕ್ಷಿಣದ ತಾರೆಯರ ಬಗ್ಗೆಭಯ ಮತ್ತು ಅಸೂಯೆ ಹೊಂದಿದ್ದಾರೆ. ಏಕೆಂದರೆ, ಕನ್ನಡದಿಂದ ಡಬ್ ಆದ 'ಕೆಜಿಎಫ್–2' ಮೊದಲ ದಿನವೇ ₹ 50 ಕೋಟಿ ಗಳಿಕೆ ಕಂಡಿದೆ. ಮುಂದೆಹಿಂದಿ ಸಿನಿಮಾಗಳ ಆರಂಭಿಕ ದಿನಗಳನ್ನು ನಾವೆಲ್ಲರೂ ನೋಡಲಿದ್ದೇವೆ' ಎಂದು ಟ್ವೀಟ್ ಮಾಡಿದ್ದಾರೆ.
ಪ್ರಶಾಂತ್ ನೀಲ್ ನಿರ್ದೇಶನದ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್–2' ದೇಶದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅದಕ್ಕೂ ಮೊದಲು ತೆಲುಗು ಸಿನಿಮಾಗಳಾದ ಅಲ್ಲು ಅರ್ಜುನ್ ನಟನೆಯ 'ಪುಷ್ಪ', ಎಸ್‌ಎಸ್ ರಾಜಮೌಳಿ ನಿರ್ದೇಶನದ 'ಆರ್‌ಆರ್‌ಆರ್' ಉತ್ತಮ ಗಳಿಕೆ ಕಂಡಿದ್ದವು.
ಅಜಯ್ ದೇವಗನ್ ಅಭಿನಯದ 'ರನ್‌ವೇ 34' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅಮಿತಾಭ್ ಬಚ್ಚನ್, ರಾಕುಲ್ ಪ್ರೀತ್ ಸಿಂಗ್ ಅವರೂ ಈ ಚಿತ್ರದಲ್ಲಿ ನಟಿಸಿದ್ದಾರೆ.
ಸುದೀಪ್ ಹೇಳಿದ್ದೇನು?
ಕೆಲ ದಿನಗಳ ಹಿಂದೆ ನಡೆದ ರಾಮ್ ಗೋಪಾಲ್ ವರ್ಮಾ ನಿರ್ದೇಶನದ, ನಟ ಉಪೇಂದ್ರ ಅವರ ನೂತನ ಪ್ಯಾನ್ ಇಂಡಿಯಾ ಚಿತ್ರ 'ಐ ಆ್ಯಮ್ ಆರ್' ಶೀರ್ಷಿಕೆ ಅನಾವರಣ ಸಂದರ್ಭದಲ್ಲಿ ಸುದೀಪ್ ಮಾತನಾಡಿ, ‘ಪ್ರಸ್ತುತ ಹಿಂದಿ ಎನ್ನುವುದು ರಾಷ್ಟ್ರೀಯ ಭಾಷೆಯಾಗಿಲ್ಲ. ಬಾಲಿವುಡ್‌ನವರು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡುತ್ತಿದ್ದು, ಅಲ್ಲಿಂದ ತೆಲುಗು ಮತ್ತು ತಮಿಳು ಭಾಷೆಗೆ ಡಬ್ ಮಾಡಿ, ಒದ್ದಾಡುತ್ತಿದ್ದಾರೆ. ದಕ್ಷಿಣದ ಸಿನಿಮಾಗಳು ಡಬ್ ಆಗಿ ಅಲ್ಲಿ ಓಡುತ್ತಿವೆ. ನಾವು ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿಲ್ಲ. ಅದು ಮುಂಬೈನಿಂದ ಬರುತ್ತಿದೆ. ನಾವು ಎಲ್ಲೆಡೆಯೂ ತಲುಪುವ ಸಾಮರ್ಥ್ಯವಿರುವ ಸಿನಿಮಾ ಮಾಡುತ್ತಿದ್ದೇವೆ. ಇವತ್ತು ಚಿತ್ರರಂಗವು ಮುನ್ನುಗುತ್ತಿರುವುದನ್ನು ನೋಡುತ್ತಿರುವಾಗ, ಭಾಷೆ ಎನ್ನುವುದು ಕೇವಲ ತಡೆಯಾಗಿತ್ತಷ್ಟೇ. ಇವತ್ತು ಇದನ್ನು ಒಡೆದು ಮುನ್ನುಗ್ಗಿದೆ’ ಎಂದಿದ್ದರು. ಇತ್ತೀಚೆಗೆ ಸಂದರ್ಶನವೊಂದರಲ್ಲೂ ಇದನ್ನು ಮರು ಉಲ್ಲೇಖಿಸಿದ್ದರು.
ಆ ಹೇಳಿಕೆ ಸಂಬಂಧ ಬುಧವಾರ ಅಜಯ್ ದೇವಗನ್ ಟ್ವೀಟ್ ಮಾಡಿ, 'ನಿಮ್ಮ ಪ್ರಕಾರ, ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲವಾದರೆ, ನೀವೇಕೆ ನಿಮ್ಮ ಪ್ರಾದೇಶಿಕ ಭಾಷೆಯ ಸಿನಿಮಾಗಳನ್ನು ಹಿಂದಿಯಲ್ಲಿ ಡಬ್ ಮಾಡಿ ಬಿಡುಗಡೆ ಮಾಡುತ್ತಿರುವಿರಿ? ಹಿಂದಿ ಭಾಷೆಯು ಈ ಹಿಂದೆ, ಈಗ ಮತ್ತು ಯಾವಾಗಲೂ ನಮ್ಮ ಮಾತೃ ಭಾಷೆ ಮತ್ತು ರಾಷ್ಟ್ರ ಭಾಷೆಯಾಗಿದೆ. ಜನ ಗಣ ಮನ' ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.