ಮಕ್ಕಳ ಚಿತ್ರಗಳಲ್ಲಿ ಸಾಮಾಜಿಕ ಕಾಳಜಿ ಇರಬೇಕು ಎಂಬುದು ಹಳೆಯ ಮಾತು. ಇದಕ್ಕೆ ಪೂರಕ ಎನ್ನುವಂತೆ ಗಾಂಧೀಜಿ ಕಂಡ ‘ರಾಮರಾಜ್ಯ’ದ ಕನಸನ್ನು ಮಕ್ಕಳ ಮೂಲಕ ಸಿನಿಮಾದಲ್ಲಿ ನನಸು ಮಾಡಲು ಹೊರಟಿದ್ದಾರೆ ನಿರ್ದೇಶಕ ನೀಲ್ ಕಮಲ್.
‘ರಾಮರಾಜ್ಯ’ ಸಿನಿಮಾಕ್ಕೆ ಯಾವುದೇ ಚಿತ್ರದ ಪ್ರೇರಣೆ ಇಲ್ಲ. ಇದರ ನಿರ್ಮಾಣಕ್ಕೂ ಮೊದಲು ಎಲ್ಲ ಭಾಷೆಗಳಲ್ಲಿ ಬಂದಿರುವ ಮಕ್ಕಳ ಚಿತ್ರಗಳನ್ನು ನೋಡಿದ್ದೇನೆ. ಇದು ಭಿನ್ನವಾದ ಕಥೆ’ ಎಂದು ಹೇಳಿದರು ನೀಲ್ ಕಮಲ್.
ನಟ ಪ್ರೇಮ್ ಅವರ ಪುತ್ರ ಮಾಸ್ಟರ್ ಏಕಾಂತ್ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾನೆ. ಅವನೊಟ್ಟಿಗೆ ಮಾಸ್ಟರ್ ಕಾರ್ತಿಕ್, ಮಾಸ್ಟರ್ ಹೇಮಂತ್, ಮಾಸ್ಟರ್ ಶೋಹಿಬ್ ನಟಿಸಿದ್ದಾರೆ. ಅನ್ಯಾಯದ ವಿರುದ್ಧ ಸಿಡಿದೇಳುವ ಮಕ್ಕಳ ಚಿತ್ರ ಇದು ಎಂದರು ನಿರ್ದೇಶಕರು.
‘ಎಲ್ಲರೂ ಸುಖವಾಗಿ ಜೀವಿಸಬೇಕೆಂಬುದು ಗಾಂಧೀಜಿ ಕನಸಾಗಿತ್ತು. ಅದನ್ನೇ ಚಿತ್ರದಲ್ಲಿ ಹೇಳಿದ್ದೇವೆ’ ಎಂದರು.
ನಟಿ ಅಶ್ವಿನಿ ಗೌಡ ಮೇಕಪ್ ಇಲ್ಲದೆ ನಟಿಸಿರುವುದು ಈ ಚಿತ್ರದ ವಿಶೇಷಗಳಲ್ಲಿ ಒಂದು. ‘ಹನ್ನೆರಡು ವರ್ಷಗಳನನ್ನ ವೃತ್ತಿಬದುಕಿನಲ್ಲಿ ಮೇಕಪ್ ಇಲ್ಲದೆ ನಟಿಸಿರುವ ಮೊದಲ ಚಿತ್ರ ಇದು. ನನ್ನದು ವಿಧವೆ ಪಾತ್ರ. ಮಧ್ಯಮ ವರ್ಗದ ಹೆಣ್ಣುಮಗಳೊಬ್ಬಳು ಮಗನನ್ನು ಹೇಗೆ ಬೆಳೆಸುತ್ತಾಳೆ ಎನ್ನುವುದನ್ನು ಚಿತ್ರಕಥೆ ಕಟ್ಟಿಕೊಡುತ್ತದೆ’ ಎಂದು ವಿವರಿಸಿದರು.
ಚಿತ್ರಕ್ಕೆ ಗೀತೆ ರಚನೆ ಮಾಡಿರುವ ವಿ. ನಾಗೇಂದ್ರಪ್ರಸಾದ್ ಲಾಯರ್ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ. ‘ನಾನು ವೃತ್ತಿಪರ ನಟನಲ್ಲ. ನಿರ್ದೇಶಕರ ಒತ್ತಾಯದ ಮೇರೆಗೆ ನಟಿಸಿದ್ದೇನೆ. ಮಕ್ಕಳು ಸೆಟ್‌ನಲ್ಲಿ ನಿರ್ದೇಶಕರು, ಛಾಯಾಗ್ರಾಹಕರನ್ನು ಗೋಳು ಹೊಯ್ದುಕೊಂಡರು. ಎಲ್ಲರಿಗೂ ಉಜ್ವಲ ಭವಿಷ್ಯವಿದೆ’ ಎಂದು ಹಾರೈಸಿದರು. ನಟ ಪ್ರೇಮ್ ಚಿತ್ರತಂಡಕ್ಕೆ ಶುಭ ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.