ನಟ ರಮೇಶ್ ಅರವಿಂದ್ ನಟನೆಯ ‘100’ ಚಿತ್ರ ಟೈಟಲ್‌ನಿಂದಲೇ ಕುತೂಹಲ ಹೆಚ್ಚಿಸಿದೆ. ಅವರೇ ನಿರ್ದೇಶಿಸಿರುವ ಈ ಸಿನಿಮಾದ ಶೂಟಿಂಗ್ ಕೂಡ ಪೂರ್ಣಗೊಂಡಿದೆ.
‘ಭೈರಾದೇವಿ’ಯಲ್ಲಿ ರಮೇಶ್ ಅವರದು ಅಪರಾಧ ವಿಭಾಗದ ಪೊಲೀಸ್ ಅಧಿಕಾರಿಯ ಪಾತ್ರ. ‘ಶಿವಾಜಿ ಸುರತ್ಕಲ್’ ಚಿತ್ರದಲ್ಲಿ ಪತ್ತೇದಾರಿ ಪಾತ್ರ. ‘100’ ಚಿತ್ರದಲ್ಲಿ ಸೈಬರ್ ಅಪರಾಧ ವಿಭಾಗದ ತನಿಖಾಧಿಕಾರಿಯಾಗಿ ಬಣ್ಣ ಹಚ್ಚಿದ್ದಾರೆ.
ಸಮಾಜದಲ್ಲಿ ಬೆಂಕಿ, ಚಾಕು, ಅಧಿಕಾರ, ಸಾಮಾಜಿಕ ಜಾಲತಾಣ ಸೃಷ್ಟಿಸುತ್ತಿರುವ ಅವಾಂತರ ಒಂದೆರಡಲ್ಲ. ಈ ಅಸ್ತ್ರಗಳು ಯಾರ ಕೈಯಲ್ಲಿವೆ ಎನ್ನುವುದರ ಮೇಲೆ ದುಷ್ಪಾರಿಣಾಮವನ್ನು ಅಂದಾಜಿಸಲಾಗುತ್ತದೆ. ದುಷ್ಕರ್ಮಿಗಳು ಹಚ್ಚುವ ಬೆಂಕಿ ನಂದುವುದಿಲ್ಲ. ಚಾಕು ದುಷ್ಟರ ಕೈಗೆ ಸಿಕ್ಕಿದರೆ ರಕ್ತಪಾತ ನಡೆಯುತ್ತದೆ. ತಪ್ಪಿತಸ್ಥರ ಕೈಯಲ್ಲಿ ಅಧಿಕಾರ ಸಿಕ್ಕಿದರೆ ಕೆಟ್ಟ ಇತಿಹಾಸ ಸೃಷ್ಟಿಯಾಗುತ್ತದೆ. ಸಾಮಾಜಿಕ ಜಾಲತಾಣವೂ ಇದರಿಂದ ಹೊರತಲ್ಲ. ಇದರ ಸುತ್ತವೇ ‘100’ ಚಿತ್ರದ ಕಥೆ ಹೆಣೆಯಲಾಗಿದೆ.
ಮೊಬೈಲ್ ಗೀಳಿಗೆ ಬಿದ್ದ ನಾಯಕಿಯರಾಗಿ ರಚಿತಾ ರಾಮ್ ಮತ್ತು ಪೂಜಾ ಬಣ್ಣ ಹಚ್ಚಿದ್ದಾರೆ. ದುಷ್ಟ ವ್ಯಕ್ತಿಯ ಪಾತ್ರದಲ್ಲಿ ಹೊಸ ಪ್ರತಿಭೆ ವಿಶ್ವ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:ನಟ ಅಲ್ಲ; ನಿರ್ಮಾಪಕ ರಮೇಶ್ ಅರವಿಂದ್
ಗುರು ಕಶ್ಯಪ್ ಸಂಭಾಷಣೆ ಬರೆದಿದ್ದಾರೆ. ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ. ರವಿ ಬಸ್ರೂರ್ ಎರಡು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ರವಿವರ್ಮಾ ಅವರ ಸಾಹಸ ನಿರ್ದೇಶನವಿದೆ. ಆಕಾಶ್ ಶ್ರೀವತ್ಸ ಅವರ ಸಂಕಲನವಿದೆ. ಕಲಾ ನಿರ್ದೇಶನ ಮೋಹನ್ ಪಂಡಿತ್ ಅವರದ್ದು. ಧನು ನೃತ್ಯ ನಿರ್ದೇಶಿಸಿದ್ದಾರೆ.
ಸೂರಜ್ ಪ್ರೊಡಕ್ಷನ್‌ನಡಿ ನಿರ್ಮಾಪಕ ರಮೇಶ್ ರೆಡ್ಡಿ (ನಂಗ್ಲಿ) ಇದಕ್ಕೆ ಬಂಡವಾಳ ಹೂಡಿದ್ದಾರೆ. ಲಕ್ಷ್ಮಿ ಆನಂದ್, ಅಮಿತಾ ರಂಗನಾಥ್, ಸುಕನ್ಯಾ ಗಿರೀಶ್, ಶಿಲ್ಪಾ ಶೆಟ್ಟಿ, ಪಿ.ಡಿ. ಸತೀಶ್, ರಾಜೇಶ್ ರಾವ್, ಬೇಬಿ ಸ್ಮಯಾ ತಾರಾಗಣದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.