ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘KD’ ಭರ್ಜರಿಯಾಗಿಯೇ ತೆರೆ ಮೇಲೆ ಬರಲು ಸಜ್ಜಾಗುತ್ತಿದೆ. ಚಿತ್ರದಲ್ಲಿ ಬಹುದೊಡ್ಡ ತಾರಾಗಣವೇ ಇದ್ದು, ಇದೀಗ ‘KD’ ಲೋಕಕ್ಕೆ ನಟ ರಮೇಶ್ ಅರವಿಂದ್ ವಿಭಿನ್ನ ಲುಕ್ನಲ್ಲಿ ಪ್ರವೇಶ ನೀಡಿದ್ದಾರೆ.
ಚಿತ್ರದಲ್ಲಿ ಅವರು ‘ಧರ್ಮ’ನಾಗಿ ಕಾಣಿಸಿಕೊಳ್ಳಲಿದ್ದು, ಅವರ ಪಾತ್ರದ ಫಸ್ಟ್ಲುಕ್ ರಾಜ್ಯೋತ್ಸವದಂದು ಬಿಡುಗಡೆಯಾಗಿದೆ. ರಗಡ್ ಲುಕ್ನಲ್ಲಿ ಅವರಿಲ್ಲಿ ಕಾಣಿಸಿಕೊಂಡಿದ್ದಾರೆ. ‘ಕೆ.ವಿ.ಎನ್. ಪ್ರೊಡಕ್ಷನ್ಸ್ ಮತ್ತು ಪ್ರೇಮ್ ಅವರ ‘K.D’ ಚಿತ್ರದಲ್ಲಿ ‘ಧರ್ಮ’ ಪಾತ್ರದಲ್ಲಿ, ಅನೇಕ ಅದ್ಭುತ ಪ್ರತಿಭೆಗಳೊಂದಿಗೆ ಬೆಳ್ಳಿತೆರೆಯನ್ನು ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ’ ಎಂದಿದ್ದಾರೆ ರಮೇಶ್. ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್, ನಟಿ ಶಿಲ್ಪಾ ಶೆಟ್ಟಿ, ರವಿಚಂದ್ರನ್ ಬಣ್ಣಹಚ್ಚಿದ್ದು, ಮಲಯಾಳಂನ ಖ್ಯಾತ ನಟರಿಬ್ಬರು ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆ.
‘ಚಿತ್ರದ ಶೇ 45ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಧ್ರುವ ಸರ್ಜಾ ಅವರು ಮತ್ತೆ ‘ಮಾರ್ಟಿನ್’ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದು, ಅದರ ಶೂಟಿಂಗ್ ಈ ಮಾಸಾಂತ್ಯಕ್ಕೆ ಪೂರ್ಣಗೊಳ್ಳಲಿದೆ. ತೂಕ ಇಳಿಸಿಕೊಂಡು ಜನವರಿಯಲ್ಲಿ ಧ್ರುವ ಅವರು ‘KD’ ಸೆಟ್ಗೆ ಮರಳಿದ್ದಾರೆ. ಅಲ್ಲಿಯವರೆಗೂ ಬೇರೆ ಪಾತ್ರಗಳ ಶೂಟಿಂಗ್ ನಡೆಯಲಿದೆ’ ಎಂದಿದೆ ಚಿತ್ರತಂಡ. ‘ಏಕ್ ಲವ್ ಯಾ’ ಸಿನಿಮಾ ಬಳಿಕ ನಿರ್ದೇಶಕ ‘ಜೋಗಿ’ ಪ್ರೇಮ್ ಕೈಗೆತ್ತಿಕೊಂಡಿರುವ ಹೊಸ ಪ್ರಾಜೆಕ್ಟ್ ಇದಾಗಿದ್ದು, ಇದು ಧ್ರುವ ಅವರ ಆರನೇ ಸಿನಿಮಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.