ಇನ್ಫೋಸಿಸ್ ಫೌಂಡೇಶನ್‌ನಸುಧಾಮೂರ್ತಿ ಅವರೊಂದಿಗೆ ಕಟ್ಟಡ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿರುವ ನಿರ್ಮಾಪಕ ರಮೇಶ್ ರೆಡ್ಡಿ, ಸಿನಿಮಾ ನಿರ್ಮಾಣದಲ್ಲಿ ತೊಡಗಿ ಮೂರು ವರ್ಷಗಳಾಗಿವೆ.
2017ರಲ್ಲಿ ಉಪ್ಪು ಹುಳಿ ಖಾರ ಚಿತ್ರದ ಮೂಲಕ ಆರಂಭವಾದ ಅವರ ಸಿನಿಮಾ ನಿರ್ಮಾಣದ ಪಯಣ, ಇದೀಗ ಯೋಗರಾಜ್ ಭಟ್ ಅವರ ಗಾಳಿಪಟ- 2 ವರೆಗೆ ಬಂದು ನಿಂತಿದೆ. ಮುಂದಿನ ದಿನಗಳಲ್ಲಿ ಒಳ್ಳೆಯ ವಿಷಯಸಿಕ್ಕರೆ ಸಿನಿಮಾ ಕ್ಷೇತ್ರದಲ್ಲಿಯೇ ಮುಂದುವರಿಯುವ ಮನದಾಸೆ ರಮೇಶ್ ರೆಡ್ಡಿ ಅವರದ್ದು.
ರೆಡ್ಡಿ ಅವರನ್ನುಇತ್ತೀಚೆಗೆ ನಡೆದ ಖಾಸಗಿ ಸಮಾರಂಭದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ರಮೇಶ್ ಅರವಿಂದ್, ನಟ ಶ್ರೀಮುರಳಿ ಸನ್ಮಾನಿಸಿದರು.
ರಮೇಶ್ ರೆಡ್ಡಿ ಅವರ ಸುರಾಜ್ ಪ್ರೊಡಕ್ಷನ್ಸ್ ಅಡಿಯಲ್ಲಿ ಈಗಾಗಲೇ ಹಲವು ಭಿನ್ನವಿಭಿನ್ನ ಸಿನಿಮಾಗಳು ನಿರ್ಮಾಣವಾಗಿವೆ. ‘ಉಪ್ಪು ಹುಳಿ ಖಾರ’, ‘ಪಡ್ಡೆಹುಲಿ’, ‘ನಾತಿಚರಾಮಿ’ ಸಿನಿಮಾಗಳು ಈಗಾಗಲೇ ತೆರೆಕಂಡು ಒಳ್ಳೆಯ ಹೆಸರು ಮಾಡಿವೆ. ಅದೇ ರೀತಿ ರಮೇಶ್ ಅರವಿಂದ್ ಅವರ ನಿರ್ದೇಶನದ ಮತ್ತು ನಾಯಕನಾಗಿ ನಟಿಸಿರುವ 100 ಚಿತ್ರ ಬಹುತೇಕ ಚಿತ್ರೀಕರಣ ಕೆಲಸ ಮುಗಿಸಿಕೊಂಡು, ಬಿಡುಗಡೆಗೆ ಸಿದ್ಧವಾಗಿದೆ. ಇತ್ತ ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ 2’ ಚಿತ್ರಕ್ಕೂ ರಮೇಶ್ ರೆಡ್ಡಿ ಬಂಡವಾಳ ಹೂಡಿದ್ದು, ಆ ಚಿತ್ರದ ಶೇ 60 ಶೂಟಿಂಗ್ ಮುಕ್ತಾಯವಾಗಿದೆ.
ಈ ನಿರ್ಮಾಣ ಸಂಸ್ಥೆಯ ಹಿಂದಿನ ಒಂದಷ್ಟು ಶ್ರಮವನ್ನೂ ರಮೇಶ್ ರೆಡ್ಡಿ ನೆನಪು ಮಾಡಿಕೊಂಡಿದ್ದಾರೆ. 1982ರಲ್ಲಿ ಗಾರೆ ಕೆಲಸಕ್ಕೆಂದು ಬಂದು ಇದೀಗ ಸ್ಯಾಂಡಲ್ವುಡ್ ನಿರ್ಮಾಪಕರಲ್ಲಿ ಒಬ್ಬನಾಗಿದ್ದೇನೆ. ಕಟ್ಟಡ ಗುತ್ತಿಗೆದಾರನಾಗಿ ಈ ಹಂತಕ್ಕೆ ನಾನು ಬಂದಿದ್ದೇನೆ ಎಂದರೆ ಅದಕ್ಕೆ ದೇವರೇ ಕಾರಣ. ಆ ದೇವರುಬೇರೆ ಯಾರೂ ಅಲ್ಲ ಇನ್ಫೋಸಿಸ್‌ನ ಸುಧಾಮೂರ್ತಿ ಅಮ್ಮ. ಅವರಿಲ್ಲ ಎಂದಿದ್ದರೆ ನಾವು ಈ ಹಂತಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ. ಇವರ ಜತೆಗೆ ಸಿವಿ ಕರ್ನಲ್ ಕೃಷ್ಣ, ರಾಮದಾಸ್ ಕಾಮತ್ ಮತ್ತು ಸಂಜಯ್ ಭಟ್ ಅವರನ್ನೂ ನೆನೆಯಲೇಬೇಕು. ನನ್ನ ಆರಂಭದ ದಿನಗಳಲ್ಲಿ ತುಂಬ ಸಹಾಯ ಮಾಡಿದರು ಎಂದು ಅವರೆಲ್ಲರ ಸಹಾಯವನ್ನು ನೆನೆಯುತ್ತಾರೆ ರಮೇಶ್ ರೆಡ್ಡಿ.
ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಸಿನಿಮಾಕ್ಷೇತ್ರದಲ್ಲಿಯೇ ಇರುವುದಾಗಿಯೂ ಅವರು ಹೇಳಿಕೊಳ್ಳುತ್ತಾರೆ. ಇತ್ತ ಮುಂದಿನ ವರ್ಷಕ್ಕೆ 100 ಸಿನಿಮಾ ಬಿಡುಗಡೆ ಮಾಡುವುದು ನಿರ್ಮಾಪಕರ ಯೋಜನೆ. ಗಾಳಿಪಟ 2 ಚಿತ್ರದ ಹಾಡುಗಳನ್ನು ಜಾರ್ಜಿಯಾದಲ್ಲಿ ಸೆರೆಹಿಡಿಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.