‘ಅಂಧಾದುನ್’ –ಎರಡು ವರ್ಷದ ಹಿಂದೆ ತೆರೆಕಂಡ ಬಾಲಿವುಡ್‌ನ ಸೂಪರ್ ಹಿಟ್ ಚಿತ್ರ. ಶ್ರೀರಾಮ್ ರಾಘವನ್ ನಿರ್ದೇಶಿಸಿದ್ದ ಈ ಕ್ರೈಮ್, ಥ್ರಿಲ್ಲರ್ ಚಿತ್ರದಲ್ಲಿ ಆಯುಷ್ಮಾನ್ ಖುರಾನಾ ಅವರ ನಟನೆ ಪ್ರೇಕ್ಷಕರ ಭಾವವನ್ನು ಮೀಟಿತ್ತು.
ಯುವಕನೊಬ್ಬ ಅಂಧನಂತೆ ನಟಿಸುತ್ತಿರುತ್ತಾನೆ. ಕೊನೆಗೆ ತನ್ನ ಸುತ್ತಲೂ ಘಟಿಸುವ ಅಪರಾಧ ಕೃತ್ಯಗಳಿಗೆ ಸಾಕ್ಷಿಯಾಗುತ್ತಲೇ ತಾನೂ ಆ ಷಡ್ಯಂತ್ರದ ಸುಳಿಗೆ ಸಿಲುಕುವುದೇ ಈ ಚಿತ್ರದ ತಿರುಳು. ಆಯುಷ್ಮಾನ್ ಅಂಧನಾಗಿ ನಟಿಸಿದ್ದರು. ಇದರಲ್ಲಿ ಹಿರಿಯ ನಟಿ ಟಬು ಅವರೂ ಮುಖ್ಯಪಾತ್ರಕ್ಕೆ ಬಣ್ಣ ಹಚ್ಚಿದ್ದರು.
ಈಗ ತೆಲುಗಿನಲ್ಲಿ ‘ಅಂಧಾದುನ್’ ರಿಮೇಕ್ ಆಗುತ್ತಿದೆ. ನಟ ನಿತಿನ್ ಸ್ವಂತ ಬ್ಯಾನರ್‌ನಲ್ಲಿಯೇ ಇದು ಸೆಟ್ಟೇರುತ್ತಿದೆ. ಹಿಂದಿಯಲ್ಲಿ ಆಯುಷ್ಮಾನ್ ಖುರಾನಾ ನಿರ್ವಹಿಸಿದ್ದ ಪಾತ್ರವನ್ನು ನಿತಿನ್ ಅವರೇ ನಿಭಾಯಿಸಲಿದ್ದಾರೆ. ಹಾಗಿದ್ದರೆ ಟಬು ಪಾತ್ರದಲ್ಲಿ ಯಾರು ನಟಿಸುತ್ತಾರೆ ಎಂಬ ಪ್ರಶ್ನೆ ಎದುರಾಗಿತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ.
ಇತ್ತೀಚಿನ ‘ಕ್ವೀನ್’ ವೆಬ್ ಸರಣಿ ಮೂಲಕ ಗಮನ ಸೆಳೆದಿರುವ ರಮ್ಯಾ ಕೃಷ್ಣ ಅವರೇ ಆ ಬೋಲ್ಡ್ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂಬ ಸುದ್ದಿ ಟಾಲಿವುಡ್ ಪಡಸಾಲೆಯಿಂದ ಕೇಳಿಬರುತ್ತಿದೆ. ಈಗಾಗಲೇ, ಚಿತ್ರತಂಡ ಅವರೊಟ್ಟಿಗೆ ಮಾತುಕತೆ ನಡೆಸಿದೆಯಂತೆ.
ಪ್ರಸ್ತುತ ರಮ್ಯಾ ಕೃಷ್ಣ ಅವರು ಪುರಿ ಜಗನ್ನಾಥ್ ನಿರ್ದೇಶನದ ವಿಜಯ್ ದೇವರಕೊಂಡ ನಟನೆಯ ‘ಪೈಟರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಮಯ ಹೊಂದಾಣಿಕೆ ಮಾಡಿಕೊಂಡು ‘ಅಂಧಾದುನ್’ ರಿಮೇಕ್‌ನಲ್ಲಿಯೂ ಅವರು ನಟಿಸಲಿದ್ದಾರೆ ಎಂಬುದು ಚಿತ್ರತಂಡದ ವಿಶ್ವಾಸ. ಮೆರ್ಲಪಾಕ ಗಾಂಧಿ ಅವರು ಈ ರಿಮೇಕ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
‘ಅಂಧಾದುನ್‘ ಚಿತ್ರದಲ್ಲಿನ ಮನೋಜ್ಞ ನಟನೆಗಾಗಿ ಆಯುಷ್ಮಾನ್ ಖುರಾನಾ ಅವರು ‘ಅತ್ಯುತ್ತುಮ ನಟ’ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದರು. ಈ ಚಿತ್ರಕ್ಕೆ ‘ಅತ್ಯುತ್ತಮ ಸಿನಿಮಾ’ ಪ್ರಶಸ್ತಿಯೂ ಲಭಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.