ADVERTISEMENT

ನಟ ರಾಣಾ ದಗ್ಗುಬಾಟಿ ಅವರು ನಟಿ ಸೋನಮ್‌ ಕಪೂರ್‌ ಬಳಿ ಕ್ಷಮೆಯಾಚಿಸಿದ್ದು ಏಕೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಆಗಸ್ಟ್ 2023, 8:35 IST
Last Updated 16 ಆಗಸ್ಟ್ 2023, 8:35 IST
   

ಹೈದರಾಬಾದ್: ತೆಲುಗು ನಟ ರಾಣಾ ದಗ್ಗುಬಾಟಿ ತಮ್ಮದೊಂದು ಹೇಳಿಕೆಗಾಗಿ ಬಾಲಿವುಡ್ ನಟಿ ಸೋನಮ್‌ ಕಪೂರ್‌ ಹಾಗೂ ಮಲಯಾಳಂ ನಟ ದುಲ್ಕರ್ ಸಲ್ಮಾನ್‌ ಬಳಿ ಕ್ಷಮೆಯಾಚಿಸಿದ್ದಾರೆ.

ದುಲ್ಕರ್ ಸಲ್ಮಾನ್‌ ನಟನೆಯ ‘ಕಿಂಗ್ ಆಫ್ ಕೋಥಾ’ ಚಿತ್ರದ ಪ್ರಮೋಷನ್ ಕಾರ್ಯಕ್ರಮವೊಂದದಲ್ಲಿ ಭಾಗವಹಿಸಿದ್ದ ರಾಣಾ ದಗ್ಗುಬಾಟಿ ದುಲ್ಕರ್‌ ಸಲ್ಮಾನ್‌ ಅವರ ಕೆಲಸ ವೈಖರಿಯನ್ನು ಹಾಡಿ ಹೊಗಳಿದ್ದರು. ಈ ವೇಳೆ ಪರೋಕ್ಷವಾಗಿ ಬಾಲಿವುಡ್‌ ನಟಿ ಸೋನಮ್‌ ಕಪೂರ್ ವಿರುದ್ಧ ಹೇಳಿಕೆಯೊಂದನ್ನು ನೀಡಿದ್ದರು.

‘ದುಲ್ಕರ್‌ ನಾನು ಸ್ನೇಹಿತರು. ದುಲ್ಕರ್ ಹಿಂದಿ ಸಿನಿಮಾವೊಂದನ್ನು ಮಾಡುತ್ತಿದ್ದು, ನಮ್ಮ ಮನೆಯ ಬಳಿಯೇ ಚಿತ್ರದ ಶೂಟಿಂಗ್‌ ನಡೆಯುತ್ತಿತ್ತು. ದುಲ್ಕರ್ ಭೇಟಿ ಮಾಡಲು ಶೂಟಿಂಗ್ ಸ್ಥಳಕ್ಕೆ ಹೋಗಿದ್ದೆ. ದುಲ್ಕರ್ ಮೂಲೆಯೊಂದರಲ್ಲಿ ಕುಳಿತಿದ್ದು, ಬಾಲಿವುಡ್‌ನ ದೊಡ್ಡ ನಟಿಯೊಬ್ಬರು ಶೂಟಿಂಗ್‌ ವೇಳೆ ಲಂಡನ್‌ನಲ್ಲಿರುವ ತಮ್ಮ ಗಂಡನ ಜೊತೆ ಮಾತನಾಡುತ್ತಾ, ದುಲ್ಕರ್‌ ಅವರ ಸಮಯ ಹಾಳು ಮಾಡುತ್ತಿದ್ದರು’ ಎಂದು ಹೇಳಿದ್ದರು.

ADVERTISEMENT

ಸಾಮಾಜಿಕ ಜಾಲತಾಣದಲ್ಲಿ ರಾಣಾ ಅವರ ಹೇಳಿಕೆ ಸದ್ದು ಮಾಡುತ್ತಿದ್ದು, ರಾಣಾ ಈ ಬಗ್ಗೆ ಸೃಷ್ಟೀಕರಣ ನೀಡುವುದರೊಂದಿಗೆ ಕ್ಷಮೆಯಾಚಿಸಿದ್ದಾರೆ.

‘ನನ್ನ ಹೇಳಿಕೆಯು ಸೋನಮ್‌ ಅವರ ವ್ಯಕ್ತಿತ್ವವನ್ನು ನಕಾರಾತ್ಮಕ ರೀತಿಯಲ್ಲಿ ಚಿತ್ರಿಸುವ ಸಾಧ್ಯತೆಯಿದೆ. ನನ್ನ ಈ ಹೇಳಿಕೆಯಿಂದ ತುಂಬಾ ನೊಂದಿದ್ದೇನೆ. ನಾನು ಏನು ಹೇಳಿದ್ದೇನೋ ಅದು ಅಸತ್ಯ ಮತ್ತು ತಪ್ಪಾಗಿ ಅರ್ಥೈಸಲಾಗಿದೆ. ಎಲ್ಲ ಸ್ನೇಹಿತರಂತೆ ನಾವು ಕೂಡ ತಮಾಷೆ ಮಾಡಿಕೊಳ್ಳುತ್ತೇವೆ. ಈ ಸಂದರ್ಭದಲ್ಲಿ ನನ್ನ ಸ್ನೇಹಿತ ದುಲ್ಕರ್ ಸಲ್ಮಾನ್‌ ಮತ್ತು ಸೋನಮ್‌ ಕಪೂರ್‌ ಅವರಲ್ಲಿ ಕ್ಷಮೆಯಾಚಿಸುತ್ತೇನೆ. ನನ್ನ ಈ ಸ್ಪಷ್ಟೀಕರಣವು ಊಹಾಪೋಹ ಮತ್ತು ತಪ್ಪು ತಿಳುವಳಿಕೆಯನ್ನು ಕೊನೆಗೊಳಿಸುತ್ತದೆ ಎಂದು ನಾನು ಭಾವಿಸುತ್ತೇನೆ’ ಎಂದು ರಾಣಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.