ರಣಬೀರ್ ತುಂಟ ಮಗ. ಆದರೆ ತುಂಬಾನೆ ಒಳ್ಳೆಯ ಅಪ್ಪ ಅಂತ ನೀತು ಕಪೂರ್ ಆಗಾಗ ಎಲ್ಲ ಸಂದರ್ಶನಗಳಲ್ಲಿಯೂ ಹೇಳುತ್ತಿರುತ್ತಾರೆ. ಮಗಳು ರಾಹಾ, ಅಮ್ಮನೊಟ್ಟಿಗೆ ಇರುವಂತೆಯೇ ಅಪ್ಪನೊಂದಿಗೂ ಅತಿ ಹೆಚ್ಚು ಸಮಯ ಕಳೆಯುತ್ತಾಳೆ. ಸದಾ ಅಪ್ಪನತ್ತ ಕೈ ಚಾಚುವ ಅವಳು ಮಲಗುವಾಗ ಮಾತ್ರ ಅಮ್ಮನ ಮಡಿಲನ್ನೇ ಬಯಸುತ್ತಾಳಂತೆ!
ರಾಹಾ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮಗಳು, ನೋಡಲು ತನ್ನ ಹಿರಿಯಜ್ಜ ರಾಜಕಪೂರ್ ಅವರನ್ನೇ ಹೋಲುತ್ತಾಳೆ ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದರು. ಈ ಬಗ್ಗೆ ರಣಬೀರ್ ಅತಿ ಪ್ರೀತಿಯಿಂದ ಸಂದರ್ಶನದಲ್ಲಿ ನೆನೆಯುತ್ತಾರೆ. ಮಗು ನೋಡಲು ಬಂದವರೆಲ್ಲ, ಓಹ್.. ಮೂಗು ಆಲಿಯಾಳಂತಿವೆ. ಕಣ್ಣು ಅಜ್ಜನಂತಿವೆ. ಮುಖ ಮುತ್ತಜ್ಜನಂತೆ ಕಾಣುತ್ತವೆ. ನೀಲಿ ಕಂಗಳು ಕಪೂರ್ ಖಾಂದಾನ್ ನಿಂದ ಬಂದಿವೆ ಎಂದೆಲ್ಲ ಹೆಸರಿಡುತ್ತಾರಂತೆ.
ಒಂದೂವರೆ ವರ್ಷದ ಮಗಳೊಂದಿಗೆ ಸಮಯ ಕಳೆಯುವುದು ಅತಿ ಪ್ರೀತಿಯ ಕೆಲಸವಾಗಿದೆ. ಆರೇಳು ತಿಂಗಳ ಮಗುವಾಗಿದ್ದಾಗ, ರಾಹಾಳನ್ನು ಕೂರಿಸಿ, ಮಮ್ಮಾ ಎಲ್ಲಿ... ಪಪ್ಪಾ ಎಲ್ಲಿ.. ದಾದಿ ಎಲ್ಲಿ ಎಂದು ಕೇಳುವುದೇ ನನಗಿಷ್ಟದ ಕೆಲಸವಾಗಿತ್ತು ಎಂದು ಆಲಿಯಾ ನೆನಪಿಸಿಕೊಂಡರೆ, ಅವಳನ್ನು ಬಗಲಲ್ಲಿ ಎತ್ತಿಕೊಂಡಾಗ ಸಿಗುವ ಸುಖವೇ ಬೇರೆ ಎಂದು ಹೇಳಿದ್ದರು.
ಸದ್ಯ ಕಪೂರ್ ಖಾಂದಾನ್ ಕಣ್ಮಣಿಯಾಗಿ ಬೆಳೆಯುತ್ತಿರುವ ರಾಹಾ, ಆಟವಾಡಲು ಕರೀನಾ ಕಪೂರ್ ಮನೆಗೆ ಹೋಗುತ್ತಾಳಂತೆ. ಜೆ ಮತ್ತು ತೈಮೂರ್ ಜೊತೆ ಆಟವಾಡುವುದು ಅವಳಿಗಿಷ್ಟ ಎಂದು ಆಲಿಯಾ ಸಂದರ್ಶನವೊಂದರಲ್ಲಿ ಹೇಳಿದ್ದರು.
ಕರಣ್‌ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋನಲ್ಲಿ ಬಂದಿದ್ದ ಆಲಿಯಾ ಮತ್ತು ಕರೀನಾ ಜೇ ಮತ್ತು ರಾಹಾಳ ಆಟೋಟಗಳನ್ನು ನೆನಪಿಸಿಕೊಂಡಿದ್ದರು.
ಸದಾ ಅಪ್ಪನ ತೋಳಿನಲ್ಲಿಯೇ ಕಾಣಿಸಿಕೊಳ್ಳುವ ರಾಹಾ, ಆಗಾಗ ರಣಬೀರ್ ಕೆನ್ನೆಗೆ ಮುತ್ತಿಡುತ್ತಲೇ ಇರುತ್ತಾಳೆ. ಆಗಾಗ ಅಪ್ಪನ ಕೆನ್ನೆಗೆ ಉಮ್ಮಾ ಎನ್ನುವ ರಾಹಾ ಅಪ್ಪ ಅಮ್ಮನ ಕಣ್ಮಣಿಯಾಗಿ ಬೆಳೆಯುತ್ತಿದ್ದಾಳೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.