ನವದೆಹಲಿ: ಬಾಲಿವುಡ್ ಚಿತ್ರ ನಿರ್ಮಾಪಕ ಲವ್ ರಂಜನ್ ಅವರ ಮದುವೆಗಾಗಿ ಆಗ್ರಾದಲ್ಲಿದ್ದ ಅರ್ಜುನ್ ಕಪೂರ್ ಮತ್ತು ರಣಬೀರ್ ಕಪೂರ್ ಒಟ್ಟಿಗೆ ತಾಜ್ ಮಹಲ್ ಅನ್ನು ವೀಕ್ಷಿಸಿದ್ದಾರೆ. ಹಾಗಾಗಿಯೇ ಅರ್ಜುನ್ ಕಪೂರ್, ಆಲಿಯಾ ಭಟ್ ಅವರನ್ನು ಕೀಟಲೆ ಮಾಡಲು ಮುಂದಾಗಿದ್ದಾರೆ.
ತನ್ನ ಹಿಂಬದಿಯಲ್ಲಿ ತಾಜ್ ಮಹಲ್ ಕಾಣುತ್ತಿರುವ ಚಿತ್ರವನ್ನು ಹಂಚಿಕೊಂಡಿರುವ ಅವರು, 'ಕಲಾವಿದ ರಣಬೀರ್ ಕಪೂರ್, ತಾಜ್ + ನನ್ನಿಂದ ಸ್ಫೂರ್ತಿ ಪಡೆದಾಗ...' ಎಂದು ಬರೆದುಕೊಂಡಿದ್ದಾರೆ. ಇದೇ ಪೋಸ್ಟ್‌ಗೆ ಕಾಮೆಂಟ್ ವಿಭಾಗದಲ್ಲಿ ರಾಕುಲ್ ಪ್ರೀತ್ ಸಿಂಗ್, 'ಹ್ಹ ಹ್ಹ ಕೊನೆಗೂ ನೀವಿಬ್ಬರೂ ತಾಜ್ ಅನ್ನು ನೋಡಿದ್ದೀರಿ' ಎಂದಿದ್ದಾರೆ. ಇದಕ್ಕೆ ರಿಪ್ಲೈ ಮಾಡಿರುವ ಅರ್ಜುನ್ ಕಪೂರ್, 'ಹೌದು ಅವರು ಆಲಿಯಾ ಜೊತೆ ಹೋಗುವ ಬದಲು ನನ್ನೊಂದಿಗೆ ಮೊದಲು ನೋಡಿದರು' ಎಂದು ಹೇಳಿದ್ದಾರೆ.
ಇದರೊಂದಿಗೆ ರಣಬೀರ್ ಅವರ ಗೆಳತಿ ನಟಿ ಆಲಿಯಾ ಭಟ್ ಅವರಿಗೂ ಟ್ಯಾಗ್ ಮಾಡಿದ್ದಾರೆ. ಆದರೆ, ಆಲಿಯಾ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಆಲಿಯಾ ಸದ್ಯ ಕೋಲ್ಕತ್ತಾದಲ್ಲಿದ್ದು, 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ 2018ರಿಂದ ಡೇಟಿಂಗ್ ಮಾಡುತ್ತಿದ್ದು, ಅದೇ ವರ್ಷ ಸೋನಂ ಕಪೂರ್ ಅವರ ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. 2020ರಲ್ಲಿ ನಡೆದ ಸಂದರ್ಶನವೊಂದರಲ್ಲಿ ರಣಬೀರ್ ಕಪೂರ್ ಅವರು ಆಲಿಯಾ ಅವರೊಂದಿಗೆ ರಿಲೇಷನ್‌ಶಿಪ್‌ನಲ್ಲಿರುವುದಾಗಿ ಒಪ್ಪಿಕೊಂಡಿದ್ದರು. ಕೋವಿಡ್ ಇಲ್ಲದಿದ್ದರೆ ಇಷ್ಟೊತ್ತಿಗಾಗಲೇ ವಿವಾಹವಾಗುತ್ತಿದ್ದುದಾಗಿಯೂ ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.