ಮುಂಬೈ: ಹಿಂದುತ್ವ ಸಿದ್ಧಾಂತವಾದಿ ವಿ.ಡಿ ಸಾವರ್ಕರ್ ಜೀವನಾಧಾರಿತ ಚಿತ್ರ ‘ಸ್ವಾತಂತ್ರ್ಯ ವೀರ ಸಾವರ್ಕರ್' ಮಾರ್ಚ್ 22ರಂದು ಹಿಂದಿ ಹಾಗೂ ಮರಾಠಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಬಾಲಿವುಡ್ ನಟ ರಣದೀಪ್ ಹೂಡಾ ಮಂಗಳವಾರ ಹೇಳಿದ್ದಾರೆ.
ಸಿನಿಮಾ ಬಿಡುಗಡೆ ಬಗ್ಗೆ ಹೂಡಾ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಮುಖ್ಯವಾಗಿ ಇಬ್ಬರು ವೀರರಿದ್ದಾರೆ. ಹುತಾತ್ಮರ ದಿನದ ಈ ಸಂದರ್ಭದಲ್ಲಿ ಒಬ್ಬರನ್ನು ಮಾತ್ರ ಸ್ಮರಿಸಲಾಗುತ್ತಿದ್ದು, ಇನ್ನೊಬ್ಬರನ್ನು ಇತಿಹಾಸದಿಂದ ಅಳಿಸಿಹಾಕಲಾಗಿದೆ. ಆದರೆ ಇತಿಹಾಸವನ್ನು ಪುನಃ ಬರೆಯಲಾಗುವುದು. ‘ಸ್ವಾತಂತ್ರ್ಯ ವೀರ ಸಾವರ್ಕರ್' ಚಿತ್ರ 2024ರ ಮಾರ್ಚ್ 22 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ಎಂದು ಹೂಡಾ ಪೋಸ್ಟ್ ಮಾಡಿದ್ದಾರೆ.
ನಟ ರಣದೀಪ್ ಹೂಡಾ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದೆ. ಉತ್ಕರ್ಷ್ ನೈತಾನಿ ಕಥೆ ಬರೆದಿದ್ದಾರೆ. ಸಾವರ್ಕರ್ ಪಾತ್ರದಲ್ಲಿ ಹೂಡಾ ನಟಿಸಿದ್ದಾರೆ. ಚಿತ್ರದಲ್ಲಿ ಅಂಕಿತಾ ಲೋಖಂಡೆ ಮತ್ತು ಅಮಿತ್ ಸಿಯಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರವನ್ನು ಝೀ ಸ್ಟುಡಿಯೋಸ್, ಆನಂದ್ ಪಂಡಿತ್, ರಣದೀಪ್ ಹೂಡಾ, ಸಂದೀಪ್ ಸಿಂಗ್ ಮತ್ತು ಯೋಗೇಶ್ ರಾಹರ್ ನಿರ್ಮಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.