ಮುಂಬೈ: ಬಾಲಿವುಡ್ ನಟಿ ರವೀನಾ ಟಂಡನ್ ಮತ್ತು ಅವರ ಕಾರು ಚಾಲಕನ ಮೇಲೆ ಜನರ ಗುಂಪೊಂದು ಹಲ್ಲೆ ನಡೆಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಶನಿವಾರ ರಾತ್ರಿ ಬಾಂದ್ರಾದ ಕಾರ್ಟರ್ ರಸ್ತೆಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯಾವುದೇ ಎಫ್‌ಐಆರ್ ದಾಖಲಾಗಿಲ್ಲವಾದರೂ, ಖಾರ್ ಪೊಲೀಸ್ ಠಾಣೆಯಲ್ಲಿ ಸ್ಟೇಷನ್ ಡೈರಿಯಲ್ಲಿ ನಮೂದು ಮಾಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ರವೀನಾ ಅವರ ಚಾಲಕ ವೇಗವಾಗಿ ಕಾರು ಚಲಾಯಿಸಿ ಮೂವರು ಮಹಿಳೆಯರಿಗೆ ಕಾರನ್ನು ಗುದ್ದಿ ಅಪಘಾತವೆಸಗಿದ್ದಾನೆಂದು ಆರೋಪಿಸಿ, ನೆರೆದಿದ್ದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ವಾಗ್ವಾದ ನಡೆದಿದೆ. ಅದನ್ನು ತಪ್ಪಿಸಲು ರವೀನಾ ಕಾರಿನಿಂದ ಕೆಳಕ್ಕೆ ಇಳಿದಾಗ ಅವರನ್ನು ತಳ್ಳಿ, ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ರವೀನಾ ‘ದಯವಿಟ್ಟು ನನ್ನನ್ನು ಹೊಡೆಯಬೇಡಿ’ ಎಂದಿದ್ದಾರೆ. ಇದೇ ವೇಳೆ ವ್ಯಕ್ತಿಯೊಬ್ಬರು, ರವೀನಾ ಅವರ ಚಾಲಕ ನನ್ನ ತಾಯಿಗೆ ಕಾರನ್ನು ಡಿಕ್ಕಿ ಹೊಡೆಸಿದ್ದಾನೆ. ಇದನ್ನು ಕೇಳಿದ್ದಕ್ಕೆ ನಟಿ ಕಾರಿನಿಂದ ಕೆಳಕ್ಕೆ ಇಳಿದು ತಾಯಿಯ ಮೇಲೆ ಹಲ್ಲೆ ನಡೆಸಿದ್ದಾರೆ. ನಟಿ ಮದ್ಯಪಾನ ಮಾಡಿದ್ದರು ಎಂದು ಆರೋಪಿಸಿದ್ದಾರೆ.
ಘಟನೆ ಬಗ್ಗೆ ರವೀನಾ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.