‘ಪ್ರೇಮಲೋಕ’ದ ಸೃಷ್ಟಿಕರ್ತ, ಚಂದನವನದ ‘ಕನಸುಗಾರ’ ಕ್ರೇಜಿಸ್ಟಾರ್ ರವಿಚಂದ್ರ ವಿ. ಅವರಿಗೆ ಇಂದು 61ನೇ ಜನ್ಮದಿನದ ಸಂಭ್ರಮ. ಇದೇ ಸಂದರ್ಭದಲ್ಲಿ ತಮ್ಮ ನಿರ್ದೇಶನದ ಹೊಸ ಸಿನಿಮಾ ‘ರವಿ ಬೋಪಣ್ಣ’ದ ಅಪ್‌ಡೇಟ್ ಒಂದನ್ನು ರವಿಚಂದ್ರ ಅವರು ನೀಡಿದ್ದಾರೆ.
‘ರವಿ ಬೋಪಣ್ಣ’–ಕರ್ಮ ಈಸ್ ಕ್ರೇಜಿ ಎನ್ನುವ ಟ್ಯಾಗ್‌ಲೈನ್‌ನೊಂದಿಗೆ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಶೀಘ್ರದಲ್ಲೇ ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಚಿತ್ರದ ಕುರಿತು ಮಾಹಿತಿ ನೀಡಿದ ರವಿಚಂದ್ರ, ‘ಇದೊಂದು ಹೊಸ ಪ್ರಯೋಗ. ರವಿ ಬೋಪಣ್ಣ ಸಿನಿಮಾದಲ್ಲಿ ಸಾಲು ಸಾಲು ಹಾಡುಗಳಿವೆ. ಇದನ್ನು ಮೊದಲೇ ಹೇಳುತ್ತಿದ್ದೇನೆ. ಜನರು ಮನಸ್ಸುಕೊಟ್ಟು ಸಿನಿಮಾ ನೋಡಬೇಕು. ಪ್ರಯೋಗಗಳು ಗೆದ್ದರಷ್ಟೇ ಕನ್ನಡ ಚಿತ್ರರಂಗ ಬೆಳೆಯಲಿದೆ. ಇಂಥ ಪ್ರಯತ್ನವನ್ನು ರವಿ ಬೋಪಣ್ಣ ಸಿನಿಮಾದಲ್ಲಿ ಮಾಡಿದ್ದೇನೆ. ಇದರಲ್ಲಿ ತತ್ವವೂ ಇದೆ, ರವಿಚಂದ್ರನೂ ಇದ್ದಾನೆ. ಚಿತ್ರದಲ್ಲಿನ ನನ್ನ ಪಾತ್ರಕ್ಕೆ ಎರಡು ಆಯಾಮಗಳಿವೆ. ಖಂಡಿತವಾಗಿಯೂ ಸಾಕಷ್ಟು ಚರ್ಚೆಗೆ ರವಿ ಬೋಪಣ್ಣ ಸಾಕ್ಷಿಯಾಗಲಿದೆ’ ಎಂದರು.
‘40 ವರ್ಷದಿಂದ ಚಿತ್ರರಂಗದಲ್ಲಿದ್ದೇನೆ. ಪ್ರತಿದಿನವೂ ನನಗೆ ಜನ್ಮದಿನವೇ. ಜೀವನದ ಪ್ರತಿ ಕ್ಷಣವನ್ನೂ ನಾನು ಆನಂದಿಸಿದ್ದೇನೆ. ಜನರು ಯಾವುದನ್ನು ಫ್ಲಾಪ್ ಸಿನಿಮಾ ಎಂದರೋ ಅದು ನನ್ನ ಹೆಗಲ ಮೇಲೆ ಇನ್ನೂ ಕುಳಿತಿದೆ. ಯಶಸ್ಸನ್ನು ತಲೆ ಮೇಲೆ ಹೊತ್ತು ತಿರುಗಿಲ್ಲ. ಆದರೆ ಸೋತಿರುವ ಸಿನಿಮಾಗಳು ಹೆಗಲ ಮೇಲಿವೆ. ಇವು ನನಗೆ ಅನುಭವದ ದಾರಿಯಾಗಿವೆ. ಈ ಅನುಭವಗಳು ಪಾಠ ಕಲಿಸಿವೆ. ಕನ್ನಡ ಚಿತ್ರರಂಗದಲ್ಲಿ ಏಳುಬೀಳುಗಳನ್ನು ಅನುಭವಿಸಿದ ಕಲಾವಿದ ಯಾರು ಎಂದರೆ ನಾನೇ ಉತ್ತಮ ಉದಾಹರಣೆ’ ಎಂದರು.
ಕ್ರೇಜಿಸ್ಟಾರ್ ಜನ್ಮದಿನಕ್ಕೆ ಚಿತ್ರರಂಗದ ಹಲವು ಕಲಾವಿದರು ಸಾಮಾಜಿಕ ಮಾಧ್ಯಮಗಳ ಮೂಲಕ ಶುಭಕೋರಿದ್ದಾರೆ. ವರ್ಷದ ಹಿಂದೆತಮ್ಮ 1n1ly ಯೂಟ್ಯೂಬ್ ಚಾನೆಲ್ ಮುಖಾಂತರ ರವಿಚಂದ್ರ ತಮ್ಮ ಹೊಸ ಸಿನಿಮಾಗಳ ಕನಸು ಬಿಚ್ಚಿಟ್ಟಿದ್ದರು. ‘ಗಾಡ್’, ‘6T’ ಹಾಗೂ ‘ಬ್ಯಾಡ್‌ಬಾಯ್ಸ್’ ಹೀಗೆ ಮೂರು ಚಿತ್ರಗಳ ಝಲಕ್ ನೀಡಿದ್ದರು. ಇದರ ಜೊತೆಗೆ ಎನ್.ಎಸ್. ರಾಜಕುಮಾರ್ ಅವರ ಓಂಕಾರ್ ಫಿಲಂಸ್‌ನ ಹೊಸ ಸಿನಿಮಾ ‘ರಮ್ಯ ರಾಮಸ್ವಾಮಿ’ಯಲ್ಲೂ ರವಿಚಂದ್ರ ಬಣ್ಣಹಚ್ಚುತ್ತಿದ್ದಾರೆ. ಜನಾರ್ದನ ಮಹರ್ಷಿ ಅವರು ಈ ಚಿತ್ರಕ್ಕೆ ಕಥೆ ಬರೆದಿದ್ದು, ಚಿ.ಗುರುದತ್ ನಿರ್ದೇಶನದಲ್ಲಿ ಈ ಚಿತ್ರ ತೆರೆ ಮೇಲೆ ಬರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.