ADVERTISEMENT

ಆ...ದೃಶ್ಯ ಸಿನಿಮಾ: ಕನಸುಗಾರ ರವಿಚಂದ್ರನ್ ಮ್ಯೂಸಿಕಲ್ ಹೆಜ್ಜೆ

ಕೆ.ಎಚ್.ಓಬಳೇಶ್
Published 8 ನವೆಂಬರ್ 2019, 3:55 IST
Last Updated 8 ನವೆಂಬರ್ 2019, 3:55 IST
‘ಆ...ದೃಶ್ಯ’ ಚಿತ್ರದಲ್ಲಿ ರವಿಚಂದ್ರನ್
‘ಆ...ದೃಶ್ಯ’ ಚಿತ್ರದಲ್ಲಿ ರವಿಚಂದ್ರನ್   

ಶಿವಗಣೇಶ್‌ ನಿರ್ದೇಶನದ ‘ಆ...ದೃಶ್ಯ’ ಚಿತ್ರ ಇದೇ ಶುಕ್ರವಾರ ತೆರೆಕಾಣುತ್ತಿದೆ. ಇದು ತಮಿಳಿನ ‘ಧ್ರುವಂಗಳ್‌ 16’ ಚಿತ್ರದ ರಿಮೇಕ್‌. ಸಸ್ಪೆನ್ಸ್‌ ಶೈಲಿಯ ಈ ಮಾದರಿ ಸಿನಿಮಾ ರವಿಚಂದ್ರನ್‌ ಅವರಿಗೂ ಹೊಸದು. ಈ ಕನಸುಗಾರ ಈಗ ಸಂಗೀತಮಯ ಚಿತ್ರದ ಧ್ಯಾನದಲ್ಲಿದ್ದಾರೆ.

‘ಎಲ್ಲರೂ ಬೀಜ ಬಿತ್ತುವುದು ಮಣ್ಣಿನಲ್ಲಿ. ನನಗೆ ಹೃದಯದಲ್ಲಿ ಬಿತ್ತಿ ಅಭ್ಯಾಸ. ನಂಗೆ ಮಣ್ಣಿನ ಋಣ ಇಲ್ಲವೇ ಇಲ್ಲ. ಹಾಗಾಗಿಯೇ, ಮಣ್ಣನ್ನು ಖರೀದಿ ಮಾಡಲಿಲ್ಲ’

ನಟ ರವಿಚಂದ್ರನ್‌ ಖಚಿತ ಧ್ವನಿಯಲ್ಲಿ ಹೇಳಿದರು. ಗಾಂಧಿನಗರದ ಕನಸುಗಾರನ ಈ ಮಾತು ಅನಿರೀಕ್ಷಿತವೆಂಬಂತೆ ಇತ್ತು. ‘ಹೃದಯದಲ್ಲಿ ಬಿತ್ತಿದ ಬೀಜ ಮೊಳೆತು, ಮರವಾಗಿ ಯಾವಾಗ ಹಣ್ಣು ಕೊಡುತ್ತದೆ ಎಂಬುದು ಗೊತ್ತಿಲ್ಲ. ಆದರೆ, ಮೂವತ್ತು ವರ್ಷಗಳ ಹಿಂದೆ ಬಿತ್ತಿದ್ದ ಬೀಜ ಈಗ ಮೊಳೆಕೆಯೊಡೆದಿದೆ. ಅದಕ್ಕೆ ನೀರೆರೆದು ಪೋಷಿಸಲು ನಾನೀಗ ಸಜ್ಜಾಗುತ್ತಿದ್ದೇನೆ’ ಎಂದು ಮಾತು ವಿಸ್ತರಿಸಿದರು.

ADVERTISEMENT

ಮ್ಯೂಸಿಕಲ್‌ ಸಿನಿಮಾ ಮಾಡಬೇಕೆಂಬುದು ಅವರ ಮೂರು ದಶಕಗಳ ಕನಸು. ‘ಪ್ರೇಮಲೋಕ’ ಸಿನಿಮಾ ಮಾಡುವಾಗಲೇ ಅದು ಚಿಗುರೊಡೆಯಿತಂತೆ. ‘ನಾನು ಯಾವುದೇ ವಿಷಯವನ್ನು ತಲೆಯಲ್ಲಿ ಫೀಡ್‌ ಮಾಡಿಕೊಂಡಿರುವುದಿಲ್ಲ. ಹೃದಯದಲ್ಲಿ ಫೀಡ್‌ ಮಾಡಿಕೊಳ್ಳುತ್ತೇನೆ. ಅಂದೊಂದು ದಿನ ನನಗೆ ಕನಸು ಬಿತ್ತು. ನಿದ್ದೆಯಿಂದ ಎದ್ದ ಬಳಿಕ ಒಂದು ಕಥೆ ಬರೆದೆ. ಫ್ರೇಮ್‌ ಟು ಫ್ರೇಮ್‌ ಕಥೆ ಹೊಸೆದೆ ಎಂದರೆ ನೀವು ಅಚ್ಚರಿಪಡಬೇಕು. ಅಂದು ನನ್ನ ಇಡೀ ಕೈಯಲ್ಲಿ ಬೆವರು ಸುರಿಯುತ್ತಿತ್ತು’ ಎಂದು ನೆನಪಿಸಿಕೊಳ್ಳತೊಡಗಿದರು.

‘ಆ ಕಥೆಯನ್ನೇ ಮ್ಯೂಸಿಕಲ್‌ ಸಿನಿಮಾ ಮಾಡಬೇಕೆಂಬುದು ನನ್ನಾಸೆ. ಅದಕ್ಕಾಗಿಯೇ ಸ್ಟುಡಿಯೊ ಕಟ್ಟಿದೆ. ಮ್ಯೂಸಿಕ್‌ ಮಾಡಲು ಪ್ರಯತ್ನ ಮಾಡಿದ್ದು ಉಂಟು. ಅದಕ್ಕಾಗಿ ನನ್ನ ಸಂಗೀತ ಬಳಗದ ಎಲ್ಲರೂ ಸೇರಿ ಚರ್ಚಿಸಿದೆವು. ರೆಕಾರ್ಡ್‌ ಮಾಡುತ್ತಲೇ ಇದ್ದೆವು; ಅದಕ್ಕಾಗಿ ಸಾಕಷ್ಟು ಹಣ ಖರ್ಚಾಗುತ್ತಿತ್ತು. ಅದೊಂದು ಸ್ವರೂಪ ಪಡೆಯಲೇ ಇಲ್ಲ. ಹಾಗಾಗಿ, ಅದರ ಬಗ್ಗೆ ನಾನು ಯಾರಿಗೂ ಹೇಳಲಿಲ್ಲ. ಈಗ ಅದಕ್ಕೆ ಕಾಲ ಕೂಡಿಬಂದಿದೆ’ ಎಂದು ವಿವರಿಸಿದರು.

‘ಕಳೆದ ಅಕ್ಟೋಬರ್‌ 18ರಂದು ನನ್ನ ಮಗಳ ಹುಟ್ಟುಹಬ್ಬ ಇತ್ತು. ಅಂದು ನನ್ನ ಕನಸು ಸಿನಿಮಾ ಸ್ವರೂಪ ಪಡೆಯಿತು.ಚಿತ್ರ ಮಾಡಲು ನನಗೊಂದು ಫಾರ್ಮೆಟ್‌ ಸಿಕ್ಕಿದೆ. ಸಿನಿಮಾಕ್ಕಾಗಿ ಒಂದೇ ಗಂಟೆಯಲ್ಲಿ ಆರು ಹಾಡುಗಳನ್ನು ಬರೆದುಬಿಟ್ಟೆ. ಚಿತ್ರದಲ್ಲಿ ಯಾರು ಮಾತನಾಡಿದರೂ ಅದು ಹಾಡಿನ ಸ್ವರೂಪದಲ್ಲಿಯೇ ಇರಬೇಕು. ಅಂದರೆ ಡೈಲಾಗ್‌ನಿಂದ ಹಿಡಿದು ಎಲ್ಲವನ್ನೂ ಮ್ಯೂಸಿಕಲ್‌ ಆಗಿಯೇ ತೋರಿಸುತ್ತೇನೆ. ಸಂಭಾಷಣೆಯೂ ಹಾಡಾಗಿಯೇ ಇರುತ್ತದೆ’ ಎಂದು ಕನಸಿನ ಬುತ್ತಿಯನ್ನು ಹಂಚಿಕೊಂಡರು.

‘ರವಿ ಬೋಪಣ್ಣ’ ಮತ್ತು ‘ರಾಜೇಂದ್ರ ಪೊನ್ನಪ್ಪ’ ಸಿನಿಮಾ ಮುಗಿದ ಬಳಿಕವಷ್ಟೇ ಈ ಮ್ಯೂಸಿಕಲ್‌ ಚಿತ್ರ ಕೈಗೆತ್ತಿಕೊಳ್ಳುವ ಇರಾದೆ ಅವರದು. ಜನವರಿಗೆ ಈ ಸಿನಿಮಾದ ಕೆಲಸ ಶುರುವಾಗಲಿದೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳ ಸೇರಿದಂತೆ ಎಲ್ಲಾ ಭಾಷೆಯಲ್ಲೂ ಈ ಸಿನಿಮಾವನ್ನು ತೆರೆಗೆ ತರಲು ಅವರು ನಿರ್ಧರಿಸಿದ್ದಾರೆ.

‘ಪ್ರೇಮಲೋಕದ ಸಕ್ಸಸ್‌ಗೂ ನಾನು ಹಿಗ್ಗಿಲ್ಲ. ಅದು ಮುಗಿದು ಹೋಗಿದೆ. ಈಗ ನಾನು ಅಂದುಕೊಂಡಿದ್ದು ಆಗುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಯಾವುದಾದರೂ ಸಿನಿಮಾದಿಂದ ಒಂದು ಥಾಟ್‌ ಹೊಳೆದರೆ ಅದಕ್ಕೆ ಬೆಲೆ ಕೊಡುವವನು ನಾನು. ‘ಏಕಾಂಗಿ’ ಚಿತ್ರ ನನ್ನ ಸ್ವಂತದ್ದು. ಇಂಗ್ಲಿಷ್‌ನಲ್ಲೂ ಇಂತಹ ಸಿನಿಮಾ ನೋಡಲು ಸಾಧ್ಯವಿಲ್ಲ. ಪುಸ್ತಕದಲ್ಲಿ ಓದಿದ್ದೇನೆ ಎಂದು ಹೇಳಲೂ ಆಗುವುದಿಲ್ಲ. ‘ಅಪೂರ್ವ’ ಕೂಡ ಹೊಸ ಫಾರ್ಮೇಟ್‌ ಸಿನಿಮಾ. ಮ್ಯೂಸಿಕಲ್‌ ಸಿನಿಮಾ ಕೂಡ ಅಂಥದ್ದೇ. ಅಂತಹ ಫಾರ್ಮೆಟ್‌ ಸಿಗುವುದು ಅಪರೂಪ’ ಎಂದ ಅವರ ಮೊಗದಲ್ಲಿ ವಿಶ್ವಾಸವಿತ್ತು.

ಹೊಸ ಇಮೇಜ್‌ ಸಿನಿಮಾ

‘ದೃಶ್ಯ’ ರವಿಚಂದ್ರನ್‌ಗೆ ಹೊಸ ಇಮೇಜ್‌ ತಂದು ಕೊಟ್ಟ ಚಿತ್ರ. ಶಿವಗಣೇಶ್‌ ನಿರ್ದೇಶನದ ‘ಆ...ದೃಶ್ಯ’ ಚಿತ್ರದ ಮೇಲೂ ಅವರಿಗೆ ಅಷ್ಟೇ ಭರವಸೆ ಇದೆ. ‘ಆ...ದೃಶ್ಯ ಸಿನಿಮಾದ ಪಾತ್ರವೂ ನನಗೆ ಹೊಸ ಇಮೇಜ್‌ ತಂದುಕೊಡಲಿದೆ. ಶಿವಗಣೇಶ್‌ರಿಂದ ಮತ್ತೆ ನಾನು ಹೊಸ ಗೆಟಪ್‌ ಹಾಕುವ ಪರಿಪಾಠ ಶುರುವಾಯಿತು. ಮೀಸೆ ತಿರುಗಿಸಿ ಒಂದು ಗೆಟಪ್‌; ಮೀಸೆ ಇಲ್ಲದೆ ಒಂದು ಗೆಟಪ್‌ ಹಾಕಿದೆ. ಪ್ರೇಕ್ಷಕರು ವರ್ಷಪೂರ್ತಿ ನನ್ನ ಹಲವಾರು ಮುಖಗಳನ್ನು ನೋಡಲು ಸಾಧ್ಯವಾಯಿತು’ ಎಂದು ನಕ್ಕರು.

ಮಕ್ಕಳ ಜವಾಬ್ದಾರಿಗೆ ಸಜ್ಜು

ರವಿಚಂದ್ರನ್‌ ಮತ್ತು ಅವರ ಮಕ್ಕಳಾದ ಮನೋರಂಜನ್‌, ವಿಕ್ರಮ್ ಒಂದೇ ಪ್ರೇಮ್‌ನಲ್ಲಿ ಕಾಣಿಸಿಕೊಳ್ಳಲು ವೇದಿಕೆಯೂ ಸಿದ್ಧವಾಗಿದೆ. ‘ಈಗ ಮಗಳ ಜವಾಬ್ದಾರಿ ಮುಗಿಯಿತು. ಇನ್ನು ಮುಂದೆ ಪುತ್ರ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ. ‘ರವಿ ಬೋಪಣ್ಣ’ ಮತ್ತು ‘ರಾಜೇಂದ್ರ ಪೊನ್ನಪ್ಪ’ ಚಿತ್ರಗಳು ದೊಡ್ಡ ಪ್ರಾಜೆಕ್ಟ್‌. ಈ ಸಿನಿಮಾಗಳೂ ನನ್ನ ಇಮೇಜ್ ಚೇಂಜ್‌ ಮಾಡಲಿವೆ. ನನಗೆ ಎರಡು ಕನಸುಗಳಿವೆ. ಈ ಎರಡೂ ಸಿನಿಮಾಗಳು ಮುಗಿದ ಬಳಿಕ ನನ್ನ ಕನಸಿನಲ್ಲಿ ಪುತ್ರರು ಇರುತ್ತಾರೆ’ ಎಂದರು ರವಿಚಂದ್ರನ್.

‘ಅವರಿಗೆ ಈಗ ತರಬೇತಿಯ ಅವಧಿ. ಅತಿಯಾದ ಪ್ರೀತಿ ಇರುವೆಡೆ ಭಯವೂ ಜಾಸ್ತಿ. ಅದು ಅವರಲ್ಲಿ ಇರುವುದನ್ನು ನಾನು ಕಂಡಿರುವೆ. ದೊಡ್ಡವನು(ಮನೋರಂಜನ್) ನಾನೇಕೆ ದುಡಿಯಬಾರದು; ನಿನ್ನ ಕಷ್ಟದಲ್ಲಿ ನಾನು ಭಾಗಿಯಾಗುತ್ತೇನೆ ಎಂದು ಕೇಳಿದ. ಅನುಭವಿಸಿಕೊಂಡು ಬಾ ಎಂದು ಹೇಳಿದ್ದೇನೆ’ ಎಂದರು.

‘ಒಳ್ಳೆಯದು ಯಾವಾಗ ಆಗುತ್ತದೆ ಎಂದು ಹೇಳಲು ಆಗುವುದಿಲ್ಲ. ನಾವೇ ಇನ್ನೂ ಪರಿಪೂರ್ಣವಾಗಿಲ್ಲ. ಜನರು ನಮ್ಮನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯಬೇಕು. ಅವರಿಗೆ ಅಪ್ಪನ ಮೂಲಕವೇ ಸಿನಿಮಾ ನೋಡಿ ಅಭ್ಯಾಸ. ಈಗ ನನ್ನ ಹೆಗಲ ಮೇಲಿನಿಂದ ಕೆಳಗಿಳಿಸಿ ನಡೆಯಲು ಬಿಟ್ಟಿದ್ದೇನೆ. ಈಗ ಅವರಿಗೆ ಬದುಕು ಅರ್ಥವಾಗುತ್ತದೆ’ ಎಂದು ಹೇಳಿದರು.

ದಿಢೀರ್‌ ಯಶಸ್ಸು ಯಾರಿಗೂ ಒಳ್ಳೆಯದಲ್ಲ ಎನ್ನುವುದು ರವಿಚಂದ್ರನ್‌ ಅವರ ಸಲಹೆ. ‘ಅವಸರವಾಗಿ ಮನುಷ್ಯನಿಗೆ ಯಾವುದೇ ಸಕ್ಸಸ್‌ ಸಿಗಬಾರದು. ಆರಂಭದಲ್ಲಿಯೇ ಯಶಸ್ಸು ಸಿಕ್ಕಿದರೆ ಅದನ್ನು ಉಳಿಸಿಕೊಂಡು ಹೋಗುವುದೇ ದೊಡ್ಡ ಜವಾಬ್ದಾರಿ. ನಾನು ಕೂಡ ಆರಂಭದಲ್ಲಿ ಸಕ್ಸಸ್‌ ಕೊಡಲಿಲ್ಲ. ನನ್ನ ಯಶಸ್ಸು ಕೂಡ ನಿಧಾನವಾಗಿಯೇ ಆರಂಭವಾಗಿದ್ದು. ಪ್ರೇಮಲೋಕದ ಬಳಿಕವೇ ಗೆಲುವು ಕಂಡಿದ್ದು’ ಎಂದು ನೆನಪಿಗೆ ಜಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.