ADVERTISEMENT

ರುಸ್ತುಂ ರಿಸಲ್ಟ್‌ಗೆ ರವಿವರ್ಮ ಕಾತರ

ಕೆ.ಎಚ್.ಓಬಳೇಶ್
Published 2 ಮೇ 2019, 19:30 IST
Last Updated 2 ಮೇ 2019, 19:30 IST
ಶಿವರಾಜ್‌ಕುಮಾರ್
ಶಿವರಾಜ್‌ಕುಮಾರ್   

‘ಎಸ್ಸೆಸ್ಸೆಲ್ಸಿ, ಪಿಯುಸಿ ಉತ್ತೀರ್ಣದ ಬಳಿಕ ಡಿಗ್ರಿ ಕಾಲೇಜಿಗೆ ಹೋಗಬೇಕು. ನಾನೀಗ ಪದವಿ ಅಭ್ಯಸಿಸಿ ಪರೀಕ್ಷೆ ಬರೆದಿರುವೆ. ಪಾಸು ಮಾಡುವುದು ಪ್ರೇಕ್ಷಕರಿಗೆ ಬಿಟ್ಟಿದ್ದು’ ಎಂದು ವಿಧೇಯ ವಿದ್ಯಾರ್ಥಿಯಂತೆ ಹೇಳಿ ನಕ್ಕರು ಸಾಹಸ ನಿರ್ದೇಶಕ ಕೆ. ರವಿವರ್ಮ.

‘ರುಸ್ತುಂ’ ಚಿತ್ರದ ಮೂಲಕ ತನ್ನೊಳಗಿನ ನಿರ್ದೇಶಕನನ್ನು ಪ್ರೇಕ್ಷಕರ ಮುಂದೆ ಪರೀಕ್ಷೆಗೆ ಕೂರಿಸಿ ನಿರಾಳರಾಗಿದ್ದಾರೆ. ‘ನಾನು ಫೈಟರ್‌ ಆಗಿದ್ದೆ. ಒಂದು ದಿನ ಸ್ಟಂಟ್‌ ಮಾಸ್ಟರ್‌ ಆಗಬೇಕು ಅನಿಸಿತು. ಆ ಆಸೆಯೂ ಈಡೇರಿತು. ನಿರ್ದೇಶಕನಾಗುವ ಬಯಕೆಯೂ ಈಡೇರಿದೆ’ ಎನ್ನುವ ಅವರು, ‘ಒಳ್ಳೆಯ ಚಿತ್ರಗಳನ್ನು ಪ್ರೇಕ್ಷಕರಿಗೆ ನೀಡಬೇಕು’ ಎಂಬ ದೃಢ ನಿರ್ಧಾರ ಮಾಡಿದ್ದಾರೆ.

ಕನ್ನಡದಲ್ಲಿ ಆರಂಭಗೊಂಡ ಅವರ ಸಾಹಸ ಯಾತ್ರೆ ಬಾಲಿವುಡ್‌ ಅಂಗಳ ಪ್ರವೇಶಿಸಿ ಹಲವು ವರ್ಷಗಳೇ ಸಂದಿವೆ. ಸ್ಯಾಂಡಲ್‌ವುಡ್‌, ಟಾಲಿವುಡ್‌, ಕಾಲಿವುಡ್‌ನಲ್ಲಿ 300ಕ್ಕೂ ಹೆಚ್ಚು ಚಿತ್ರಗಳಿಗೆ ಸಾಹಸ ನಿರ್ದೇಶಿಸಿರುವ ಖುಷಿ ಅವರಲ್ಲಿದೆ.

ADVERTISEMENT

ಶಿವರಾಜ್‌ಕುಮಾರ್‌ ಮತ್ತು ಪುನೀತ್‌ ರಾಜ್‌ಕುಮಾರ್‌ ಅವರನ್ನು ಇಟ್ಟುಕೊಂಡು ಸಿನಿಮಾ ನಿರ್ದೇಶಿಸಬೇಕು ಎಂಬುದು ಅವರ ದೊಡ್ಡ ಕನಸು. ‘ಶಿವಣ್ಣ ಮತ್ತು ಅಪ್ಪು ಅವರನ್ನು ಒಟ್ಟಾಗಿ ತೆರೆಯ ಮೇಲೆ ತೋರಿಸುವ ಆಸೆಯಿತ್ತು. ಸ್ಕ್ರಿಪ್ಟ್‌ ಕೂಡ ಸಿದ್ಧವಾಗಿತ್ತು. ಚಿತ್ರದ ಬಜೆಟ್‌ ದೊಡ್ಡದಾಯಿತು. ಕನ್ನಡದಲ್ಲಿ ದೊಡ್ಡ ಮೊತ್ತ ಹೂಡಿ ಅದನ್ನು ವಾಪಸ್ ಪಡೆಯುವುದು ಹೇಗೆಂಬ ಪ್ರಶ್ನೆ ಕಾಡಿತು’ ಎಂದರು.

ಬಾಲಿವುಡ್‌ ನಟ ಅಮೀರ್‌ಖಾನ್‌ಗೂ ಈ ಸ್ಕ್ರಿಪ್ಟ್‌ ಕಳುಹಿಸಿದ್ದರಂತೆ. ಆ ವೇಳೆ ಅವರು ‘ಥಗ್ಸ್‌ ಆಫ್‌ ಹಿಂದೂಸ್ತಾನ್‌’ನಲ್ಲಿ ತೊಡಗಿಸಿಕೊಂಡಿದ್ದರು. ‘ಅಮೀರ್‌ ಖಾನ್‌ ಅವರಿಗೂ ಕಥೆಯ ಸಾರ ಕಳುಹಿಸಿದ್ದೇನೆ. ಈಗ ಅಮೀರ್‌ ಐತಿಹಾಸಿಕ ಸಿನಿಮಾದಲ್ಲಿ ತೊಡಗಿಸಿದ್ದಾರೆ. ಸ್ಕ್ರಿಪ್ಟ್‌ ದೊಡ್ಡ ಮೊತ್ತ ಬೇಡುತ್ತದೆ. ನಾನು ಬಜೆಟ್‌ ವಿಚಾರದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾರೆ. ಕನ್ನಡ ಅಥವಾ ಹಿಂದಿಯಲ್ಲಿ ಈ ಚಿತ್ರ ಮಾಡುವ ಮುಕ್ತ ಅವಕಾಶವಿದೆ’ ಎಂದು ಸ್ಪಷ್ಟವಾಗಿ ಹೇಳುತ್ತಾರೆ.

* ‘ರುಸ್ತುಂ’ ಸಿನಿಮಾದ ಕಥೆ ಹುಟ್ಟಿದ್ದು ಹೇಗೆ?

ಶಿವಣ್ಣ ಮತ್ತು ಅಪ್ಪು ಅವರನ್ನು ಪರದೆ ಮೇಲೆ ತೋರಿಸುವ ನನ್ನಾಸೆಗೆ ತಾತ್ಕಾಲಿಕವಾಗಿ ಬ್ರೇಕ್‌ ಬಿದ್ದಿತು. ಆಗ ಒಂದು ಕಮರ್ಷಿಯಲ್‌ ಸಿನಿಮಾ ಮಾಡುವ ಆಲೋಚನೆ ಹೊಳೆಯಿತು. ಈ ಕುರಿತು ಸ್ನೇಹಿತರೊಟ್ಟಿಗೆ ಚರ್ಚಿಸುವಾಗ ಹುಟ್ಟಿದ್ದೇ ರುಸ್ತುಂ. ಈ ಚಿತ್ರದ ಪಾತ್ರಕ್ಕೆ ಪ್ರಬುದ್ಧತೆ ಇರುವ ಹಿರಿಯ ನಟನ ಅಗತ್ಯವಿತ್ತು. ಆಗ ನನ್ನ ಕಣ್ಮುಂದೆ ಮೂಡಿದ ಚಿತ್ರ ಶಿವಣ್ಣ ಅವರದು.

* ಈ ಸಿನಿಮಾದ ಕಥೆಯ ಎಳೆ ಎಂತಹದ್ದು?

ಕಳ್ಳ– ಪೊಲೀಸ್‌ ಕಥೆ ಇದು. ಚಿತ್ರದಲ್ಲಿ ಶಿವಣ್ಣ ಖಡಕ್‌ ಪೊಲೀಸ್‌ ಅಧಿಕಾರಿ. ‍ಪೊಲೀಸ್‌ ಇದ್ದಾಗ ಕ್ರೈಮ್‌ ನಡೆಯುವುದು ಸಾಮಾನ್ಯ. ಪ್ರತಿನಿತ್ಯ ನಮ್ಮ ಕಣ್ಣಿಗೆ ಕಾಣುವ ದೃಶ್ಯಗಳನ್ನು ಆಧರಿಸಿಯೇ ಕಥೆ ಹೊಸೆಯಲಾಗಿದೆ. ಶಿವಣ್ಣ ಅವರದು ಸುಂದರ ಕುಟುಂಬ. ಒಮ್ಮೆ ಠಾಣೆಯಲ್ಲೊಂದು ಘಟನೆ ನಡೆಯುತ್ತದೆ. ಆ ಕರಿನೆರಳು ಅವರ ಕುಟುಂಬದ ಮೇಲೆ ಬೀಳುತ್ತದೆ. ಈ ಸಂಘರ್ಷದಿಂದ ಅವರು ಹೇಗೆ ಹೊರಬರುತ್ತಾರೆ ಎನ್ನುವುದೇ ಚಿತ್ರದ ಹೂರಣ. ಶಿವಣ್ಣ, ವಿವೇಕ್‌ ಒಬೆರಾಯ್‌ ಅವರೊಟ್ಟಿಗೆ ಕೆಲಸ ಮಾಡಿದ್ದು ಖುಷಿ ಕೊಟ್ಟಿತು.

* ನಟ ವಿವೇಕ್‌ ಒಬೆರಾಯ್‌ ಅವರ ಪಾತ್ರದ ಬಗ್ಗೆ ಹೇಳಿ

ಸಿನಿಮಾಕ್ಕೊಂದು ಟರ್ನಿಂಗ್‌ ನೀಡುವ ವಿಶೇಷ ಪಾತ್ರ ಅವರದು. ಅವರಿಗೂ ಮೊದಲು ಈ ಪಾತ್ರ ಮಾಡುವಂತೆ ಅನಿಲ್‌ ಕಪೂರ್‌ ಅವರನ್ನು ಸಂಪರ್ಕಿಸಿದ್ದೆವು. ಅವರಿಗೆ ಸಮಯದ ಹೊಂದಾಣಿಕೆಯಾಗಲಿಲ್ಲ. ಕೊನೆಗೆ, ತೆರಳಿದ್ದು ವಿವೇಕ್‌ ಒಬೆರಾಯ್ ಬಳಿಗೆ. ಅವರು ಕರ್ನಾಟಕದ ಅಳಿಯ. ಚಿತ್ರಕ್ಕೊಂದು ಭಾವನಾತ್ಮಕ ಬಂಧ ಬೇಕಿತ್ತು. ಕಥೆ ಕೇಳಿದ ತಕ್ಷಣವೇ ಅವರು ಒಪ್ಪಿಕೊಂಡರು. ಕನ್ನಡಕ್ಕೆ ಒಳ್ಳೆಯ ಚಿತ್ರದೊಂದಿಗೆ ಎಂಟ್ರಿ ಕೊಡುತ್ತಿದ್ದೇನೆ ಎಂದು ಖುಷಿಪಟ್ಟರು. ಜೊತೆಗೆ, ಶಿವಣ್ಣ ಅವರೊಟ್ಟಿಗೆ ನಟಿಸುತ್ತಿರುವುದಕ್ಕೆ ಸಂತಸ ಹಂಚಿಕೊಂಡರು.‌

* ನಿಮ್ಮ ವೃತ್ತಿ ಬದುಕಿನ ಬಗ್ಗೆ ಹೇಳಿ

ಇಷ್ಟು ವರ್ಷ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವುದೇ ನನ್ನ ಪುಣ್ಯ. ಪ್ರತಿಯೊಂದು ಚಿತ್ರಕ್ಕೂ ಸಾಹಸ ನಿರ್ದೇಶಿಸುವಾಗ ಜವಾಬ್ದಾರಿ ಹೆಚ್ಚುತ್ತಿದೆ. ಇಲ್ಲಿಯವರೆಗೂ ನಾನು ಗಳಿಸಿರುವುದನ್ನು ಉಳಿಸಿಕೊಂಡು ಹೋಗುವುದೇ ನನಗೆ ಸವಾಲು. ಅದನ್ನು ಉಳಿಸಿಕೊಂಡು ಹೋದರೆ ಸಾಕು ಎನಿಸುತ್ತದೆ.

* ನಿಮಗೆ ನಿರ್ದೇಶನದ ಆಸೆ ಚಿಗುರೊಡೆದಿದ್ದು ಯಾವಾಗ?

ಚಿತ್ರಗಳಿಗೆ ಸಾಹಸ ನಿರ್ದೇಶಿಸುವಾಗ ಸಿನಿಮಾ ನಿರ್ದೇಶಿಸುವ ಆಸೆ ಜೀವ ತಳೆಯಿತು. ನಿರ್ದೇಶಕ ಮತ್ತು ಸಾಹಸ ನಿರ್ದೇಶಕನ ಕೆಲಸ ನಡುವೆ ಸಾಕಷ್ಟು ವ್ಯತ್ಯಾಸವಿದೆ. ನಿರ್ದೇಶಕನ ಜವಾಬ್ದಾರಿ ದೊಡ್ಡದು. ಸ್ಟಂಟ್‌ ಮಾಡುತ್ತಲೇ ನಿರ್ದೇಶನದ ಪಟ್ಟುಗಳನ್ನು ಕಲಿತುಕೊಂಡೆ.

* ನಿಮಗೆ ಸಾಹಸ ನಿರ್ದೇಶಿಸಲು ಸವಾಲಾಗಿ ಕಾಡಿದ ಸಿನಿಮಾ ಯಾವುದು?

‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರದ ಸಾಹಸ ನಿರ್ದೇಶನ ನಿಜಕ್ಕೂ ಸವಾಲಾಗಿತ್ತು. ಇದು ನಾನು ಸಾಹಸ ನಿರ್ದೇಶಿಸಿದ ಮೊದಲ ಐತಿಹಾಸಿಕ ಚಿತ್ರ. ಹೊಸತನ ಕಟ್ಟಿಕೊಡುವ ಜವಾಬ್ದಾರಿ ನನ್ನ ಮೇಲಿತ್ತು. ಎರಡು ಯುದ್ಧಗಳ ಸನ್ನಿವೇಶವನ್ನು ಪ್ರೇಕ್ಷಕರಿಗೆ ಉಣ ಬಡಿಸುವುದು ಚಾಲೆಂಜ್‌ ಆಗಿತ್ತು. ನಿರ್ದೇಶಕ ನಾಗಣ್ಣ, ನಟ ದರ್ಶನ್ ಮತ್ತು ಚಿತ್ರದ ನಿರ್ಮಾಪಕರು, ಸಾಹಸ ಕಲಾವಿದರ ಸಂಘದ ಸದಸ್ಯರು ನೀಡಿದ ನೆರವಿನಿಂದ ಎಲ್ಲವೂ ಸುಲಭವಾಯಿತು. ಅವರ ಸಹಕಾರವನ್ನು ಎಂದಿಗೂ ಮರೆಯಲಾರೆ.

* ನಿಮ್ಮ ಮುಂದಿನ ಯೋಜನೆಗಳ ಬಗ್ಗೆ ಹೇಳಿ

ಕನ್ನಡದಲ್ಲಿ ಯಶಸ್ವಿ ಕಂಡ ‘ಬೆಲ್‌ ಬಾಟಂ’ ಚಿತ್ರವನ್ನು ಹಿಂದಿ ಮತ್ತು ತೆಲುಗಿನಲ್ಲಿ ನಿರ್ದೇಶಿಸಲು ತಯಾರಿ ನಡೆದಿದೆ. ಮತ್ತೆರಡು ಸ್ಕ್ರಿಪ್ಟ್‌ಗಳ ತಯಾರಿಯಲ್ಲಿ ತೊಡಗಿರುವೆ. ನಟ ಪುನೀತ್‌ ರಾಜ್‌ಕುಮಾರ್‌ ಅವರಿಗಾಗಿಯೇ ಹೊಸ ಕಥೆ ಸಿದ್ಧಪಡಿಸುತ್ತಿದ್ದೇನೆ. ಇನ್ನೂ ಸ್ಕ್ರಿಪ್ಟ್‌ ಪೂರ್ಣಗೊಂಡಿಲ್ಲ. ಅಪ್ಪು ಸರ್‌ ಹಸಿರು ನಿಶಾನೆ ತೋರಿದರೆ ಚಿತ್ರ ನಿರ್ದೇಶಿಸಲು ಉತ್ಸುಕನಾಗಿದ್ದೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.