ADVERTISEMENT

ಆರ್‌ಡಿಎಕ್ಸ್‌ಗೆ ಮಾಸ್ತಿಯ ಡೈಲಾಗ್‌ ಸ್ಪರ್ಶ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 19:30 IST
Last Updated 13 ಮಾರ್ಚ್ 2020, 19:30 IST
ಮಾಸ್ತಿ
ಮಾಸ್ತಿ   

‘ಸತ್ಯಜ್ಯೋತಿ’ ಕಾಲಿವುಡ್‌ನ ಸಿನಿಮಾ ನಿರ್ಮಾಣ ಸಂಸ್ಥೆ. 1986ರಲ್ಲಿ ಈ ಸಂಸ್ಥೆಯು ಕನ್ನಡದಲ್ಲಿ ‘ಸತ್ಯಜ್ಯೋತಿ’ ಹೆಸರಿನ ಚಿತ್ರವನ್ನೂ ನಿರ್ಮಿಸಿತ್ತು. ಕೆ. ರಂಗರಾಜ್‌ ನಿರ್ದೇಶಿಸಿದ್ದ ಇದರಲ್ಲಿ ನಟ ವಿಷ್ಣುವರ್ಧನ್‌ ಅವರೊಟ್ಟಿಗೆ ಊರ್ವಶಿ, ಸುಮಲತಾ ಅಭಿನಯಿಸಿದ್ದರು.

ಮೂರು ದಶಕದ ಬಳಿಕ ಈ ಸಂಸ್ಥೆಯು ‘ಆರ್‌ಡಿಎಕ್ಸ್‌’ ಚಿತ್ರದ ಮೂಲಕ ಮತ್ತೆ ಕನ್ನಡ ಚಿತ್ರೋದ್ಯಮವನ್ನು ಪ್ರವೇಶಿಸಿದೆ. ಶಿವರಾಜ್‌ಕುಮಾರ್‌ ಈ ಸಿನಿಮಾದ ನಾಯಕ. ಈಗಾಗಲೇ, ಇದರ ಮುಹೂರ್ತ ನೆರವೇರಿದ್ದು, ಪ್ರೀಪ್ರೊಡಕ್ಷನ್‌ ಕೆಲಸಗಳು ಶುರುವಾಗಿವೆ. ಇದನ್ನು ನಿರ್ದೇಶಿಸುತ್ತಿರುವುದು ತಮಿಳಿನ ನಿರ್ದೇಶಕ ರವಿ ಅರಸು. ಕನ್ನಡದ ಖ್ಯಾತ ಸಂಭಾಷಣೆಕಾರ ಮಾಸ್ತಿ ಅವರು ‘ಆರ್‌ಡಿಎಕ್ಸ್‌’ಗೆ ಸಂಭಾಷಣೆ ಬರೆಯುವ ಮೂಲಕ ಈ ಚಿತ್ರದ ಭಾಗವಾಗಿದ್ದಾರೆ.

ಮಾಸ್ತಿ ಕನ್ನಡ ಚಿತ್ರರಂಗದ ಜವಾರಿ ಸೊಗಡಿನ ಸಂಭಾಷಣೆಕಾರ. ಸಿನಿಮಾದ ಸನ್ನಿವೇಶಕ್ಕೆ ತಕ್ಕಂತೆ ಡೈಲಾಗ್ ಬರೆಯುವ ಕಲೆ ಅವರಿಗೆ ಸಿದ್ಧಿಸಿದೆ.‌ ‘ಟಗರು’ ಚಿತ್ರಕ್ಕೂ ಡೈಲಾಗ್‌ ಬರೆದಿದ್ದು ಅವರೇ. ಇದರಲ್ಲಿನ ಟಗರು ಶಿವ ಮತ್ತು ‘ಡಾಲಿ’ ಹೇಳುವ ಸಂಭಾಷಣೆಗಳು ಪ್ರೇಕ್ಷಕರ ಮನಸ್ಸಿಗೆ ನಾಟಿದ್ದು ಎಲ್ಲರಿಗೂ ಗೊತ್ತು.

ADVERTISEMENT

‘ತಮಿಳಿನ ಸೂಪರ್‌ ಹಿಟ್‌ ಚಿತ್ರ ‘ಈಟಿ’ ನಿರ್ದೇಶಿಸಿರುವ ರವಿ ಅರಸು ಸಂಭಾಷಣೆ ಬರೆಯುವಂತೆ ಕೋರಿದರು. ತಮಿಳಿನಲ್ಲಿ ಅವರು ಆರ್‌ಡಿಎಕ್ಸ್‌ ಚಿತ್ರದ ಸಂಭಾಷಣೆ ಬರೆದಿದ್ದಾರೆ. ಆದರೆ, ಇಲ್ಲಿನ ನೇಟಿವಿಟಿಗೆ ತಕ್ಕಂತೆ ಸಂಭಾಷಣೆ ಬರೆದಾಗಲಷ್ಟೇ ಸಿನಿಮಾಕ್ಕೊಂದು ತಾಜಾತನ ಸಿಗುತ್ತದೆ. ಇದನ್ನು ಅವರಿಗೆ ಮನವರಿಕೆ ಮಾಡಿಕೊಟ್ಟೆ. ಹಾಗಾಗಿ, ಹೊಸದಾಗಿ ಸಂಭಾಷಣೆ ಬರೆಯುವಂತೆ ಕೋರಿದ್ದಾರೆ. ಆ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ’ ಎಂದು ಮಾಸ್ತಿ ‘ಪ್ರಜಾಪ್ಲಸ್‌’ಗೆ ವಿವರಿಸಿದರು.

‘ಡೈಲಾಗ್‌ಗಳಲ್ಲಿ ಜವಾರಿತನ ಇರಬೇಕು. ಫನ್‌ ಮತ್ತು ಪಂಚ್‌ ಇರಬೇಕು. ಅಂತಹ ಡೈಲಾಗ್‌ಗಳಿಗೆ ಬಹುಬೇಗ ಜನರನ್ನು ಸೆಳೆಯುವ ಶಕ್ತಿ ಇರುತ್ತದೆ’ ಎನ್ನುತ್ತಾರೆ.

‘ಆರ್‌ಡಿಎಕ್ಸ್‌’ ಶಿವರಾಜ್‌ಕುಮಾರ್‌ ನಟನೆಯ 123ನೇ ಚಿತ್ರ. ಇದರಲ್ಲಿ ಅವರದು ಖಡಕ್‌ ಪೊಲೀಸ್ ಅಧಿಕಾರಿಯ ಪಾತ್ರ. ಪ್ರಿಯಾ ಆನಂದ್ ಇದರ ನಾಯಕಿ. ಸಿನಿಮಾದ ದ್ವಿತೀಯಾರ್ಧದಲ್ಲಿ ಟ್ವಿಸ್ಟ್‌ವೊಂದು ಇದೆಯಂತೆ. ಏಪ್ರಿಲ್ 6ರಿಂದ ಶೂಟಿಂಗ್‌ ಆರಂಭವಾಗುವ ನಿರೀಕ್ಷೆಯಿದೆ. ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿ, ಹಿಮಾಚಲಪ್ರದೇಶ, ಮಹಾರಾಷ್ಟ್ರ, ಭೋಪಾಲ್‌ನಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಸಿದ್ಧತೆ ನಡೆಸಿದೆ.ಚರಣ್‌ರಾಜ್ ಸಂಗೀತ ಸಂಯೋಜಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.