ADVERTISEMENT

ಬಿಡುಗಡೆಗೆ ಸಜ್ಜಾದ ‘ತಲಾಕ್ ತಲಾಕ್ ತಲಾಕ್...’

​ಪ್ರಜಾವಾಣಿ ವಾರ್ತೆ
Published 15 ಜನವರಿ 2021, 7:25 IST
Last Updated 15 ಜನವರಿ 2021, 7:25 IST
ಆರ್‌ಜೆ ನೇತ್ರಾ
ಆರ್‌ಜೆ ನೇತ್ರಾ   

ರೇಡಿಯೊ ಜಾಕಿ ನೇತ್ರಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಮತ್ತು ಹಿರಿಯ ನಿರ್ದೇಶಕ ವೈದ್ಯನಾಥ ನಿರ್ದೇಶಿಸಿರುವ ‘ತಲಾಕ್ ತಲಾಕ್ ತಲಾಕ್’ ಬಿಡುಗಡೆಗೆ ಸಿದ್ಧಗೊಂಡಿದೆ. ಈ ಚಿತ್ರ ಈಗಾಗಲೇ ಹಲವು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಗೌರವ ಸಂಪಾದಿಸಿಕೊಂಡಿದೆ.

ಈ ಚಿತ್ರವು ಈಗಾಗಲೇ ಯು.ಕೆ, ಆಸ್ಟ್ರೇಲಿಯಾ, ಚೆನ್ನೈ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿದೆ. ಮುಂದಿನ ತಿಂಗಳು ರಾಜ್ಯದಲ್ಲಿ ಬಿಡುಗಡೆ ಮಾಡುವ ತಯಾರಿಯಲ್ಲಿದೆ ಚಿತ್ರತಂಡ.

ವೈದ್ಯನಾಥ ಅವರು ಈ ಚಿತ್ರವನ್ನು ನಿರ್ದೇಶಿಸುವ ಜತೆಗೆ ಬಂಡವಾಳವನ್ನೂ ಹೂಡಿ ಮೊದಲ ಬಾರಿಗೆ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. ಇವರ ಪತ್ನಿ ಎಸ್.ಎಸ್. ಸುಭಾಷಿಣಿ ಕೂಡ ಈ ಚಿತ್ರಕ್ಕೆ ಜಂಟಿ ನಿರ್ಮಾಪಕಿಯಾಗಿದ್ದಾರೆ. ಅಲ್ಲದೇ ಈ ದಂಪತಿಯಅಮೆರಿಕದಲ್ಲಿ ನೆಲಸಿರುವ ಇಬ್ಬರು ಅವಳಿ ಮಕ್ಕಳು ಮೊದಲ ಬಾರಿಗೆ ಈ ಚಿತ್ರದಲ್ಲಿ ನಟಿಸಿದ್ದು, ಇಡೀ ಕುಟುಂಬ ಈ ಚಿತ್ರದಲ್ಲಿ ತೊಡಗಿಸಿಕೊಂಡಿದೆ.

ADVERTISEMENT

ದೇಶದಲ್ಲಿ ತ್ರಿವಳಿ ತಲಾಕ್‌ ಬಗ್ಗೆ ಜಾರಿಗೆ ಬಂದಿರುವ ನೂತನ ಕಾಯ್ದೆ ಆಧರಿಸಿ, ನೂರ್ ಜಹೀರ್ ಅವರು ಬರೆದ ಪುಸ್ತಕವನ್ನು
ಅಬ್ದುಲ್ ರೆಹಮಾನ್ ಪಾಶಾ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಪುಸ್ತಕ ಆಧರಿಸಿ ವೈದ್ಯನಾಥ ಅವರು ಚಿತ್ರಕಥೆಯನ್ನು ಹೆಣೆದಿದ್ದಾರೆ.

ನಾಲ್ಕು ದಶಕಗಳಿಗೂ ಹೆಚ್ಚು ಅವಧಿಯಿಂದ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ವೈದ್ಯನಾಥ ಅವರು, 50ಕ್ಕೂ ಹೆಚ್ಚು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ದುಡಿದಿದ್ದಾರೆ. 2000ರಲ್ಲಿ ‘ದಂಡನಾಯಕ’ ಚಿತ್ರದಿಂದ ಸ್ವತಂತ್ರ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದು, ಹಲವು ಸಾಕ್ಷ್ಯ ಚಿತ್ರಗಳನ್ನು ಸಹ ನಿರ್ದೇಶಿಸಿದ್ದಾರೆ.

‘ಸಾಮಾಜಿಕ ಕಳಕಳಿಯ ಸಂದೇಶವಿರುವ ಕಥಾವಸ್ತುವನ್ನು ಸಿನಿಮಾ ಮಾಡುವ ಆಸೆ ಚಿಗುರಿದಾಗ, ತ್ರಿವಳಿ ತಲಾಕ್‌ ವಿಷಯವನ್ನು ಕೈಗೆತ್ತಿಕೊಂಡೆವು. ತ್ರಿವಳಿ ತಲಾಕ್‌ ಹೇಳಿದಾಗ ಮುಸ್ಲಿಂ ಮಹಿಳೆ ಅನುಭವಿಸುವ ಯಾತನೆಯನ್ನು ಈ ಚಿತ್ರದಲ್ಲಿ ಪ್ರೇಕ್ಷಕನ ಮನ ಮಿಡಿಯುವಂತೆ ಕಟ್ಟಿಕೊಟ್ಟಿದ್ದೇವೆ.ಮುಸ್ಲಿಂ ಸಮುದಾಯದ ಕುರಿತು ಚಿತ್ರ ಮಾಡುವಾಗ ಬಹಳ ಎಚ್ಚರ ವಹಿಸಿ, ಆ ಸಮುದಾಯದ ವ್ಯಕ್ತಿಗಳ ಜೊತೆಯೂ ಚರ್ಚಿಸಿ ಕೆಲವು ಸೂಕ್ಷ್ಮ ವಿಚಾರಗಳನ್ನು ತೆರೆಯ ಮೇಲೆ ತಂದಿದ್ದೇವೆ’ ಎನ್ನುತ್ತಾರೆ ವೈದ್ಯನಾಥ.

ಹಿರಿಯ ನಟ ಶ್ರೀನಿವಾಸಮೂರ್ತಿ ಮೌಲ್ವಿಯ ಪಾತ್ರದಲ್ಲಿ ನಟಿಸಿದ್ದಾರೆ. ಮೇಕಪ್ ರಾಮಕೃಷ್ಣ ಅವರಿಂದ ಶ್ರೀನಿವಾಸಮೂರ್ತಿ ಮೇಕಪ್ ಮಾಡಿಸಿಕೊಂಡು ಚಿತ್ರೀಕರಣ ತಾಣಕ್ಕೆ ಬಂದು ನಿಂತಾಗ ನಿರ್ದೇಶಕರೇ ಬೆರಗಾಗಿಬಿಟ್ಟರಂತೆ. ಆ ಕ್ಷಣವನ್ನು ಶ್ರೀನಿವಾಸಮೂರ್ತಿ ಮೆಲುಕುಹಾಕಿದರು.

ಆರ್‌ಜೆ ನೇತ್ರಾ ಅವರಿಗೆ ಈ ಚಿತ್ರದಲ್ಲಿ ನಿಭಾಯಿಸಿರುವ ಪಾತ್ರ ವಿಶೇಷ ಹಾಗೂ ವಿಭಿನ್ನವಾಗಿದೆಯಂತೆ. ಮುಸ್ಲಿಂ ಮಹಿಳೆ ತಲಾಕ್ ಹೇಳಿಸಿಕೊಂಡ ತಕ್ಷಣ ಅನುಭವಿಸುವ ನೋವುಗಳನ್ನು ಇಲ್ಲಿ ಚಿತ್ರಿಸಲಾಗಿದೆ. ‘ನಾನಂತೂ ಈ ಚಿತ್ರವನ್ನು ನನ್ನ ಸ್ಮೃತಿ ಪಟಲದಲ್ಲಿ ಇಟ್ಟುಕೊಂಡಿರುತ್ತೇನೆ. ಈ ಚಿತ್ರಕ್ಕೆ ಸಹೃದಯರ ಪ್ರೋತ್ಸಾಹ ಅಗತ್ಯ’ ಎನ್ನುವ ಕೋರಿಕೆ ಇಟ್ಟರು ನೇತ್ರಾ.

ತಾರಾಗಣದಲ್ಲಿ ಸುಚೇತನ ಸ್ವರೂಪ್ ವೈಧ್ಯನಾಥ, ಸುನೇತ್ರ ನಾಗರಾಜ, ಶಾಮಂತ್ ವೈಧ್ಯ, ಶ್ರೀನಿವಾಸಮೂರ್ತಿ, ರವಿ ಭಟ್, ಶಿವಮೊಗ್ಗ ವೈದ್ಯನಾಥ, ಕೆ.ವಿ. ಮಂಜಯ್ಯ, ಪ್ರವೀಣ್, ಹರೀಶ್ ಕುಟ್ಟಿ, ವಿನಾಯಕ, ಅರುಣ್ ಕುಮಾರ್, ವೀಣಾ ಸುಂದರ್, ವಿಜಯಲಕ್ಷ್ಮಿ, ತೇಜಸ್ವಿನಿ, ವಿದ್ಯಾ ಶ್ರೀನಿವಾಸ್, ಪದ್ಮಾ ಜೋಯಿಸ್, ಲಕ್ಷ್ಮಿ, ಸೌಜನ್ಯ ಶೆಟ್ಟಿ, ಪಲ್ಲವಿ ಇದ್ದಾರೆ.

ಅಶೋಕ್ ಕಶ್ಯಪ್ ಅವರ ಛಾಯಾಗ್ರಹಣ, ಸುರೇಶ್ ಅರಸ್ ಅವರ ಸಂಕಲನ, ಪ್ರವೀಣ್ ಗೋಡ್ಕಿಂಡಿ ಸಂಗೀತ, ಮೇಕಪ್ ರಾಮಕೃಷ್ಣ ಅವರ ಮೇಕಪ್, ಮಧು ಬೆಳಕವಡಿ ಅವರ ಸಂಭಾಷಣೆ ಈ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.