ಚಂದನವನದ ’ರಿಯಲ್ ಸ್ಟಾರ್’ ಉಪೇಂದ್ರ ಅವರಿಗೆ ಇಂದು (ಸೆ.18) ಹುಟ್ಟುಹಬ್ಬದ ಸಂಭ್ರಮ. ನಟನಿಗೆ ಸಿನಿಮಾರಂಗದ ಗಣ್ಯರು ಸೇರಿದಂತೆ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ.
ಇಂದುಉಪೇಂದ್ರ 54ನೇ ವರ್ಷದ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಂಡರು. ಕುಟುಂಬದ ಸದಸ್ಯರು, ಪ್ರಜಾಕೀಯ ಪಕ್ಷದ ಕೆಲ ಕಾರ್ಯಕರ್ತರು, ಆಪ್ತರು, ಗೆಳೆಯರ ನಡುವೆ ಹುಟ್ಟುಹಬ್ಬವನ್ನು ಉಪೇಂದ್ರ ಆಚರಿಸಿಕೊಂಡರು.
ಉಪೇಂದ್ರ ಅವರಿಗೆ ಚಂದನವನದ ತಾರೆಯರು, ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳುತ್ತಿದ್ದಾರೆ.
ಸದ್ಯ ಉಪೇಂದ್ರ ‘ತ್ರಿಶೂಲಂ’, ‘ಕಬ್ಜ’, ‘ಬುದ್ಧಿವಂತ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕಬ್ಜ ಚಿತ್ರತಂಡ ಜನ್ಮದಿನದ ಪ್ರಯುಕ್ತ ನಿನ್ನೆ ಟೀಸರ್ ಬಿಡುಗಡೆ ಮಾಡಿದೆ.
‘ಅನಂತನ ಅವತಾರ’ ಚಿತ್ರದಲ್ಲಿ ನಟಿಸುವ ಮೂಲಕ ಉಪೇಂದ್ರ ಬೆಳ್ಳಿತೆರೆ ಪ್ರವೇಶಿಸಿದರು. ಇದು ತೆರೆಕಂಡಿದ್ದು 1989ರಲ್ಲಿ. ಅವರು ನಿರ್ದೇಶಿಸಿದ ಮೊದಲ ಚಿತ್ರ ‘ತರ್ಲೆ ನನ್ಮಗ’. ಬಳಿಕ ಹಲವು ಸಿನಿಮಾಗಳನ್ನು ನಿರ್ದೇಶಿಸಿದ ಅವರು ‘ಎ’ ಸಿನಿಮಾದ ಮೂಲಕ ನಾಯಕ ನಟನಾದರು.
ಉಪ್ಪಿ ನಿರ್ದೇಶಿಸಿದ ‘ಓಂ’ ಸಿನಿಮಾ ಇಂದಿಗೂ ಸಿನಿಪ್ರಿಯರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಅವರು ಕೊನೆಯದಾಗಿ ನಿರ್ದೇಶಿಸಿದ ಚಿತ್ರ ‘ಉಪ್ಪಿ 2’. ಮತ್ತೆ ತಾವು ನಿರ್ದೇಶನದತ್ತ ಹೊರಳಿದ್ದಾರೆ. ಇದರ ನಡುವೆ ರಾಜಕೀಯ ರಂಗಕ್ಕೂ ಪ್ರವೇಶ ಮಾಡಿರುವ ಅವರು ಪ್ರಜಾಕೀಯ ಪಕ್ಷವನ್ನು ಸ್ಥಾಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.