ADVERTISEMENT

ಮನೆ ಊಟ ಕೋರಿ ಹೈಕೋರ್ಟ್ ಗೆ ನಟ ದರ್ಶನ್ ಅರ್ಜಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 14:11 IST
Last Updated 9 ಜುಲೈ 2024, 14:11 IST
<div class="paragraphs"><p>ನಟ ದರ್ಶನ್ ನ್ಯಾಯಾಲಯದಿಂದ&nbsp;</p></div>

ನಟ ದರ್ಶನ್ ನ್ಯಾಯಾಲಯದಿಂದ 

   

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ ಶ್ರೀನಿವಾಸ್, "ನನಗೆ ಮನೆ ಊಟ ಪಡೆಯಲು ಅನುಮತಿಸುವಂತೆ ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹ ಮೇಲ್ವಿಚಾರಕರಿಗೆ ನಿರ್ದೇಶಿಸಬೇಕು" ಎಂದು ಕೋರಿ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.

"ಜೈಲಿನಲ್ಲಿ ನೀಡಲಾಗುತ್ತಿರುವ ಆಹಾರ ಜೀರ್ಣಿಸಿಕೊಳ್ಳಲು ನನಗೆ ಆಗುತ್ತಿಲ್ಲ. ಜೈಲಿನ ಊಟದಿಂದಾಗಿ ಅತಿಸಾರ ಉಂಟಾಗಿದ್ದು ಪದೇ ಪದೇ ಭೇದಿ ಆಗುತ್ತಿದೆ. ಪರಿಣಾಮ ದೇಹದ ತೂಕ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಮನೆ ಆಹಾರ ತರಿಸಿಕೊಳ್ಳಲು ಜೈಲು ಅಧಿಕಾರಿಗಳಿಗೆ ಮೌಖಿಕವಾಗಿ ಮನವಿ ಮಾಡಿದ್ದೆ. ಆದರೆ, ಅವರು ಇದಕ್ಕೆ ಒಪ್ಪಿಲ್ಲ" ಎಂದು ದರ್ಶನ್ ಅರ್ಜಿಯಲ್ಲಿ ವಿವರಿಸಿದ್ದಾರೆ. ಈ ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

ADVERTISEMENT

"ಕರ್ನಾಟಕ ಬಂದೀಖಾನೆ ಕಾಯ್ದೆ-1963ರ ಕಲಂ 30ರ ಅನುಸಾರ ವಿಚಾರಣಾಧೀನ ಕೈದಿಗಳು ಮನೆಯಿಂದ ಆಹಾರ, ಹಾಸಿಗೆ, ಬಟ್ಟೆ, ಪುಸ್ತಕ... ಇತ್ಯಾದಿ ವಸ್ತುಗಳನ್ನು ತರಿಸಿಕೊಳ್ಳಲು ಅವಕಾಶವಿದೆ. ಇದನ್ನು ಕಾರಾಗೃಹ ಇಲಾಖೆಯ ಪೊಲೀಸ್ ಮಹಾ ನಿರ್ದೇಶಕರು ಪರಿಶೀಲಿಸಿ ಅನುಮತಿಸಬಹುದಾಗಿದೆ" ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ದರ್ಶನ್ 12 ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದರು. ತದನಂತರ 2024ರ ಜೂನ್ 22ರಿಂದ ನ್ಯಾಯಾಂಗ ಬಂಧನದಲ್ಲಿದ್ದು, ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃದಲ್ಲಿ ವಿಚಾರಣಾ ಕೈದಿಯಾಗಿದ್ದಾರೆ. ದರ್ಶನ್ ವಿರುದ್ಧ ಭಾರತೀಯ ದಂಡ ಸಂಹಿತೆ-1860ರ (ಐಪಿಸಿ) ಕಲಂ 302, 120ಬಿ, 201, 364, 355, 384, 143, 147, 148 ಮತ್ತು 149 ಅಡಿ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.