ಅದು ‘ಸ್ವಾರ್ಥರತ್ನ’ ಚಿತ್ರದ ಸುದ್ದಿಗೋಷ್ಠಿ. ಇದರಲ್ಲಿ ನಿರ್ದೇಶಕ ಅಶ್ವಿನ್ ಕೋಡಂಗೆ ರೆಟ್ರೊ ಮಾದರಿಯ ಹಾಡೊಂದನ್ನು ಚಿತ್ರೀಕರಿಸಿದ್ದಾರೆ. ಈ ಹಾಡನ್ನು ವಿಭಿನ್ನವಾಗಿ ಬಿಡುಗಡೆ ಮಾಡುವ ಉದ್ದೇಶದಿಂದ ಅವರು ರೆಟ್ರೊ ಕ್ಯಾಮೆರಾ ತಂದಿದ್ದರು. ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ ಅವರಿಗೆ ಈ ಕ್ಯಾಮೆರಾ ನೀಡಿದರು.
ರೆಟ್ರೊ ಕ್ಯಾಮೆರಾವನ್ನು ಮೆಲ್ಲನೆ ಸವರುತ್ತಾ ನೆನಪಿನ ಸುರುಳಿಗೆ ಜಾರಿದರು ಭಗವಾನ್. ಐವತ್ತು ವರ್ಷದ ಹಿಂದಿನ ಚಿತ್ರೀಕರಣವನ್ನು ಮೆಲುಕು ಹಾಕಿದರು. ‘ನಾವು ಚಿತ್ರರಂಗ ಪ್ರವೇಶಿಸಿದ ವೇಳೆ ಇದೇ ಕ್ಯಾಮೆರಾದಲ್ಲಿಯೇ ಚಿತ್ರೀಕರಣ ನಡೆಸುತ್ತಿದ್ದೆವು. ಬಳಿಕ ಬೆಲ್ಲೊಸ್ ಕ್ಯಾಮೆರಾ ಬಂತು. ಆ ನಂತರ ಡೆಬ್ರಿ ಕ್ಯಾಮೆರಾವನ್ನು ಚಿತ್ರೀಕರಣಕ್ಕೆ ಬಳಸಲಾಗುತ್ತಿತ್ತು’ ಎಂದು ವಿವರಿಸಿದರು.
‘ಕಸ್ತೂರಿ ನಿವಾಸ’ ಚಿತ್ರದಲ್ಲಿ ವರನಟ ರಾಜ್‌ಕುಮಾರ್ ಮತ್ತು ನಟಿ ಆರತಿ ಜೊತೆಗೂಡಿ ಹಾಡುವ ‘ನೀನು ಬಂದು ನಿಂತಾಗ...’ ಹಾಡನ್ನು ರೆಟ್ರೊ ಕ್ಯಾಮೆರಾದ ಮೂಲಕವೇ ಅವರು ಚಿತ್ರೀಕರಿಸಿದರಂತೆ. ‘ಕೆಆರ್‌ಎಸ್‌ನ ಬೃಂದಾವನ ಉದ್ಯಾನದಲ್ಲಿ ಈ ಹಾಡನ್ನು ಚಿತ್ರೀಕರಿಸಿದೆ. ಬೆಳಿಗ್ಗೆ 7ಗಂಟೆಯಿಂದ ಸಂಜೆ 5ಗಂಟೆವರೆಗೆ ಚಿತ್ರೀಕರಣಕ್ಕೆ ಅವಕಾಶ ಸಿಕ್ಕಿತ್ತು. ಆಗ ಬಿಸಿಲೇ ನನ್ನ ಶೂಟಿಂಗ್‌ಗೆ ಬೆಳಕಾಗಿತ್ತು. ಒಂದೇ ದಿನದಲ್ಲಿ ಹಾಡಿನ ಶೂಟಿಂಗ್ ಮುಗಿಸಿದೆ’ ಎಂದರು ನಗು ಚೆಲ್ಲಿದರು ಭಗವಾನ್.
‘ಸ್ವಾರ್ಥರತ್ನ’ ಸಿನಿಮಾದ ರೆಟ್ರೊ ಹಾಡು ವೀಕ್ಷಿಸಿದ ಅವರು, ‘ಬೃಂದಾವನ ಉದ್ಯಾನ ಆಗತಾನೆ ಅಭಿವೃದ್ಧಿ ಹೊಂದುತ್ತಿತ್ತು. ಈಗಿನಷ್ಟು ಸೌಲಭ್ಯಗಳು ಇರಲಿಲ್ಲ. ಈಗ ಡಿಜಿಟಲ್ ಕ್ಯಾಮೆರಾಗಳ ಯುಗ. ಆದರೆ, ರೆಟ್ರೊ ನೆನಪನ್ನು ಮರೆಯಲು ಸಾಧ್ಯವಿಲ್ಲ’ ಎಂದರು.
ಇದೇ ವೇಳೆ ಚಿತ್ರದ ನಾಯಕ ಆದರ್ಶ್ ಗುಂಡೂರಾಜ್ ಮತ್ತು ನಾಯಕಿ ಹಿತಿಷಾ ವರ್ಷ ವೇದಿಕೆ ಮೇಲೆ ‘ನೀನು ಬಂದು ನಿಂತಾಗ...’ ಹಾಡಿಗೆ ಹೆಜ್ಜೆ ಹಾಕಿದರು. ಈ ನೃತ್ಯಕ್ಕೆ ಭಗವಾನ್ ಅವರೇ ಆ್ಯಕ್ಷನ್ ಕಟ್ ಹೇಳಿದ್ದು ವಿಶೇಷವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.