ಒಂದು ಸತ್ಯ
‘ಬಸಂತ್ ಬಹಾರ್’ ಹಿಂದಿ ಸಿನಿಮಾಕ್ಕೆಂದು ಶಂಕರ್ ಜೈಕಿಶನ್ ಸ್ವರ ಸಂಯೋಜಿಸಿದ ಹಾಡೊಂದನ್ನು ಭೀಮಸೇನ್ ಜೋಷಿ ಹಾಡಲು ಒಪ್ಪಿದರು. ಅವರು ಹಾಡಲು ಒಪ್ಪಿದ್ದೇ ದೊಡ್ಡದು. ಶೈಲೇಂದ್ರ ಬರೆದಿದ್ದ ಆ ಹಾಡನ್ನು ಮನ್ನಾಡೇ ಕೂಡ ಜೋಷಿ ಜತೆಯಲ್ಲಿ ಹಾಡಬೇಕಿತ್ತು. ಮನ್ನಾಡೆ ಆಗುವುದಿಲ್ಲವೆಂದು ಓಡಿಬಿಟ್ಟರು. ಆಮೇಲೆ ಅವರ ಪತ್ನಿ ಮನವೊಲಿಸಿ, ಹಾಡಲು ಒಪ್ಪಿಸಿದ್ದು.
‘ಕೇತಕಿ ಗುಲಾಬ್ ಜೂಹಿ’ ಎಂಬ ಆ ಗೀತೆಗೆ ಭೀಮಸೇನ್ ಜೋಷಿ ತಮ್ಮೆಲ್ಲ ಶಾಸ್ತ್ರೀಯ ವರಸೆಗಳನ್ನು ಸೇರಿಸಿ ಜೀವ ತುಂಬಿದರಾದರೂ, ನಾಯಕನಿಗಾಗಿ ಸಾಫ್ಟ್ ಆಗಿ ಹಾಡಿದ ಮನ್ನಾಡೆ ಅವರ ಕಂಠವೇ ಸಿನಿಮಾದಲ್ಲಿ ನಡೆದ ಗೀತಾಸ್ಪರ್ಧೆಯಲ್ಲಿ (ಅದನ್ನು ಪಿಕ್ಚರೈಸ್ ಮಾಡಿದ್ದು ಸ್ಪರ್ಧೆಯ ದೃಶ್ಯಕ್ಕೆ) ಗೆದ್ದಿತು. ಇದನ್ನು ಸಂದರ್ಶನವೊಂದಲ್ಲಿ ಜೋಷಿ ಹೇಳಿಕೊಂಡಿದ್ದರು. ಈಗ ಇದೇ ಗೀತೆಗೆ ಕಾಲ ಕೂಡಿಬಂದಿದೆ. ಒಬ್ಬನೇ ಗಾಯಕ ಇಬ್ಬರು ದಿಗ್ಗಜ ಗಾಯಕರ ವರಸೆಗಳನ್ನೂ ನೆನಪಿಗೆ ತರುವಂತೆ ನಗರದಲ್ಲಿ ಹಾಡಲಿರುವುದು ವಿಶೇಷ.
ಇನ್ನೊಂದು ಸತ್ಯ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಯಾಗಿ ನಿವೃತ್ತರಾದ ಎ. ಮಣಿ ಹಾದಿಬದಿಯಲ್ಲಿ ಆಡುತ್ತಿದ್ದ ಮಕ್ಕಳ ಎಡಬಿಡಂಗಿ ಮನಸ್ಥಿತಿ ಕಂಡು ಕುತೂಹಲದ ಕಣ್ಣಾದರು. ಆ ಮಕ್ಕಳ ಹಿನ್ನೆಲೆ ವಿಚಾರಿಸಲಾಗಿ, ಅವರು ಯಾವುದ್ಯಾವುದೋ ಕಾರಣಕ್ಕೆ ದೀರ್ಘಾವಧಿ ಶಿಕ್ಷೆಗೆ ಗುರಿಯಾಗಿ ಜೈಲು ಸೇರಿದವರ ಮಕ್ಕಳೆನ್ನುವುದು ತಿಳಿಯಿತು. ಅವರಿಗೆ ಏನಾದರೂ ಮಾಡಬೇಕಲ್ಲ ಎಂಬ ಮಹದುದ್ದೇಶದಿಂದ ಮಣಿ ಇಬ್ಬರು ಮಕ್ಕಳನ್ನು ಕರೆದುಕೊಂಡು, ಕಟ್ಟಿದ ಸಂಸ್ಥೆಯೇ ‘ಸೋಕೇರ್’. ಈ ಸರ್ಕಾರೇತರ ಸಂಸ್ಥೆಯ ಎರಡು ಶಾಖೆಗಳು ಬೆಂಗಳೂರಿನಲ್ಲಿ (ರಾಜಾಜಿನಗರ ಹಾಗೂ ಲಗ್ಗೆರೆ), ಇನ್ನೊಂದು ಶಾಖೆ ಕಲಬುರ್ಗಿಯಲ್ಲಿವೆ. ಒಟ್ಟು 163 ಮಕ್ಕಳ ಭವಿಷ್ಯ ಕಟ್ಟಲು ಸಂಸ್ಥೆ ಪಣತೊಟ್ಟು 19 ವರ್ಷಗಳಾದವು. ಮಣಿ ಈಗ ಇಲ್ಲವಾದರೂ ಅವರ ಕನಸುಗಳು ಜೀವಂತ.
ದಿಗ್ಗಜ ಗಾಯಕರ ಹಾಡುಗಳಿಗೂ ಈ ಸಂಸ್ಥೆಗೂ ಈಗ ಸಂಬಂಧ ಸಂದಿದೆ.
ಇದೇ 29ರಂದು (ಶನಿವಾರ) ‘ಸುರ್ ಸಂಧ್ಯಾ’ ಎಂಬ ವಾರ್ಷಿಕ ಸಂಗೀತ ಕಾರ್ಯಕ್ರಮವನ್ನು ಸಾರಸ್ ಕಮ್ಯುನಿಕೇಷನ್ಸ್ ಆಯೋಜಿಸಿದೆ. ಮಲ್ಲೇಶ್ವರಂನ ಚೌಡಯ್ಯ ಸ್ಮಾರಕ ಭವನದಲ್ಲಿ ಸಂಜೆ 6.30ಕ್ಕೆ ಶುರುವಾಗುವ ಹಳೆಯ ಹಾಡುಗಳ ರಸಾನುಭವ ಏನಿಲ್ಲವೆಂದರೂ ಮೂರು ತಾಸು ಸಹೃದಯರನ್ನು ಕಟ್ಟಿಹಾಕಲಿದೆ.
ಜೀ ಮ್ಯೂಸಿಕ್, ಇಂಡಿಯನ್ ಐಡಲ್ ತರಹದ ರಿಯಾಲಿಟಿ ಷೋಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಅಥವಾ ಬಹುಮಾನ ಗೆದ್ದ ಯುವ ಪ್ರತಿಭೆಗಳನ್ನು ಈ ಕಾರ್ಯಕ್ರಮಕ್ಕೆಂದೇ ಒಪ್ಪಿಸಿದ್ದಾರೆ ಸಂಧ್ಯಾ ಎಸ್. ಕುಮಾರ್.
ಮೊದಲೇ ಉಲ್ಲೇಖಿಸಿದ ‘ಕೇತಕಿ ಗುಲಾಬ್ ಜೂಹಿ’ ಅಷ್ಟೇ ಅಲ್ಲದೆ ನೌಶಾದ್ ಸಂಯೋಜನೆಯ ‘ಮನ್ ತರಪತ್ ಹರಿ ದರ್ಶನ್ ಕೋ’, ರೋಷನ್ ಮಟ್ಟು ಹಾಕಿರುವ ‘ನಿಗಾಹೇ ಮಿಲಾನೆ ಕೋ..’, ಎಸ್.ಡಿ. ಬರ್ಮನ್ ಲಯಸಿದ್ಧಿಗೆ ಉದಾಹರಣೆಯಾದ ‘ಜಾನೆ ಕ್ಯಾ ತೂನೆ ಕಹೇಂ..’, ಎಲ್ಲರೂ ಎದ್ದು ಕುಣಿಯುವಂತೆ ಸಲೀಲ್ ಚೌಧರಿ ಸಂಯೋಜಿಸಿರುವ ‘ಚಡ್ ಗಯೊ ಪಾಪಿ ಬಿಚುಆ..’ ಈ ಎಲ್ಲ ನಿತ್ಯನೂತನ ಹಾಡುಗಳನ್ನು ಕಾರ್ಯಕ್ರಮದಲ್ಲಿ ಎದೆಗಿಳಿಸಿಕೊಳ್ಳಬಹುದು.
ಕಾರ್ಯಕ್ರಮಕ್ಕೆ ಟಿಕೆಟ್ ಏನೂ ಇಲ್ಲ. ಆದರೆ, ಸೋಕೇರ್ ಸಂಸ್ಥೆಗೆ ನೆರವು ನೀಡುವ ಕೊಡುಗೈಗಳಲ್ಲಿ ನಿಮ್ಮದೂ ಸೇರಬಹುದು.
2017ರ ‘ಸರೆಗಮಪ’ ಸ್ಪರ್ಧೆಯ ವಿಜೇತ ಜೀಮುತ್ ರಾಯ್, ಅದೇ ಕಾರ್ಯಕ್ರಮದ ಫೈನಲಿಸ್ಟ್ ಚಂದ್ರಿಕಾ ಭಟ್ಟಾಚಾರ್ಯ, ಆರ್ಯ ಅಂಬೇಕರ್, ಹೃಷಿಕೇಶ್ ರಾನಡೆ, ಆನಂದ್ ಬೆಹ್ಲ್– ಈ ಯುವಪ್ರತಿಭೆಗಳು ಹಾಡುಗಳಿಗೆ ಜೀವತುಂಬಲಿದ್ದಾರೆ. ಎರಡು ಕೀಬೋರ್ಡ್‌ಗಳು, ಎರಡು ತಬಲಾ, ಡೋಲಕ್, ಪ್ಯಾಡ್ಸ್, ಎರಡು ಗಿಟಾರ್‌ಗಳು, ಸಿತಾರ್, ಸಾರಂಗಿ, ಕೊಳಲು, ನಾಲ್ಕು ವಯೋಲಾ, ಏಳು ವಯಲಿನ್‌ಗಳು, ಡಿ ಬಾಸ್ ಅಂಡ್ ಸೆಲೊ ಇವೆಲ್ಲ ವಾದ್ಯಗಳು ಕಛೇರಿ ಕಳೆಗಟ್ಟಿಸಲಿದ್ದು, 27 ಹಳೆಯ ಮರೆಯಲಾಗದ ಹಾಡುಗಳನ್ನು ಎದೆಗಿಳಿಸಿಕೊಳ್ಳಿ.
ಮಕ್ಕಳೆಂಬ ಹೂಗಳಿಗೆ ಸೋಕೇರ್ ನೀರು
ಬೆಂಗಳೂರು, ಮೈಸೂರು ಹಾಗೂ ಕಲಬುರ್ಗಿ ಸೆಂಟ್ರಲ್ ಜೈಲು ಅಧಿಕಾರಿಗಳಿಗೆ ‘ಸೋಕೇರ್’ ಮಾಡುವ ಕೆಲಸ ಚೆನ್ನಾಗಿ ಗೊತ್ತು. ದೀರ್ಘಾವಧಿ ಜೈಲುಶಿಕ್ಷೆಗೆ ಗುರಿಯಾದವರ ಮಕ್ಕಳಿಗೆ ಅದು ಸೂರು ನೀಡಿದೆ. ಊಟ–ಬಟ್ಟೆಯ ಜೊತೆಗೆ ಧರ್ಮಾತೀತವಾದ ಸಂಸ್ಕಾರ, ಲಲಿತಕಲೆಗಳನ್ನು ಕಲಿಯಲು ಗೊಬ್ಬರವನ್ನೂ ಹಾಕುತ್ತಿರುವ ಸಂಸ್ಥೆ ಇದು. ಖಾಸಗಿ ಶಾಲೆಗಳಿಗೆ ಶುಲ್ಕ ಕೊಟ್ಟೂ ಮಕ್ಕಳನ್ನು ಸೇರಿಸಿರುವ ಮಹದುದ್ದೇಶದ ಸಂಸ್ಥೆ. ಹದಿನೆಂಟು ವರ್ಷದವಾಗುವವರೆಗೆ ಮಕ್ಕಳಿಗೆ ಇಲ್ಲಿ ನೆರಳು. ಆಮೇಲೆ ಅವರ ಭವಿಷ್ಯಕ್ಕೆ ಬೆಳಕು ತೋರಿಸಿ ದಾಟಿಸುವ ನಿಸ್ವಾರ್ಥ ಕೆಲಸ ಅವಿರತವಾಗಿ ನಡೆದಿದೆ. ಪ್ರತಿವರ್ಷ 10–15 ಮಕ್ಕಳು ಕಾಲೇಜು ಮೆಟ್ಟಿಲೇರಿ ಹೊರನಡೆಯುವಾಗಲೇ, ಅಷ್ಟೇ ಸಂಖ್ಯೆಯ ಮಕ್ಕಳು ಇಲ್ಲಿಗೆ ಸೇರಲು ಜೈಲು ಅಧಿಕಾರಿಗಳು ಪ್ರತಿ ಏಪ್ರಿಲ್‌ನಲ್ಲಿ ನೆರವಾಗುತ್ತಾರೆ. ಶೃಂಗೇರಿ ಶಂಕರ ಮಠ ಸಂಸ್ಥೆಯನ್ನು ದತ್ತು ಪಡೆದು, ಇನ್ನಷ್ಟು ಕಸುವು ತುಂಬಿದೆ. ಅಸಂಖ್ಯ ದಾನಿಗಳು ಹಾಗೂ ಸ್ವಯಂ ಸೇವಕರ ನಿಸ್ವಾರ್ಥ ಕೆಲಸವೇ ಇದರ ಜೀವಾಳ ಎನ್ನುವ ಸಂಸ್ಥೆಯ ಕಾರ್ಯದರ್ಶಿ, 75ರ ಹರೆಯದ ಆರ್. ವೆಂಕಟನಾಥನ್, ತಮ್ಮ ನಿವೃತ್ತಿಯ ನಂತರದ ದಶಕಗಳನ್ನು ಈ ಸಂಸ್ಥೆಗಾಗಿಯೇ ಮುಡಿಪಾಗಿಟ್ಟಿದ್ದಾರೆ.
ಒಳ್ಳೆಯ ಸಸಿಗಳನ್ನು ನೆಟ್ಟು, ಅವು ಫಲ ಕೊಡುವ ಹೊತ್ತಿಗೆ ಇನ್ನೊಂದು ನೆಲೆಗೆ ದಾಟಿಸುವ ಸುಖವನ್ನು ಸಂಸ್ಥೆಯ ಅಧ್ಯಕ್ಷ ರಮೇಶ್ ಹಂಚಿಕೊಂಡರು. ‘ಸೋಕೇರ್’ ಪಯಣದ ಅಷ್ಟೂ ಹೆಜ್ಜೆಗುರುತುಗಳು https://socare.ngo ವೆಬ್‌ಸೈಟ್‌ನಲ್ಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.