ADVERTISEMENT

ಕಾಂತಾರದಿಂದ ದೊಡ್ಡ ಚಿತ್ರಗಳಿಗೆ ಹಾರ್ಟ್ ಅಟ್ಯಾಕ್: ರಿಷಬ್ ನಟನೆಗೆ ಆರ್‌ಜಿವಿ ಸಲಾಂ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಅಕ್ಟೋಬರ್ 2022, 10:04 IST
Last Updated 20 ಅಕ್ಟೋಬರ್ 2022, 10:04 IST
ರಿಷಬ್ ಶೆಟ್ಟಿ ಮತ್ತು ರಾಮ್ ಗೋಪಾಲ್ ವರ್ಮಾ
ರಿಷಬ್ ಶೆಟ್ಟಿ ಮತ್ತು ರಾಮ್ ಗೋಪಾಲ್ ವರ್ಮಾ   

ಬೆಂಗಳೂರು: ನಟ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ’ ಸಿನಿಮಾಕ್ಕೆ ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕಾಂತಾರ ಸಿನಿಮಾ ನೂರಾರು ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಪರ ಭಾಷಾ ನಟ –ನಟಿಯರು ಸೇರಿದಂತೆ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.

ಇದೀಗ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ‘ಕಾಂತಾರ’ ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

‘ದೊಡ್ಡ ಬಜೆಟ್​​ನ ಸಿನಿಮಾಗಳು ಬಂದರೆ ಮಾತ್ರ ಜನರು ಥಿಯೇಟರ್​ಗೆ ಬರುತ್ತಾರೆ ಎಂಬ ಕಟ್ಟುಕತೆಯನ್ನು ರಿಷಬ್ ಶೆಟ್ಟಿ ಸುಳ್ಳು ಮಾಡಿದ್ದಾರೆ. ಮುಂದಿನ ಹಲವು ದಶಕಗಳಿಗೆ ಕಾಂತಾರ ಚಿತ್ರ ಒಂದೊಳ್ಳೆ ಪಾಠ’ ಎಂದು ಆರ್​ಜಿವಿ ಟ್ವೀಟ್ ಮಾಡಿದ್ದಾರೆ.

‘₹300, ₹400, ₹500 ಕೋಟಿ ಬಜೆಟ್ ಸಿನಿಮಾಗಳು ‘ಕಾಂತಾರ’ ಕಲೆಕ್ಷನ್ ಎಂಬ ಹಾರ್ಟ್​ ಅಟ್ಯಾಕ್​ನಿಂದ ಮೃತಪಟ್ಟಿವೆ. ‘ಡೆವಿಲ್’ ​ರಿಷಬ್ ಶೆಟ್ಟಿಗೆ ಧನ್ಯವಾದ ಹೇಳಬೇಕು. ದೊಡ್ಡ ಬಜೆಟ್​ ಸಿನಿಮಾಗಳು ಕಾಂತಾರದ ಭರ್ಜರಿ ಕಲೆಕ್ಷನ್​ನಿಂದ ರಾತ್ರೋರಾತ್ರಿ ಕಾಲ್ಕಿತ್ತಿವೆ. ಕಾಂತಾರ ಎಂಬ ಒಂದೊಳ್ಳೆಯ ಪಾಠವನ್ನು ಹೇಳಿದ ನಿಮಗೆ ಧನ್ಯವಾದ. ಚಿತ್ರರಂಗದ ಎಲ್ಲರೂ ನಿಮಗೆ ಟ್ಯೂಷನ್ ಹಣವನ್ನು ಪಾವತಿಸಬೇಕು’ ಎಂದು ಆರ್​ಜಿವಿ ಕೊಂಡಾಡಿದ್ದಾರೆ.

‘ಕಾಂತಾರ’, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷದ ಕಥೆಯಾಗಿದ್ದು, ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ರಿಷಬ್‌ ಶೆಟ್ಟಿ ಜೊತೆಗೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಹೊಂಬಾಳೆ ಫಿಲಂಸ್‌ ಚಿತ್ರವನ್ನು ನಿರ್ಮಿಸಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.